ಕನ್ನಡಪ್ರಭ ವಾರ್ತೆ ಬಂಟ್ವಾಳ
ಕೌಟುಂಬಿಕ ಕಲಹದ ಕಾರಣದಿಂದ ಬೀದಿಗೆ ಬಿದ್ದು, ಹಲವು ವರ್ಷ ಮಾಣಿಯ ಜೋಪಡಿಯಲ್ಲಿ ವಾಸ್ತವ್ಯವಿದ್ದು ದೈಗೋಳಿ ಆಶ್ರಮ ಸೇರಿದ್ದ ಮಂಗಳೂರಿನ ವೆರೈಟಿ ಸಾರಿ ಸದನ್ ಮಾಲಕ ಗಣೇಶ ಪ್ರಭು (೮೧) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಗಣೇಶ ಪ್ರಭು ಮಂಗಳೂರಿನಲ್ಲಿ ಬಟ್ಟೆ ವ್ಯಾಪಾರ, ಹೋಟೆಲ್ ವ್ಯವಹಾರ ನಡೆಸುತ್ತಿದ್ದವರು 2004ರಲ್ಲಿ ತಮ್ಮ ಕೌಟುಂಬಿಕ ಕಲಹದಿಂದ ಕುಟುಂಬದಿಂದ ಒಬ್ಬಂಟಿಯಾದರು. ಕಳೆದ ನಾಲ್ಕೈದು ವರ್ಷಗಳಿಂದ ಮಾಣಿಯ ಪಾಳು ಡೇರೆಯಲ್ಲಿ ವಾಸ್ತವ್ಯ ವಿದ್ದರು. ಈ ಟಾರ್ಪಲ್ ಗೂಡಿನೊಳಗೆ ಅಸಹಾಯಕತೆಯ ಜೀವನ ನಡೆಸುತ್ತಿದ್ದ ಗಣೇಶ ಪ್ರಭುಗಳಿಗೆ ಸ್ಥಳೀಯ ಬೇಕರಿ ಮಾಲಕರಾದ ಮಧುಸೂದನ್ ಪೈ, ಗಂಗಾಧರ್ ಅವರು ಮಾನವೀಯ ಸ್ಪಂದನೆ ನೀಡುತ್ತಿದ್ದರು.ಗಣೇಶ ಪ್ರಭುಗಳ ಈ ಕರುಣಾಜನಕ ಕಥೆ ʼವೆರೈಟಿ ಸಾರಿ ಸದನ್ ಮಳಿಗೆ ಮಾಲಕ ಈಗ ಡೇರೆಯಲ್ಲಿʼ ಎನ್ನುವ ಶೀರ್ಷಿಕೆಯಲ್ಲಿ ಫೆಬ್ರವರಿ ೧೪ರಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪತ್ರಿಕೆಯ ವರದಿ ವೈರಲ್ ಆಗಿದ್ದು ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸಿತ್ತು, ತಹಸೀಲ್ದಾರ್ ಅರ್ಚನಾ ಭಟ್ ಅವರು ಸ್ವತಃ ಡೇರೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಅವರ ಸೂಚನೆಯಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಶ್ರಮಕ್ಕೆ ಸೇರಿಸಲು ಸಿದ್ದತೆ ನಡೆಸಿದರು. ಇದೇ ವೇಳೆ ಕನ್ನಡಪ್ರಭ ವರದಿಯನ್ನು ನೋಡಿದ ಮಂಜೇಶ್ವರ ದೈಗೋಳಿಯ ಸಾಯಿನಿಕೇತನ ಆಶ್ರಮದ ಡಾ. ಉದಯ ಕುಮಾರ್ ಅವರು ಮಾಣಿಗೆ ಬಂದು, ಅನಾಥರಾಗಿರುವ ಗಣೇಶ್ ಪ್ರಭುಗಳನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆಯಿಂದ ತೊಡಗಿ ಅವರ ಆರೈಕೆಗೆ ಸಕಲವ್ಯವಸ್ಥೆ ಮಾಡಿದ್ದರು. ಕಳೆದ ಹದಿನೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರು ಗುರುವಾರ ರಾತ್ರಿ ನಿಧನ ಹೊಂದಿದರು. ಶುಕ್ರವಾರ ಅವರ ಅಂತಿಮಸಂಸ್ಕಾರ ಕ್ರಿಯೆಗಳು ಉಪ್ಪಳ ಸಮೀಪದ ಚೆರುಗೋಳಿ ಸ್ಮಶಾನದಲ್ಲಿ ನಡೆದಿದೆ.
ಮಾನವೀಯತೆ ಮರೆತ ಸಂಬಂಧಿಕರುಗಣೇಶ ಪ್ರಭುಗಳ ಸಂಬಂಧಿಕರು ಮಂಗಳೂರಿನಲ್ಲಿದ್ದು, ಗಣೇಶ ಪ್ರಭುಗಳ ಅಂತಿಮ ಕಾಲಕ್ಕೆ ಅವರ ಆರೈಕೆ ಬಗ್ಗೆ ತಿಳಿಸಲಾಗಿತ್ತು. ಆದರೆ ಅವರು ಈ ಕುರಿತು ಸ್ಪಂದನೆ ನೀಡಿರಲಿಲ್ಲ. ಗುರುವಾರ ರಾತ್ರಿ ನಿಧನರಾದ ತಕ್ಷಣ ಅವರ ಮನೆಮಂದಿಯನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತಾದರೂ, ಮಾನವೀಯತೆ ತೋರಿಲ್ಲ. ಹೀಗಾಗಿ ಆಶ್ರಮದ ಡಾ. ಉದಯ ಕುಮಾರ್ ಅವರೇ ಮುತುವರ್ಜಿ ವಹಿಸಿ, ಬಂಟ್ವಾಳ ತಹಸೀಲ್ದಾರರ ನಿರ್ದೇಶನದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದ ವೃದ್ಧ ಗಣೇಶ ಪ್ರಭುಗಳ ಆರೈಕೆ ವಿಚಾರದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಮಾನವೀಯ ಸ್ಪಂದನೆ ನೀಡಿದ್ದಾರೆ. ಕಳೆದ ಫೆ.೧೪ ರಂದು ಗಣೇಶ ಪ್ರಭುಗಳು ಆಶ್ರಮ ಸೇರಿದ್ದರಿಂದ ತೊಡಗಿ ನಿರಂತರವಾಗಿ ಪ್ರಭುಗಳ ಆರೋಗ್ಯ ಸ್ಥಿತಿ ವಿಚಾರಿಸುತ್ತಿದ್ದರು. ಗಣೇಶ ಪ್ರಭುಗಳ ಆರೋಗ್ಯ ಕ್ಷೀಣಿಸಿದ್ದ ಸಂದರ್ಭದಲ್ಲಿ ವೈಯುಕ್ತಿಕವಾಗಿ ಧನಸಹಾಯ ಒದಗಿಸಿದ್ದ ತಹಶೀಲ್ದಾರ್ ಅರ್ಚನಾ ಭಟ್, ಪ್ರಭುಗಳ ಅಂತಿಮ ಸಂಸ್ಕಾರಕ್ಕೂ ಆರ್ಥಿಕ ನೆರವು ಒದಗಿಸಿದ್ದಾರೆ ಎಂದು ಆಶ್ರಮದ ಡಾ. ಉದಯ ಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.