ತರಕಾರಿ, ಗ್ರಾಹಕರಿಗೆ ಬಲು ದುಬಾರಿ

KannadaprabhaNewsNetwork | Published : Jun 23, 2024 2:05 AM

ಸಾರಾಂಶ

ತರಕಾರಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಭಾರಿ ಹೊರೆಯಾಗಿದೆ. ದಿನನಿತ್ಯ ಬಳಸುವ ತರಕಾರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ತರಕಾರಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಭಾರಿ ಹೊರೆಯಾಗಿದೆ. ದಿನನಿತ್ಯ ಬಳಸುವ ತರಕಾರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ತರಕಾರಿಗಳನ್ನು ರೈತರಿಂದ ಕೊಂಡುತಂದು ಮಾರಾಟ ಮಾಡುವವರಿಗೆ ವ್ಯಾಪಾರವಿಲ್ಲದೆ ಹಾನಿ ಅನುಭವಿಸಬೇಕಾಗಿದೆ. ಎಲ್ಲಾ ತರಕಾರಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಗ್ರಾಹಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೊಂಡುತಂದು ತರಕಾರಿ ಮಾರುವವರು ವ್ಯಾಪಾರವಿಲ್ಲದೆ ಕೊಳೆತು ಸಾಕಷ್ಟು ಹಾನಿಯಾಗುತ್ತಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ನಿತ್ಯದ ಅಡುಗೆಗೆ ಅವಶ್ಯವಿರುವ ಟೊಮೆಟೊ, ಹಸಿಮೆಣಸಿನಕಾಯಿ ಕೆ.ಜಿ.ಗೆ ₹100 ತಲುಪಿವೆ. ಬೆಳ್ಳುಳ್ಳಿ, ಹಸಿಶುಂಠಿ ನೂರರ ಗಡಿ ದಾಟಿದ್ದು, ₹150-60 ದರದಲ್ಲಿ ಮಾರಾಟವಾಗುತ್ತಿವೆ. ಹೂಕೋಸು, ಎಲೆಕೋಸಿನ ಬೆಲೆ ದುಪ್ಪಟ್ಟಾಗಿದೆ. ₹ 40ಕ್ಕೆ ಮಾರಾಟವಾಗುತ್ತಿದ್ದ ತರಕಾರಿಗಳ ಬೆಲೆ ₹ 80ರ ಗಡಿ ತಲುಪಿವೆ. ಕೊತ್ತಂಬರಿ, ಮೆಂತ್ಯ, ಮುಂತಾದ ಸೊಪ್ಪುಗಳು ₹ 10 ಇದ್ದದ್ದು, ಈಗ ₹ 30 ರಿಂದ ₹ 40. ಬೀನ್ಸ್‌ ಸೇರಿ ಎಲ್ಲ ತರಕಾರಿಗಳು ದಾಖಲೆ ಮುರಿದು ಕೆಜಿ ಒಂದಕ್ಕೆ ₹ 200ಕ್ಕೆ ತಲುಪಿವೆ.ಸರ್ಕಾರಿ ವಸತಿ ಶಾಲೆಗಳಿಗೆ ತರಕಾರಿ ಸಾಗಿಸುತ್ತಿದ್ದ ಗುತ್ತಿಗೆದಾರರಿಗೂ ಬೆಲೆ ಎರಿಕೆಯಿಂದಾಗಿ ಸಾಕಷ್ಟು ಹೊರೆಯಾಗಿದೆ.

ಪ್ರತಿನಿತ್ಯ ವಸತಿ ಶಾಲೆಗಳಿಗೆ ತರಕಾರಿ ಪೂರೈಸಲೇಬೇಕು. ಆದರೆ ಟೆಂಡರ್ ಆಗಿದ್ದಕ್ಕಿಂತೂ ಈಗ ಹೆಚ್ಚಿನ ಬೆಲೆಯಲ್ಲಿ ತರಕಾರಿ ಖರೀದಿಸಿ ಪೂರೈಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಂಜುನಾಥ, ಕಳೆದ ತಿಂಗಳು ವಿಪರೀತ ಬಿಸಿಲಿನಿಂದ ತರಕಾರಿ ಬೆಳೆಯ ಇಳುವರಿ ಬರದೇ ಬೆಲೆ ಹೆಚ್ಚಳವಾಗಿತ್ತು, ಮಳೆಯಿಂದ ಬೆಳೆಹಾನಿಯಾಗಿ ಈಗ ಇಳುವರಿ ಇಲ್ಲವಾಗಿದ್ದು, ಬೇಡಿಕೆ ಹೆಚ್ಚಾಗಿದೆ, ಬೆಲೆಯು ಹೆಚ್ಚಳವಾಗಿದೆ, ಗ್ರಾಹಕರು ಬೇಳೆ ಕಾಳುಗಳತ್ತ ಮುಖಮಾಡಿದ್ದು, ತರಕಾರಿ ವ್ಯಾಪಾರಿಗಳು ವ್ಯಾಪಾರವಿಲ್ಲದೇ ನಷ್ಟ ಅನುಭವಿಸುವಹಾಗಾಗಿದೆ.

ಗ್ರೀನ್‌ಹೌಸ್‌ಗಳಲ್ಲಿ ತರಕಾರಿ ಬೆಳೆದ ರೈತರಿಗೆ ಅಲ್ಪ ಪ್ರಮಾಣದಲ್ಲಿ ಲಾಭವಾಗಿದೆ. ಉಳಿದ ರೈತರಿಗೆ ಕೀಟಗಳ ಬಾಧೆಯಿಂದ ಹಾನಿಯಾಗಿದೆ. ಮಳೆಯಾಗಿದ್ದರಿಂದ ತರಕಾರಿ ಬೆಳೆಗೆ ಕೀಟಗಳ ಬಾಧೆ ಹೆಚ್ಚಳವಾಗಿ ಕೈಗೆ ಬಂದ ಬೆಳೆ ಬಾಯಿಗೆ ಬಂದಿಲ್ಲ. ಇನ್ನೆರಡು ತಿಂಗಳು ಇದೇ ಪರಿಸ್ಥಿತಿ ಮುಂದು ವರಿಯಲಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಸ್ಥರು.ಪಕ್ಕದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಘಟಪ್ರಭಾ ಮುಂತಾದ ಊರುಗಳಿಂದ ತರಕಾರಿ ತರಿಸಲಾಗುತ್ತಿತ್ತು. ಡೀಸೆಲ್‌ ದರ ಹೆಚ್ಚಳದಿಂದ ತರಕಾರಿ ಸಾಗಾಣಿಕೆ ಬೆಲೆ ಹೆಚ್ಚಳವಾಗಿದ್ದರಿಂದ ತರಕಾರಿ ಸಾಗಾಣಿಕೆ ವೆಚ್ಚ ಹೆಚ್ಚಿದೆ. ಇದರಿಂದ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ತಾಲೂಕಿನಲ್ಲಿ ಬೆಳೆಯುತ್ತಿದ್ದ ತರಕಾರಿ ಮಳೆಯಿಂದಾಗಿ ಹಾನಿಗೊಳಗಾಗಿದೆ ಹೂವು ಕಾಯಿಗಳು ಉದುರಿಹೋಗಿ ಬರಬೇಕಾದ ಇಳುವರಿ ಬಂದಿಲ್ಲ. ಹೀಗಾಗಿ ಹೊರಗಿನಿಂದ ತರಕಾರಿ ತರಿಸಿದೇ ಬೇರೆ ಮಾರ್ಗವಿಲ್ಲ.

- ಗುರುಪಾದಪ್ಪ ಮೆಂಡೆಗೇರಿ ತರಕಾರಿ ವ್ಯಾಪಾರಿ

Share this article