ಕುಷ್ಟಗಿ: ಪಟ್ಟಣದಲ್ಲಿ ವರುಣ ಆರ್ಭಟದಿಂದ ದೀಪಾವಳಿ ಹಬ್ಬದ ಅಂಗವಾಗಿ ಅಗತ್ಯ ಸಾಮಗ್ರಿಗಳ ವ್ಯಾಪಾರ ಮಾಡಲು ಬಂದಿದ್ದ ರೈತರು, ವ್ಯಾಪಾರಿಗಳು ಗ್ರಾಹಕರು ಪರದಾಡುವಂತಾಯಿತು.
ದೀಪಾವಳಿಯ ಹಿನ್ನೆಲೆಯಲ್ಲಿ ನೂರಾರು ವ್ಯಾಪಾರಸ್ಥರು, ರೈತರು ಬಾಳೆಗೊನೆ, ಕುಂಬಳಕಾಯಿ, ಕಬ್ಬು, ಅಡಕೆ ಹೂವು, ಚೆಂಡು ಹೂವು, ಹಣ್ಣು ಹಂಪಲುಗಳ ಮಾರಾಟಕ್ಕೆ ತಂದಿದ್ದರು. ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆಗಳ ಕಾಲ ಏಕಾಏಕಿ ಸುರಿದ ಮಳೆಯಿಂದ ಕಂಗಾಲಾದರು.ಪಟ್ಟಣದಲ್ಲಿ ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ವ್ಯಾಪಾರಿಗಳು ಅನಿವಾರ್ಯವಾಗಿ ಪಟ್ಟಣದ ಪೊಲೀಸ್ ಠಾಣೆ ಮುಂದೆ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಾರೆ. ಮಳೆ ಸುರಿದಿದ್ದರಿಂದ ರಸ್ತೆಯ ತುಂಬೆಲ್ಲ ನೀರು ಹರಿಯಿತು. ಮಾರಾಟಕ್ಕಿಟ್ಟ ಸಾಮಗ್ರಿಗಳನ್ನು ರಸ್ತೆಯ ಮಧ್ಯೆಯೇ ಬಿಟ್ಟು ಹೋಗುವಂತಾಯಿತು. ಮಳೆ ಮುಗಿದ ಬಳಿಕವೂ ಕೆಲವರು ಕಡಿಮೆ ಬೆಲೆಗೆ ತಾವು ತಂದ ವಸ್ತುಗಳನ್ನು ಮಾರಾಟ ಮಾಡಿ ಹೊರಡುವ ಧಾವಂತ ತೋರಿದರು.ತುಂಬಿದ ಚರಂಡಿಗಳು:
ಅರ್ಧ ಗಂಟೆ ಕಾಲ ಜೋರಾಗಿ ಸುರಿದ ಮಳೆಯಿಂದ ಪಟ್ಟಣದಲ್ಲಿನ ಚರಂಡಿಗಳು ತುಂಬಿ ಹರಿದವು. ಹೀಗಾಗಿ ರಸ್ತೆಯಲ್ಲಿ ರಾಡಿ ನೀರು, ಚರಂಡಿಯ ಕಸ-ಕಡ್ಡಿಗಳು, ಪ್ಲಾಸ್ಟಿಕ್ ವಸ್ತುಗಳು ಬಂದವು. ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.ನಾವು ನಮ್ಮ ತೋಟದಿಂದ ಕಬ್ಬು ಮತ್ತು ಬಾಳೆಗೊನೆಯನ್ನು ತಂದು ವ್ಯಾಪಾರ ಮಾಡಲು ಬಂದಿದ್ದೇವು. ನಿನ್ನೆಯಿಂದ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಏಕಾಏಕಿಯಾಗಿ ಸುರಿದ ಮಳೆಯಿಂದಾಗಿ ಮಾರುಕಟ್ಟೆ ಅಸ್ತವ್ಯಸ್ತವಾಯಿತು. ಗ್ರಾಹಕರು ವಾಪಸ್ ಹೋದರು ಎಂದು ರೈತ ಮಹಿಳೆ ಗಂಗವ್ವ ತಳವಾರ ತಿಳಿಸಿದ್ದಾರೆ.
ಕುಷ್ಟಗಿಯಲ್ಲಿ ಸುರಿದ ಮಳೆಯಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಹೂವು, ಕಾಯಿ, ಹಣ್ಣಿನ ವ್ಯಾಪಾರಸ್ಥರು ತೊಂದರೆಗೊಳಗಾದರು. ಮಳೆಯಿಂದ ವ್ಯಾಪಾರ ಹಾಳಾಯಿತು. ನೀರಿನಲ್ಲಿ ತೊಯ್ದ ಹೂವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಯಿತು ಎಂದು ಗ್ರಾಹಕ ನಿಂಗಪ್ಪ ಕಡೇಕೊಪ್ಪ ತಿಳಿಸಿದ್ದಾರೆ.