ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೇಣೂರು ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಯಂಗಡಿಯ ಕಡ್ತ್ಯಾರು ಎಂಬಲ್ಲಿ ಭಾನುವಾರ ಸುಡುಮದ್ದು ಘಟಕ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಹಾಗೂ ಇತರ ಇಲಾಖೆಯಿಂದ ಮಾಹಿತಿ ಮತ್ತು ಸಂಗ್ರಹ ಕಾರ್ಯ ನಡೆದಿದ್ದು ಇನ್ನೂ ಕೆಲವೊಂದು ವಿಚಾರಗಳ ತನಿಖೆ ಮುಂದುವರಿದಿದೆ.ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣದ ತನಿಖೆಗೆ ಆಂತರಿಕ ಭದ್ರತಾ ವಿಭಾಗದ ಡಿಐಜಿ ರವಿ ಚೆನ್ನಣ್ಣನವರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸೇರಿದಂತೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ (ಆಡಳಿತ) ತಿಪ್ಪೇಸ್ವಾಮಿ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿ ವರ್ಗ ಆಗಮಿಸಿತ್ತು.
ಸ್ಥಳದಲ್ಲಿ ಸಿಕ್ಕಿರುವ ಸುಡುಮದ್ದು, ಕಚ್ಚಾವಸ್ತು ಇತ್ಯಾದಿಗಳನ್ನು ವಿಧಿವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಇದರ ವರದಿ ಬಂದ ಬಳಿಕವಷ್ಟೇ ಸ್ಫೋಟದ ನಿಖರ ಕಾರಣ ತಿಳಿದು ಬರಲಿದೆ.ಘಟನೆಯಲ್ಲಿ ಮೂವರು ಅಸುನೀಗಿದ್ದು ವರ್ಗೀಸ್ ಹಾಗೂ ಚೇತನ್ ಅವರ ದೇಹಗಳು ಸ್ಫೋಟದ ತೀವ್ರತೆಗೆ ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿದ್ದು ಅವುಗಳ ಗುರುತು ಸಿಗದ ಕಾರಣ ಡಿಎನ್ಎ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತಪಟ್ಟಿದ್ದ ನಾರಾಯಣನ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇಬ್ಬರಿಗೆ ಪೊಲೀಸ್ ಕಸ್ಟಡಿ: ಸುಡುಮದ್ದು ಘಟಕದ ಮಾಲಕ ಸೈಯದ್ ಬಶೀರ್‌ನನ್ನು ಸುಳ್ಯದಲ್ಲಿ ಹಾಗೂ ಘಟಕಕ್ಕೆ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದ ಹಾಸನ ಮೂಲದ ಕಿರಣ್ ಎಂಬಾತನನ್ನು ವೇಣೂರು ಬಳಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಫೆ.5ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ನಿರ್ಲಕ್ಷ್ಯ ಕಾರಣ: ಪರವಾನಗಿ ಪಡೆದು ಕಾರ್ಯಾಚರಣೆ ನಡೆಸುತ್ತಿದ್ದ ಈ ಘಟಕದಲ್ಲಿ 15 ಕೆಜಿಯಷ್ಟು ಸ್ಫೋಟಕ ಕಚ್ಚಾ ವಸ್ತು ಸಂಗ್ರಹ ಸಾಮರ್ಥ್ಯಕ್ಕೆ ಅನುಮತಿ ಇತ್ತು ಆದರೆ ಹೆಚ್ಚಿನ ಬೇಡಿಕೆ ಇದ್ದ ಕಾರಣ ನಿಗದಿತ ಪ್ರಮಾಣಕ್ಕಿಂತ ಅಧಿಕ ಸ್ಫೋಟಕ ನಿರ್ಮಾಣ ಕಚ್ಚಾ ವಸ್ತು ಸಂಗ್ರಹ ಮಾಡಿರುವ ಶಂಕೆ ಇದೆ. ಯಾವುದೇ ಮುಂಜಾಗ್ರತೆ ಇಲ್ಲದೆ ಟೆಂಟ್ ಹಾಕಿ ಸುಡುಮದ್ದು ತಯಾರಿಕೆ ನಡೆಸುತ್ತಿದ್ದುದು, ಸ್ಥಳದಲ್ಲಿ ಯಾವುದಾದರೂ ಬೆಂಕಿ ಉತ್ಪತ್ತಿಗೆ ಕಾರಣವಾಗುವ ವಸ್ತುಗಳು ಇದ್ದಿರಬಹುದೇ ಎಂಬ ಅನುಮಾನವೂ ಇದೆ. ಇಲ್ಲಿ ಯಾವ ಯಾವ ರೀತಿಯ ಸುಡುಮದ್ದುಗಳನ್ನು ತಯಾರಿಸಲಾಗುತ್ತಿತ್ತು ಎಂಬುದು ಕೂಡ ತಿಳಿದು ಬರಬೇಕಿದೆ. ಸುಡು ಮದ್ದು ತಯಾರಿಕೆಯಲ್ಲಿ ಪರಿಣಿತರಲ್ಲದ ಕಾರ್ಮಿಕರನ್ನು ಬಳಸಿಕೊಂಡಿರುವುದೂ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.ಪೊಲೀಸ್ ನಿಯೋಜನೆ: ಹೆಚ್ಚಿನ ತನಿಖೆ, ಸ್ಥಳದಲ್ಲಿ ಸಿಕ್ಕಿದ ವಸ್ತುಗಳ ಸಂಗ್ರಹ ಕಾರ್ಯ ನಡೆದಿದ್ದು ಕೊನೆಯ ಹಂತದ ಕೆಲವು ತನಿಖೆಗಳು ಬಾಕಿ ಇರುವುದರಿಂದ ಸ್ಫೋಟ ಸ್ಥಳದ 100 ಮೀಟರ್ ವ್ಯಾಪ್ತಿಯೊಳಗೆ ಅಗತ್ಯ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿದೆ. ಹೆಚ್ಚಿನ ಬಂದೋಬಸ್ತ್ ಗಾಗಿ ಸ್ಥಳದಲ್ಲಿ ತನಿಖೆ ಪೂರ್ಣಗೊಳ್ಳುವ ತನಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ತಿಳಿಸಿದ್ದಾರೆ.ಮನೆ ಬಿಟ್ಟು ಬರಲು ಒಪ್ಪದ ವೃದ್ಧ ದಂಪತಿ: ಘಟನೆ ನಡೆದ ಸುಮಾರು 100 ಮೀ. ದೂರದಲ್ಲಿರುವ ಮನೆಗೆ ಸ್ಫೋಟದಿಂದ ಭಾರಿ ಹಾನಿ ಉಂಟಾಗಿದೆ. ಮನೆಯ ಶೀಟುಗಳು ಹಾರಿ ಬಿದ್ದು ಹುಡಿಯಾಗಿವೆ. ಮನೆಯೊಳಗಿನ ಪರಿಕರಗಳು, ಸಾಮಾನುಗಳಿಗೆ, ಗೋಡೆಗೂ ಹಾನಿಯಾಗಿದೆ. ಇಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿ ವೆಂಕಪ್ಪ ಮೂಲ್ಯ- ಕಮಲ ಅವರು ನೆರೆಕೆರೆಯವರು, ಸಂಬಂಧಿಕರು ಹೇಳಿದರೂ ಮನೆ ಬಿಟ್ಟು ಬರಲು ಒಪ್ಪುತಿಲ್ಲ. ನಮ್ಮದಲ್ಲದ ತಪ್ಪಿಗೆ ನಾವು ಮನೆ ಬಿಡಲು ತಯಾರಿಲ್ಲ ಎಂದು ಹೇಳುತ್ತಿದ್ದಾರೆ. ಅಪಾಯಕಾರಿ ಹಂತದಲ್ಲಿರುವ ಮನೆಯಿಂದ ಇವರನ್ನು ಸ್ಥಳಾಂತರಿಸಲು ಬಗ್ಗೆ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮನೆ ದುರಸ್ತಿ ಮಾಡಿ ಕೊಡುವುದಾಗಿ ಭರವಸೆ ನೀಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಮನೆಯೊಳಗಿದ್ದ ದಿನಸಿ ಸಾಮಗ್ರಿ ಕೂಡ ಸ್ಫೋಟದ ತೀವ್ರತೆಗೆ ಬಳಸದಂತಾಗಿವೆ. ಇವರಿಗೆ ಬೇಕಾದ ಅಗತ್ಯ,ಆಹಾರ ಸಾಮಗ್ರಿಗಳನ್ನು ಸಂಬಂಧಿಕರು ಒದಗಿಸಿದ್ದಾರೆ.