ವೇಮನರ ತತ್ವಾದರ್ಶ ಪ್ರತಿಯೊಬ್ಬರಿಗೂ ಮಾದರಿ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Jan 20, 2025 1:34 AM

ಸಾರಾಂಶ

ಮಹಾಯೋಗಿ ವೇಮನರು 15 ಮತ್ತು 16ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ವೇಮನ ಜಯಂತಿಕನ್ನಡಪ್ರಭ ವಾರ್ತೆ ಕೊಪ್ಪಳ

ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ವೇಮನರ ತತ್ವಾದರ್ಶ ಪ್ರತಿಯೊಬ್ಬರಿಗೂ ಮಾದರಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾಯೋಗಿ ವೇಮನರು 15 ಮತ್ತು 16ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ತತ್ವಗಳು ಮತ್ತು ಚರಿತ್ರೆ ಪಾಲನೆ ಮಾಡಿಕೊಂಡು ಅಂದಿನ ಕಾಲದ ಸ್ಥಿತಿಗತಿಗಳಿಂದ ವೇಮನರು ಮಹಾಯೋಗಿಗಳಾದರು. ಮಾನವ ಕುಲದ ಏಳಿಗಾಗಿ ಶ್ರಮಿಸಿದರು. ಇಂತಹ ಮಹನೀಯರ ತತ್ವ, ಆದರ್ಶ ತಿಳಿದುಕೊಳ್ಳುವುದಷ್ಟೆ ಅಲ್ಲದೇ, ಅವುಗಳನ್ನು ಪಾಲನೆ ಮಾಡುವುದು ಸಹ ಎಲ್ಲರ ಜವಾಬ್ದಾರಿ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಮಹಾಯೋಗಿ ವೇಮನವರ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ತಿಳಿಸಿರುವ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಬದುಕು ಸುಂದರವಾಗುವುದರ ಜೊತೆಗೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಗಂಗಾವತಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಲ ಕಾಲಕ್ಕೆ ಶರಣರು, ದಾಸರು ಹೀಗೆ ಹಲವಾರು ಮಹನೀಯರು ತಮ್ಮ ತತ್ವಾದರ್ಶಗಳು, ವೈಜ್ಞಾನಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ವೇಮನರು ಒಬ್ಬರು. ಮಹಾಯೋಗಿ ವೇಮನವರು ದಕ್ಷಿಣ ಭಾರತದ ಮಧ್ಯಕಾಲೀನ ಭಾರತದಲ್ಲಿ ಸಮಾಜದಲ್ಲಿನ ಸ್ಥಿತಿಗತಿ ಅರಿತುಕೊಂಡು ಸಮಾಜದ ಒಳಿತಿಗಾಗಿ ಮಹಾನ್ ಶರಣ, ಸಂತ, ದಾಸರಾಗಿ ವೈಚಾರಿಕತೆಯ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮಹಾಯೋಗಿಗಳಾಗಿದ್ದಾರೆ‌‌ ಎಂದರು.

ವೇಮನರು ಕಟ್ಟಿಕೊಟ್ಟಂತಹ ಪದ್ಯಗಳು ಸರ್ವಕಾಲಿಕ ಜೀವನದ ಸತ್ಯಾಂಶ ಹಾಗೂ ವಾಸ್ತವಗಳನ್ನು ಒಳಗೊಂಡಿವೆ. ಅವರ ಪದ್ಯಗಳು ಮಾನವನ ಜೀವನದ ಸಾರಾಂಶಗಳನ್ನು ತಿಳಿಸುವುದರರೊಂದಿಗೆ ಜೀವನದ ನಿಜ ಸಂಗತಿಗಳನ್ನು ತಿಳಿಸಿವೆ. ದಾರ್ಶನಿಕರು ಜಗತ್ತಿಗೆ ಸಿದ್ಧಾಂತಗಳನ್ನು ಬಿಟ್ಟು ಹೋಗಿದ್ದು, ಅವುಗಳ ಮೇಲೆ ನಾವೆಲ್ಲರೂ ನಡೆಯಬೇಕು ಎಂದರು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶ ಸಿಂಗನಾಳ, ಸಮಾಜದ ಮುಖಂಡರಾದ ಪ್ರಭು ಹೆಬ್ಬಾಳ, ಎಸ್‌.ಬಿ. ನಾಗರಹಳ್ಳಿ, ಹೇಮರೆಡ್ಡಿ ಬಿಸರಳ್ಳಿ, ಎಚ್.ಎಲ್. ಹಿರೇಗೌಡ್ರ ಹಾಗೂ ಮತ್ತಿತರರಿದ್ದರು.

ಶಕುಂತಲಾ ಬೆನ್ನಾಳ ಹಾಗೂ ತಂಡದವರು ನಾಡಗೀತೆ, ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಡಾ. ಬಿ.ಎನ್. ಹೊರಪೇಟೆ ಕಾರ್ಯಕ್ರಮ ನಿರೂಪಿಸಿದರು.

Share this article