ಕನ್ನಡಪ್ರಭ ವಾರ್ತೆ ತಲಕಾಡು
ತಲಕಾಡಿನಲ್ಲಿ ಗ್ರಾಮದೇವತೆ ಶ್ರೀ ಬಂಡರಸಮ್ಮನ ಹಬ್ಬದ ಅಂಗವಾಗಿ ಮಂಗಳವಾರ ಬಂಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.ಹಬ್ಬದ ಪ್ರಯುಕ್ತ ಗ್ರಾಮದೇವತೆ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ಯಶಸ್ವಿಯಾಗಿ ನೆರವೇರಿತು.
ಹಬ್ಬದ ಸಂಪ್ರದಾಯದಂತೆ ಮಧ್ಯಾಹ್ನ ವಡೆಯಾಂಡಹಳ್ಳಿ ಬಳಿಯಿಂದ ಹೊರಟ ಅಲಂಕೃತ ಮೊದಲ ಬಂಡಿ ರಾಮಮಂದಿರದ ಬಳಿಯ ಮತ್ತೊಂದು ಬಂಡಿಯೊಂದಿಗೆ ಸೇರಿಕೊಂಡು ಮುಖ್ಯ ವೃತ್ತದ ಬಳಿಯ ಗ್ರಾಮದೇವತೆ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ನಡೆಸಿದವು. ಅಲಂಕೃತ ಬಂಡಿಗೆ ದೇಗುಲದ ಅರ್ಚಕರು ವಿಶೇಷ ಪೂಜೆ ಮಂಗಳಾರತಿಯೊಂದಿಗೆ ಹಳೇತಲಕಾಡಿನಲ್ಲಿ ನಡೆಯುವ ಬಂಡಿ ಓಟದ ಉತ್ಸವಕ್ಕೆ ಬೀಳ್ಕೊಟ್ಟರು.ಹೊಸ ತಲಕಾಡಿನಿಂದ ಹಳೇ ತಲಕಾಡಿಗೆ ಮಧ್ಯಾಹ್ನ ಮೆರವಣಿಗೆಯಲ್ಲಿ ಆಗಮಿಸಿದ್ದ ಎರಡು ಬಂಡಿಗಳು, ಹಳೇ ತಲಕಾಡಿನಲ್ಲಿ ಮೆರವಣಿಗೆಗೆ ಸಜ್ಜಾಗಿದ್ದ ಮತ್ತೊಂದು ಬಂಡಿಯೊಂದಿಗೆ ಸೇರಿಕೊಂಡು ಮೂರು ಬಂಡಿಗಳು ಮೆರವಣಿಗೆಯಲ್ಲಿ ರಾಮಸ್ವಾಮಿ ಅಯ್ಯಂಗಾರ್ ನಿವಾಸದ ಮುಂಭಾಗದ ಮುಕ್ಕಾವಲು ವೃತ್ತಕ್ಕೆ ಧಾವಿಸಿದವು. ಇಲ್ಲಿ ಸಾಲಾಗಿ ನಿಂತ ಮೂರು ಬಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿವಾಸ್ತುಬೀದಿಯ ಬಂಡಿ ಓಟದ ಉತ್ಸವಕ್ಕೆ ಬಿಡಲಾಯಿತು.
ಹರಸಿಕೊಂಡ ರೈತ ಭಕ್ತರು ಮೆರವಣಿಗೆ ಸಾಗುವ ರಸ್ತೆ ಉದ್ದಕ್ಕೂ ಬಂಡಿಗೆ ರಾಸುಗಳನ್ನು ಕಟ್ಟಿ ಹರಕೆ ತೀರಿಸಿದರು. ಇದಲ್ಲದೆ ಹಳೇ ತಲಕಾಡಿನ ಶ್ರೀ ವೈದ್ಯನಾಥೇಶ್ವರ ವಾಸ್ತುಬೀದಿಯಲ್ಲಿ ಬಂಡಿ ಓಟದ ಉತ್ಸವದಲ್ಲಿ ಪಾಲ್ಗೊಂಡಿದ್ದ ರೈತರು, ಇಲ್ಲಿ ರಾಸುಗಳನ್ನು ಅಲಂಕೃತ ಬಂಡಿಗೆ ಕಟ್ಟಿ ಮಿಂಚಿನ ವೇಗದಲ್ಲಿ ಓಡಿಸಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದರು.ತಮಟೆ ಸದ್ದಿನೊಂದಿಗೆ ಒಂದು ಗಂಟೆಯ ಕಾಲ ನಡೆದ ಬಂಡಿ ಓಟದ ಉತ್ಸವ ವೀಕ್ಷಿಸಲು ಜನಜಾತ್ರೆಯೇ ನೆರೆದಿತ್ತು.
ಇದಕ್ಕೂ ಮೊದಲು ಗ್ರಾಮದೇವತೆ ದೇಗುಲದ ಬಳಿ ಹಾಗೂ ಮಡೆಗದ್ದೆಗಳಲ್ಲಿ ಸಾಲು ಸಾಲಾಗಿ ಕೃತಕವಾಗಿ ಸೃಷ್ಟಿಸಿಕೊಂಡಿದ್ದ ಮಣ್ಣಿನ ಅಡುಗೆ ಒಲೆಯಲ್ಲಿ ಹಬ್ಬದ ಸಂಪ್ರದಾಯದಂತೆ ಸಿಹಿ ಪೊಂಗಲ್ ಮಡೆ ನೈವೇದ್ಯ ತಯಾರಿಸಿದಭಕ್ತರು, ಬಿಸಿ ನೈವೇದ್ಯವನ್ನು ಹೊಸತಲಕಾಡಿಗೆ ಮೆರವಣಿಗೆಯಲ್ಲಿ ಮರಳಿದ ಬಂಡಿರಥಕ್ಕೆ ಸಮರ್ಪಿಸಿದರು.