ನವವೃಂದಾವನಗಡ್ಡೆಯಲ್ಲಿ ರಾಘವೇಂದ್ರ ಸ್ವಾಮಿ ಮಠದಿಂದ ವಿಜಯೋತ್ಸವ

KannadaprabhaNewsNetwork | Updated : Jul 09 2024, 08:40 AM IST

ಸಾರಾಂಶ

ಬೆಂಗಳೂರು ಉಚ್ಚ ನ್ಯಾಯಾಲಯ ಮಂತ್ರಾಲಯ ಮಠದ ಪರವಾಗಿ ತೀರ್ಪು ನೀಡಿದ ಹಿನ್ನೆಲೆ ಮಂತ್ರಾಲಯ ಮಠದ ಭಕ್ತರು ವಿಜಯೋತ್ಸವ ಆಚರಿಸಿದರು.

 ಗಂಗಾವತಿ :  ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಇರುವ ರಾಘವೇಂದ್ರಸ್ವಾಮಿಗಳ ಮಠದ ಪೂರ್ವಿಕ ಯತಿವರಣ್ಯರಾದ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು ಮತ್ತು ವಾಗೀಶ ತೀರ್ಥರ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸುವುದಕ್ಕೆ ಬೆಂಗಳೂರು ಉಚ್ಚ ನ್ಯಾಯಾಲಯ ಮಂತ್ರಾಲಯ ಮಠದ ಪರವಾಗಿ ತೀರ್ಪು ನೀಡಿದ ಹಿನ್ನೆಲೆ ಮಂತ್ರಾಲಯ ಮಠದ ಭಕ್ತರು ವಿಜಯೋತ್ಸವ ಆಚರಿಸಿದರು.

ಪದ್ಮನಾಭ ತೀರ್ಥರು, ಕವೀಂದ್ರರು, ವಾಗೀಶ ತೀರ್ಥರ ಆರಾಧನೆ ಸೇರಿದಂತೆ ಪೂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಂತ್ರಾಲಯ ಮಠದವರು ಮಾಡಬಾರದೆಂದು 1992ರಲ್ಲಿ ಉತ್ತರಾದಿ ಮಠದವರು ಗಂಗಾವತಿ ಜೆಎಂಎಫ್ ಸಿ ನ್ಯಾಯಲಯದಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಮಂತ್ರಾಲಯ ಮಠದವರು ಮರುದಾವೆ ಹಾಕಿ 2010ರಲ್ಲಿ ಜಯ ಸಾಧಿಸಿದ್ದರು. ಇದರ ವಿರುದ್ಧವಾಗಿ ಉತ್ತರಾದಿ ಮಠದವರು ಈ ಆದೇಶಕ್ಕೆ ಬೆಂಗಳೂರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು.

ಮಂತ್ರಾಲಯ ಮಠದಿಂದ ಮತ್ತೆ ಅರ್ಜಿ ಸಲ್ಲಿಸಿ ನಮಗೆ ವೃಂದಾವನಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಉತ್ತರಾದಿ ಮಠದವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಈಗ ಮಂತ್ರಾಲಯ ಮಠದ ಪರವಾಗಿ ತೀರ್ಪು ನೀಡಿದೆ.

ವಿಜಯೋತ್ಸವ:

ನ್ಯಾಯಾಲಯ ಮಂತ್ರಾಲಯ ಮಠದ ಪರವಾಗಿ ತೀರ್ಪು ನೀಡಿದ ಹಿನ್ನೆಲೆ ನವವೃಂದಾವನಗಡ್ಡೆಯಲ್ಲಿ ಭಕ್ತರು ವಿಜಯೋತ್ಸವ ಆಚರಿಸಿದರು. ಮಂತ್ರಾಲಯ ಮಠಾಧೀಶರಾಗಿರುವ ಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಭಕ್ತರು ಪರಸ್ಪರ ಬಣ್ಣ ಹಾಕಿಕೊಂಡು ಜಯಘೋಷ ಕೂಗಿದರು. ಶ್ರೀಗಳನ್ನು ಭಕ್ತರು ಎತ್ತಿಕೊಂಡು ಹರ್ಷ ವ್ಯಕ್ತಪಡಿಸಿದರು.

ರಾಮದೇವರ ಪೂಜೆ:

ನವವೃಂದಾವನಗಡ್ಡೆಯಲ್ಲಿ ಮಂತ್ರಾಲಯ ಮಠಾಧೀಶ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಮನ್ಮೂಲ ರಾಮದೇವರ ಪೂಜೆ ನೆರವೇರಿಸಿದರು. ನಂತರ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು ಮತ್ತು ವಾಗೀಶ ತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ತೀರ್ಥ ಪ್ರಸಾದದ ನಂತರ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

Share this article