ಚಿಕ್ಕಮಗಳೂರು : ಕೃಷಿ ಉತ್ಪನ್ನಗಳ ಬೆಲೆ ಏರಿಕೆಯ ವರ್ಷ- 2024. ಹೀಗಂತ ಹೇಳಿದರೆ ಅತಿಶಯೋಕ್ತಿ ಆಗಲಾರದು. ಕಾರಣ, ಕಾಫಿ, ಅಡಕೆ, ರಬ್ಬರ್ ಸೇರಿದಂತೆ ಇತರೆ ಕೃಷಿ ಹಾಗೂ ತರಕಾರಿ ಬೆಲೆ ಈ ವರ್ಷದಲ್ಲಿ ಏರಿಕೆಯಾಗಿದೆ. ಈಗಲೂ ಕೂಡ ಇದೇ ಪರಿಸ್ಥಿತಿ ಮುಂದುವರಿದಿದೆ.
ಹಿಂಗಾರು ಮಳೆ ಸಕಾಲದಲ್ಲಿ ಆರಂಭವಾಗದೆ ಇದ್ದರಿಂದ ತರಕಾರಿ ಬೆಲೆ ದುಬಾರಿಯಾಗಿತ್ತು. ಇದು, ಸಹಜ ವೆಂದುಕೊಂಡು ಗ್ರಾಹಕರು ಸುಮ್ಮನಾದರೂ, ಆದರೆ ಏಪ್ರಿಲ್ ಕೊನೆಯಲ್ಲಿ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದಂತೆ ರೈತರ ಮೊಗದಲ್ಲಿ ಹರ್ಷ ಮೂಡಿತು. ಮುಂಗಾರಿಗೆ ಬೇಕಾದ ಬಿತ್ತನೆಗೆ ಸಿದ್ಧತೆ ಮಾಡಿಕೊಂಡರು. ತರಕಾರಿ ಬೆಳೆ ಬಿತ್ತನೆಗೂ ಪ್ಲಾನ್ ಮಾಡಿದ್ದರು.
ಆದರೆ, ಮೇ ತಿಂಗಳಲ್ಲಿ ಸತತವಾಗಿ ಮಳೆಯಾಗಿದ್ದರೂ ಸಹ ಆಗಾಗ ಬಂದ ಆಲಿಕಲ್ಲು ಮಳೆಯಿಂದ ತರಕಾರಿ ಬೆಳೆ ನಾಶವಾಗಿದೆ. ಹಲವೆಡೆ ತಗ್ಗಿನ ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಗಿಡಗಳು ಕೊಳೆತು ನೀರಿನಲ್ಲಿ ಕರಗಿ ಹೋಯ್ತು. ಈ ಅವಾಂತರದಿಂದ ಹೊರ ಬಂದು ಬೆಳೆ ಉಳಿಸಿಕೊಳ್ಳಲು ಯಾವುದೇ ಉಪಾಯ ಇಲ್ಲದಿದ್ದರಿಂದ ರೈತರು ಕೈ ಚಲ್ಲಿ ಕುಳಿತುಕೊಂಡರು.
ವರ್ತಕರ ಬೇಡಿಕೆಗೆ ಅನುಗುಣವಾಗಿ ಸ್ಥಳೀಯವಾಗಿ ಪೂರೈಕೆ ಇಲ್ಲದಿದ್ದರಿಂದ ವರ್ತಕರು ಅನಿವಾರ್ಯವಾಗಿ ಬೇರೆ ಜಿಲ್ಲೆಗಳನ್ನು ಅವಲಂಭಿಸಬೇಕಾಯಿತು. ಸ್ಥಳೀಯವಾಗಿ ಫಸಲು ಇಲ್ಲದಿದ್ದರಿಂದ ಹಾವೇರಿ, ಕೋಲಾರ, ತುಮಕೂರು, ಬೆಳಗಾವಿಯಿಂದ ಚಿಕ್ಕಮಗಳೂರಿಗೆ ತರಕಾರಿ ತರಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಮಾರಾಟದ ಸಂದರ್ಭದಲ್ಲಿ ಸಾಗಾಣಿಕೆ ವೆಚ್ಚವನ್ನು ಕೂಡ ಗ್ರಾಹಕರ ಮೇಲೆ ಹಾಕಲಾಗುತ್ತಿದೆ.ಶ್ರೀರಕ್ಷೆ:
ಹೈನುಗಾರಿಕೆ ಮತ್ತು ತರಕಾರಿ ಬೆಳೆ ರೈತರ ಪಾಲಿಗೆ ಸಂಜೀವಿನಿ ಇದ್ದಂತೆ.
ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ರೈತರು ಇವುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಚಿಕ್ಕಮಗಳೂರು ತಾಲೂಕಿನ ಅಂಬಳೆ, ಮರ್ಲೆ, ಬಾಳೆಹಳ್ಳಿ ಸೇರಿದಂತೆ ಸುತ್ತಮುತ್ತ ಪ್ರತಿ ವರ್ಷ ತರಕಾರಿ ಬೆಳೆಯಲಾಗುತ್ತಿದೆ. ಆದರೆ, ಪ್ರತಿಕೂಲ ವಾತಾವರಣ ಇದ್ದಾಗ ಈ ರೀತಿಯಲ್ಲಿ ಹಾನಿ ಸಂಭವಿಸಿದಾಗ ರೈತರಿಗೆ ಬೆಲೆ ಏರಿಕೆ ಗಗನ ಕುಸುಮ ವಾಗಿರುತ್ತದೆ.
ಚಿಕ್ಕಮಗಳೂರಿಗೆ ಹಾವೇರಿಯಿಂದ ಸಾಂಬಾರ ಸೊಪ್ಪು ಬರುತ್ತಿದೆ. ಹಾಗಾಗಿ ಒಂದು ಕಟ್ಟಿಗೆ 20 ರಿಂದ 30 ರುಪಾಯಿ ಇದೆ. ಮೆಂತೆ ಕೂಡ 30 ರುಪಾಯಿ. ಕೋಲಾರದಿಂದ ಟೊಮ್ಯಾಟೋ, ತುಮಕೂರಿನಿಂದ ಕ್ಯಾರಟ್, ಬೆಳಗಾವಿಯಿಂದ ಕ್ಯಾಪ್ಸಿಕಂ, ಬೋಂಡ ಮೆಣಸಿನ ಕಾಯಿ ಬರುತ್ತಿದೆ.
ವಿವಿಧ ತರಕಾರಿ ದರ ಕೆಜಿಗೆ ಹಸಿ ಮೆಣಸಿಕಾಯಿ- 100 ರು.
ನವಿಲುಕೋಸು- 100
ಟೊಮ್ಯಾಟೋ- 50
ಬೀನ್ಸ್ - 160
ಕ್ಯಾರೆಟ್- 70
ಮಂಗಳೂರು ಸೌತೆ- 60
ಬೆಳ್ಳುಳ್ಳಿ- 240
ಮುಳುಗಾಯಿ- 80