ಹಾಸನದಲ್ಲಿ ನಟ ದರ್ಶನ್ ವಿರುದ್ಧ ವೀರಶೈವ ಮಠಾಧೀಶರ ಪ್ರತಿಭಟನೆ

KannadaprabhaNewsNetwork |  
Published : Jun 15, 2024, 01:01 AM IST
14ಎಚ್ಎಸ್ಎನ್12 : ದರ್ಶನ್‌ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹಾಸನ ನಗರದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ವೀರಶೈವ ಸಮಾಜದ ಮುಖಂಡರು ಹಾಗೂ ವಿವಿಧ ಮಠಾಧೀಶರು. | Kannada Prabha

ಸಾರಾಂಶ

ಯಾವುದೇ ಒತ್ತಡಕ್ಕೂ ಮಣಿಯದೆ ಚಲನಚಿತ್ರ ನಟ ಮತ್ತು ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ತಕ್ಷಣವೇ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ, ವಿವಿಧ ಮಠದ ಸ್ವಾಮೀಜಿಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಶುಕ್ರವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಸಮುದಾಯ ಮುಖಂಡರು, ವಿವಿಧ ಸಂಘ ಭಾಗಿ । ಜಿಲ್ಲಾಡಳಿತಕ್ಕೆ ಮನವಿ । ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ಯಾವುದೇ ಒತ್ತಡಕ್ಕೂ ಮಣಿಯದೆ ಚಲನಚಿತ್ರ ನಟ ಮತ್ತು ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ತಕ್ಷಣವೇ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕು. ಪತ್ನಿಗೆ ಉದ್ಯೋಗ ಕೊಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ, ವಿವಿಧ ಮಠದ ಸ್ವಾಮೀಜಿಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಅರಕಲಗೂಡು ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ‘ಇದೇ ವೇಳೆ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಮತ್ತು ಈತನ ಸ್ನೇಹಿತೆ ಪವಿತ್ರಾಗೌಡ ಹಾಗೂ ೧೫ ಮಂದಿ ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಸಿನಿಮಾ ಶೈಲಿಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಖಂಡನೀಯವಾಗಿದೆ. ನಾಗರಿಕ ಸಮಾಜವು ಇದನ್ನು ಒಪ್ಪಲು ಸಾಧ್ಯವಿಲ್ಲ. ರೇಣುಕಾಸ್ವಾಮಿ ವೀರಶೈವ ಸಮುದಾಯಕ್ಕೆ ಸೇರಿದವರು. ಅವರು ವಯೋವೃದ್ಧ ತಂದೆ ತಾಯಿ ಹಾಗೂ ಗರ್ಭಿಣಿ ಪತ್ನಿ ಇದ್ದು, ಈ ವಿಚಾರ ಕೇಳಿ ಇವರ ಕುಟುಂಬವು ಈಗ ದಿಗ್ಬ್ರಮೆಗೆ ಒಳಗಾಗಿದ್ದಾರೆ’ ಎಂದು ಹೇಳಿದರು.

‘ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಚಿತ್ರನಟ ದರ್ಶನ್ ಹಾಗೂ ಆತನ ಸಹಚರರು ಬ್ಯಾಟ್, ಕಬ್ಬಿಣದ ರಾಡು ಇನ್ನಿತರೆ ಆಯುಧಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಕ್ರೂರವಾಗಿ ಕೊಲೆಗೈದಿದ್ದಾರೆ. ಪೊಲೀಸರು ಈಗಾಗಲೇ ೧೩ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರ ಶೋಧಕಾರ್ಯ ಮುಂದುವರೆಸಿದ್ದಾರೆ. ದರ್ಶನ್ ತೂಗುದೀಪ ಈ ಹಿಂದೆ ಕೂಡ ಕ್ರಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿದ್ದರಿಂದ ಅವರ ಕುಟುಂಬ ಅನಾಥವಾಗಿದೆ. ದರ್ಶನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ’ ಎಂದು ಹೇಳಿದರು.

‘ಚಿತ್ರನಟ ದರ್ಶನ್ ಹಾಗೂ ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಯಾವುದೇ ಒತ್ತಡಕ್ಕೆ ಪೊಲೀಸರು ಮಣಿಯಬಾರದು. ಜತೆಗೆ ರೇಣುಕಾಸ್ವಾಮಿ ಪತ್ನಿಗೆ ಉದ್ಯೋಗ ಕೊಡಬೇಕು. ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ ಆರೋಪಿಗಳಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು. ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ರೌಡಿ ದರ್ಶನ್ ತೂಗುದೀಪ ವಿರುದ್ಧ ಪೊಲೀಸರು ರೌಡಿಶೀಟರ್ ಹಾಕಿ ವಸ್ತುಸ್ಥಿತಿ ಅರಿತು ಶಿಘ್ರವೇ ರೇಣುಕಾಸ್ವಾಮಿ ಮನೆಗೆ ಸಂಬಂಧಿಸಿದ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಬೇಕು. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿ ದರ್ಶನ್‌ಗೆ ಯಾವ ಕಾರಣಕ್ಕೂ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ನಮ್ಮ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಿಡ್ಲಿಕೊಡ್ಲಿ ಮಠದ ಶ್ರೀಸದಾಶಿವ ಸ್ವಾಮೀಜಿ, ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ತಣ್ಣಣಿರುಹಳ್ಳ ಮಠದ ವಿಜಯಕುಮಾರ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹಿರಿಯ ಪತ್ರಕರ್ತ ವೆಂಕಟೇಶ್, ಕಸಾಪ ಮಾಜಿ ಅಧ್ಯಕ್ಷ ಉದಯರವಿ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಶರತ್ ಭೂಷಣ್, ಯು.ಎಸ್. ಬಸವರಾಜು, ಶೋಭನ್ ಬಾಬು, ಯೋಗೀಶ್, ಹೇಮಂತ್ ಕುಮಾರ್, ಹೇಮೇಶ್, ಬಿ.ಎ.ನಾಗೇಶ್, ಲೋಕೆಶ್, ಲತೇಶ್, ಕುಮಾರ್, ಮಯೂರಿ ಲೋಕೇಶ್, ಸಂಗಂ, ಉಮೇಶ್, ಎಚ್.ಎನ್.ನಾಗೇಶ್, ಮಂಜುನಾಥ್, ನವೀನ್, ದೇವರಾಜು ಶಾಸ್ತ್ರಿ, ಚಂದ್ರಶೇಖರ್, ಸೋಮಶೇಖರ್ ಐನರ್, ಮಿಲ್ಟ್ರು ಕುಮಾರಸ್ವಾಮಿ, ನರಿಲೆ ಪರಮೇಶ್, ಚೇತನ್ ಇತರರು ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ