ಕೊಪ್ಪದಲ್ಲಿಯೂ ಕೋಲಾಹಲ ಸೃಷ್ಟಿಸಿದ ವರುಣ

KannadaprabhaNewsNetwork |  
Published : Jul 31, 2024, 01:03 AM IST
ಬಸ್ರಿಕಟ್ಟೆಯ ಬಿ.ಎಸ್. ಸತೀಶ್‌ರವರ ಅಡಿಕೆ ತೋಟದಲ್ಲಿ ಬೃಹತ್ ಮರ ಬಿದ್ದು ಸುಮಾರು ೭೫ಕ್ಕಿಂತಲೂ ಹೆಚ್ಚು ಅಡಿಕೆ ಮರಗಳಿಗೆ ಹಾನಿಯಾಗಿದೆ.  | Kannada Prabha

ಸಾರಾಂಶ

ನಿರಂತರವಾಗಿ ಸುರಿಯುತ್ತಿರುವ ಪುಷ್ಯ ಮಳೆ ಆರ್ಭಟಕ್ಕೆ ಹಳ್ಳ, ಕೊಳ್ಳ, ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಕೊಪ್ಪ

ನಿರಂತರವಾಗಿ ಸುರಿಯುತ್ತಿರುವ ಪುಷ್ಯ ಮಳೆ ಆರ್ಭಟಕ್ಕೆ ಹಳ್ಳ, ಕೊಳ್ಳ, ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಸೃಷ್ಟಿಸಿದೆ.

ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಪ್ಪ ಸಿದ್ದರಮಠ ರಸ್ತೆ ಮುಸರೆಹಳ್ಳ, ಕುದುರೆಗುಂಡಿ ಆರ್ಡಕ್ ಎಸ್ಟೇಟ್ ಬಳಿ ಹರಿಯುವ ಕಪಿಲ ಹಳ್ಳ ತುಂಬಿ ಹರಿದಿದ್ದು ರಸ್ತೆಗೆ ನೀರು ಬಂದ ಹಿನ್ನೆಲೆ ಜನಸಂಚಾರ ಮತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಹರಿಹರಪುರ ಗ್ರಾಮದ ಸೂರ್ಳಿ ಮಂಜಪ್ಪನವರ ಮನೆ ಬಳಿ ಧರೆ ಕುಸಿದಿದೆ. ಮೇಗುಂದ ಹೋಬಳಿ ಅಬ್ಬಿಕಲ್ಲು ಗಣಪತಿ ದೇವಸ್ಥಾನದ ಹತ್ತಿರದ ಕೊಗ್ರೆಯಿಂದ ಬಸ್ರಿಕಟ್ಟೆಗೆ ಹೋಗುವ ರಸ್ತೆಯು ಕುಸಿತ ಕಂಡಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಜಯಪುರ, ಅಲಗೇಶ್ವರ ರಸ್ತೆ ನಾರಾಯಣ ಆಚಾರ್ಯನವರ ವಾಸದ ಮನೆ ಹಿಂಬದಿ ಧರೆ ಕುಸಿತಗೊಂಡಿದ್ದು ಮನೆ ವಾಸಕ್ಕೆ ಯೋಗ್ಯವಲ್ಲದೆ ಇರುವುದರಿಂದ ಮನೆಯವರನ್ನು ಹತ್ತಿರದ ಶಾಲೆಗೆ ಸ್ಥಳಾಂತರಿಸಲಾಗಿದೆ.

ಬಸ್ರಿಕಟ್ಟೆ-ಚೆನ್ನೆಕಲ್ಲು ರಸ್ತೆ ಹಾನಿಯಾಗಿದೆ. ಬಸ್ರಿಕಟ್ಟೆ ಬಿ.ಎಸ್. ಸತೀಶ್‌ರವರ ಅಡಿಕೆ ತೋಟದಲ್ಲಿ ಬೃಹತ್ ಮರ ಬಿದ್ದು ಸುಮಾರು ೭೫ಕ್ಕಿಂತಲೂ ಹೆಚ್ಚು ಅಡಿಕೆ ಮರಗಳಿಗೆ ಹಾನಿಯಾಗಿದೆ.

ತಲಮಕ್ಕಿ ಗಣೇಶನಗರದಲ್ಲಿ ಹನುಮಯ್ಯನವರ ಮನೆ ಹಾನಿಯಾಗಿದೆ. ಕಸಬಾ ಹೋಬಳಿ ಬೊಮ್ಲಾಪುರ ಗ್ರಾಮದ ಹೊಕ್ಕಳಿಕೆಯಿಂದ ಹೊಲಗೋಡು ಸಂಪರ್ಕಿಸುವ ರಸ್ತೆಯು ಕುಸಿತವುಂಟಾಗಿದೆ.ಹರಿಹರಪುರ ದೇವೇಂದ್ರ ಮತ್ವಾನಿಯವರ ಮನೆ ಸಮೀಪ ಹಾಗೂ ಗ್ರಾಮ ಪಂಚಾಯಿತಿ ಅಂಗಡಿ ಮಳಿಗೆಗಳವರೆಗೂ ಪ್ರವಾಹದಂತೆ ನೀರು ಬಂದಿದ್ದು ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಇನ್ನು ಅನೇಕ ಭಾಗಗಳಲ್ಲಿ ಧರೆ ಕುಸಿತ, ಮನೆ ಹಾನಿ, ಮರ ಬೀಳುವಿಕೆ, ವಿದ್ಯುತ್ ಲೈನ್‌ಗಳಿಗೆ ಹಾನಿಗಳು ಮುಂದುವರೆದಿದ್ದು ಕೊಪ್ಪ ಸುತ್ತಮುತ್ತಲ ಅನೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೊಪ್ಪದಿಂದ ಜಯಪುರಕ್ಕೆ ತೆರಳುವ ನಾರ್ವೆ ಹಾಗೂ ಆರ್ಡಿಕೊಪ್ಪದ ಹತ್ತಿರ ಮುಖ್ಯರಸ್ತೆಯಲ್ಲಿ ತುಂಗಾನದಿ ನೀರು ಬಂದಿದ್ದು ಮುಂಜಾಗ್ರತ ಕ್ರಮವಾಗಿ ಯಾವುದೇ ವಾಹನ ಸಂಚರಿಸದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಸಾರ್ವಜನಿಕರು ಬದಲಿ ರಸ್ತೆಯಾಗಿ ಅಂದಗಾರು, ಕಲ್ಕೆರೆ ಮುಖಾಂತರ ತೆರಳಲು ಜಯಪುರ ಭಾಗದದಿಂದ ಬರುವವರು ಬೆಳಗೊಳದಿಂದ ಬಳಗ ಊರಿನ ಮುಖಾಂತರ ಕೊಪ್ಪಕ್ಕೆ ಬರಲು ಬದಲಿ ರಸ್ತೆ ಬಳಸಬೇಕು ಎಂದು ಕೊಪ್ಪ ಪೊಲೀಸ್ ಠಾಣಾ ಪಿಎಸ್‌ಐ ಬಸವರಾಜ್ ಜಿ.ಕೆ.ರವರು ಮಾಹಿತಿ ನೀಡಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ಕೊಪ್ಪ ೧೫೫ ಮಿ.ಮೀ, ಹರಿಹರಪುರ ೧೮೪ ಮಿ.ಮೀ, ಜಯಪುರ ೧೦೧.೮ ಮಿ.ಮೀ, ಬಸ್ರಿಕಟ್ಟೆ ೨೧೫.೨ ಮಿ.ಮೀ, ಕಮ್ಮರಡಿ ೧೯೨.೪ ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಕಳೆದ ವರ್ಷ ಜು.೩೦ರವರೆಗೆ ಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ೪೮.೭೫ ಇಂಚು ಮಳೆ ಪ್ರಮಾಣ ದಾಖಲಾಗಿದ್ದು ೨೦೨೩ರ ಡಿಸೆಂಬರ್ ಅಂತ್ಯಕ್ಕೆ ೬೫.೪೦ ಇಂಚು ಮಳೆ ಪ್ರಮಾಣ ದಾಖಲಾಗಿತ್ತು. ಈ ವರ್ಷ ಜು.೩೦ರವರೆಗೆ ೯೧.೧೦ ಇಂಚು ಮಳೆ ಪ್ರಮಾಣ ದಾಖಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ