ಬಿ.ಎಸ್.ಜಯರಾಮು
ಐತಿಹಾಸಿಕ, ಪುರಾಣ ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ಆರಂಭವಾಗಿರುವ ಭಾರೀ ದನಗಳ ಜಾತ್ರೆಯಲ್ಲಿ ವಿವಿಧ ತಳಿಗಳ ರಾಸುಗಳು ಗಮನ ಸೆಳೆದಿದ್ದು, ಜಾತ್ರೆ ಕಳೆಗಟ್ಟಿದೆ.
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆ.26 ರಂದು ಆರಂಭವಾದ ದನಗಳ ಜಾತ್ರೆಯಲ್ಲಿ, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರೈತರು ರಾಸುಗಳನ್ನು ಜಾತ್ರೆಯಲ್ಲಿ ಕಟ್ಟುವುದು ಹಿಂದಿನಿಂದಲೂ ರೂಢಿಯಲ್ಲಿದೆ.ರೈತರು ಪ್ರತಿಷ್ಠೆಗಾಗಿ ಜಾತ್ರೆಯ ಪ್ರಮುಖ ಬೀದಿಗಳಲ್ಲಿ ಸಾವಿರಾರು ರು. ಖರ್ಚು ಮಾಡಿ ವಾದ್ಯಗೋಷ್ಠಿಗಳೊಂದಿಗೆ ರಾಸುಗಳನ್ನು ಮೆರವಣಿಗೆ ಮಾಡಿ ಜಾತ್ರೆಯಲ್ಲಿ ಕಟ್ಟಿದ್ದು, ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದೊಂದಿಗೆ ಪೆಂಡಾಲ್ ನಿರ್ಮಿಸಿ ರಾಸುಗಳ ಪ್ರದರ್ಶನ ಮಾಡಲಾಗುತ್ತಿದೆ. ಲಕ್ಷಾಂತರ ರು. ಬೆಲೆ ಬಾಳುವ ರಾಸುಗಳು ಜಾತ್ರೆಯಲ್ಲಿ ಜನರ, ರೈತರ ಕಣ್ಮನ ಸೆಳೆಯುತ್ತಿವೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 50 ಸಾವಿರ ರು. ಗಳಿಂದ 1, 2,3,4,5,10,15 ಹಾಗೂ 20 ಲಕ್ಷ ರು. ಗಳವರೆಗಿನ ದನಗಳ ಪ್ರದರ್ಶನ ಮತ್ತು ಮಾರಾಟ ಬಲು ಜೋರಾಗಿ ನಡೆಯುತ್ತಿದೆ. ಎತ್ತ ನೋಡಿದರೂ ರಾಸುಗಳು, ಯಾವ ಕಡೆಗೂ ಆಲಿಸಿದರೂ ರಾಸುಗಳ ಗೆಜ್ಜೆನಾದ ಕೇಳಿಸುತ್ತಿದೆ.
ಪಶು ಸಂಗೋಪನಾ ಇಲಾಖೆ, ರೇಷ್ಮೆ, ತೋಟಗಾರಿಕೆ, ಕೃಷಿ, ಅರಣ್ಯ, ಶಿಕ್ಷಣ, ಕಾವೇರಿ ನೀರಾವರಿ ನಿಗಮ, ಸೆಸ್ಕ್, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ರೈತರು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಜತೆಗೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಜಾತ್ರೆಗೆ ಆಗಮಿಸುವವರ ಗಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ನಡೆಯುವ ದನಗಳ ಜಾತ್ರೆಯಲ್ಲಿ ಬೇಬಿ ಬೆಟ್ಟದ ಜಾತ್ರೆಗೆ ವಿಶೇಷ ಹೆಸರಿದೆ. ಹಳ್ಳಿಕಾರ್, ಅಮೃತ್ ಮಹಲ್ ತಳಿ, ಬಿಳಿ ಹಾಗೂ ಕಪ್ಪು ಬಣ್ಣದ ರಾಸುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರುತ್ತವೆ. ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ 15 ವಿಭಾಗಗಳಲ್ಲಿ ಒಟ್ಟು 91 ಜೋಡಿಗಳಿಗೆ ಚಿನ್ನವನ್ನು ಬಹುಮಾನವನ್ನಾಗಿ ನೀಡುವ ಮೂಲಕ ರಾಸುಗಳ ಮಾಲೀಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಹಿಂದಿನ ವರ್ಷಗಳಿಗಿಂತಲೂ ಹೆಚ್ಚು (3 ಸಾವಿರಕ್ಕೂ ಹೆಚ್ಚು ರಾಸುಗಳು) ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.