ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಬ್ರಹ್ಮೋತ್ಸವದ ಪ್ರಯುಕ್ತ ಚೆಲುವನಾರಾಯಣಸ್ವಾಮಿ ಕಲ್ಯಾಣೋತ್ಸವ ಭಾನುವಾರ ಸಂಜೆ ವೈಭವದಿಂದ ನೆರವೇರಿತು.ಧಾರಾ ಮಹೋತ್ಸವದ ಅಂಗವಾಗಿ ಇಡೀ ಮಂಟಪವನ್ನು ಆಕರ್ಷಕವಾಗಿ ಪುಷ್ಪಾಲಂಕಾರ ಮಾಡಿ ತಳಿರುತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಇಡೀ ಕಲ್ಯಾಣಿ ಸಮುಚ್ಚಯವನ್ನು ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಸಿಂಗಾರ ಮಾಡಲಾಗಿತ್ತು.
ಕಲ್ಯಾಣನಾಯಕಿ ಅಮ್ಮನವರಿಗೆ ಸಂಜೆ 4 ಗಂಟೆ ವೇಳೆಗೆ ಕಲ್ಯಾಣಿಗೆ ಉತ್ಸವ ನೆರವೇರಿಸಲಾಯಿತು. ಸಂಜೆ 5ಗಂಟೆ ವೇಳೆಗೆ ದೇವಸೇನಾಧಿಪತಿ ವಿಶ್ವಕ್ಸೇನರ ಉತ್ಸವ ನೆರವೇರಿಸಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಲಾಯಿತು.ನಂತರ ನವವದುವಿನಂತೆ ಬಂಗಾರದ ಪ್ರಭಾವಳಿಯೊಂದಿಗೆ ಸಿಂಗಾರಗೊಂಡ ವೇದಮಂತ್ರ ಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ಕೂಡಿದ ಶ್ರೀಚೆಲುವನಾರಾಯಣಸ್ವಾಮಿ ಭವ್ಯ ಉತ್ಸವ 6 ಗಂಟೆಯ ವೇಳೆಗೆ ಧಾರಾಮಂಟಪಕ್ಕೆ ತಲುಪಿದ ನಂತರ ಅಲ್ಲಿ ಕಲ್ಯಾಣನಾಯಕಿ ಅಮ್ಮನವರು ಹಾಗೂ ಚೆಲುವನಾರಾಯಣಸ್ವಾಮಿಗೆ ಸಮನ್ಮಾಲೆ ನೆರವೇರಿಸಲಾಯಿತು. ಲಾಜಹೋಮ ಹಾಗೂ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಳಜಿಯಿಂದಾಗಿ ಕಲ್ಯಾಣೋತ್ಸವಕ್ಕೆ ಕಳೆದ ಸಲಕ್ಕಿಂತಲೂ ಹೆಚ್ಚಿನ ವ್ಯವಸ್ಥೆ ಮಾಡಲಾಗಿತ್ತು.
ವರ್ಷಕ್ಕೆ ಒಮ್ಮೆ ಮಾತ್ರ ಧಾರಾಮಂಟಪದಲ್ಲಿ ನಡೆಯುವ ಕಲ್ಯಾಣೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಆಂಧ್ರ ಪ್ರದೇಶ, ತಮಿಳುನಾಡಿನಿಂದ ನೂರಾರು ಭಕ್ತರು ಸಹ ಭಾಗವಹಿಸಿದ್ದರು.ಮೇಲುಕೋಟೆಯ ಎಲ್ಲಾ ಪ್ರಮುಖ ಬೀದಿಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರಭಾರಿ ಇಒ ಸಂತೋಷ್, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪರಿಚಾರಕ ಪಾರುಪತ್ತೇಗಾರ್ ಪಾರ್ಥಸಾರಥಿ ಉತ್ಸವವವನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸಿದ್ದರು.
ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಎಸ್ಎನ್ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ 9ನೇ ವರ್ಷದ : ವೈರಮುಡಿ ಬ್ರಹ್ಮೋತ್ಸವ ನಾದೋಪಾಸನ ಸೇವೆ ಆರಂಭವಾಯಿತು.ಕಲ್ಯಾಣೋತ್ಸವದಂದು ವಿದ್ವಾನ್ ಎಂ.ಎನ್ ಗಣೇಶ್, ಶ್ರೀಧರ ಗಿರೀಶ್ ನಾಗೇಶ್ ತಂಡ ಸುಶ್ರಾವ್ಯವಾಗಿ ನಾದಸ್ವರ ನುಡಿಸುವ ಮೂಲಕ ಸ್ವಾಮಿಯ ಉತ್ಸವ ವೈಭವ ಹೆಚ್ಚಿಸಿತ್ತು. ರಾತ್ರಿ 9 ಗಂಟೆಯವೇಳೆಗೆ ಕಲ್ಯಾಣೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾದವು.