ಕನ್ನಡಪ್ರಭ ವಾರ್ತೆ ಮೈಸೂರು
ಗ್ರೀನ್ ಬರ್ಡ್ಸ್ ಠೇವಣಿದಾರರ ಹೋರಾಟಕ್ಕೆ ಜಯ ಸಿಕ್ಕಿದ್ದು, ನೂರಾರು ಕೋಟಿ ರು. ಆಸ್ತಿಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.ನಗರದ ಗನ್ ಹೌಸ್ ಬಳಿಯ ಕುವೆಂಪು ಉದ್ಯಾನವನದಲ್ಲಿ ಶುಕ್ರವಾರ ನಡೆದ ಗ್ರೀನ್ ಬರ್ಡ್ಸ್ ಠೇವಣಿದಾರರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಕೂಲಿ ಕಾರ್ಮಿಕರು, ಬಡವರು, ರೈತರು ಠೇವಣಿ ಮಾಡಿ ಹೂಡಿಕೆ ಮಾಡಿದ್ದ ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿ ವಂಚನೆ ಪ್ರಕರಣದ ಬಗ್ಗೆ ಕಳೆದ 10 ವರ್ಷಗಳಿಂದ ಹೋರಾಟ ಮಾಡಿದ್ದರಿಂದ ಸಂಸ್ಥೆಯ ಆಸ್ತಿಗಳ ಹರಾಜು ಪ್ರಕ್ರಿಯ ಮುಂದಾಗಿದೆ ಎಂದರು.
ಸುಮಾರು 150 ಕೋಟಿ ರು. ಆಸ್ತಿ ಹರಾಜಿಗೆ ರಾಜ್ಯ ಸರ್ಕಾರ ನೇಮಕ ಮಾಡಿದ ವಿಶೇಷ ಪ್ರಾಧಿಕಾರದ ಮುಖ್ಯಸ್ಥ ಆದಿತ್ಯ ಬಿಸ್ವಾಸ್ ಅವರು, ಆಸ್ತಿ ಹರಾಜು ಪ್ರಕ್ರಿಯೆ ನಡೆಸಲು ಬಹಿರಂಗ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಪ್ರಕಟಣೆ ಹೊರಡಿಸಿರುವ ಆಸ್ತಿಗಳ ಮೌಲ್ಯ ಇಂದು ದುಪ್ಪಟ್ಟು ಏರಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸ್ಪರ್ಧಾತ್ಮಕವಾಗಿ ಖರೀದಿ ಮಾಡಿದರೆ ಸುಮಾರು 140,000 ಠೇವಣಿದಾರರಿಗೆ ಹೂಡಿಕೆ ಮಾಡಿರುವ ಠೇವಣಿ ಹಣ ಖಚಿತವಾಗಿ ಸಿಗುತ್ತದೆ ಎಂದರು.ಆಸ್ತಿಗಳು ಕೂಡ ಫಲವತ್ತಾದ ಭೂಮಿಯಾಗಿದ್ದು, ವ್ಯವಸಾಯಕ್ಕೆ ಯೋಗ್ಯವಾಗಿದೆ. ಈ ಬಗ್ಗೆ ಠೇವಣಿದಾರರು ಚಿಂತನೆ ನಡೆಸಿ ಹೆಚ್ಚು ಜನ ಹರಾಜು ಖರೀದಿಯಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಬೇಕು. ವಂಚನೆಗೆ ಒಳಗಾಗಿದ್ದ 1.60 ಲಕ್ಷ ಗ್ರಾಮೀಣ ಬಡ ಜನರಿಗೆ, ಮಹಿಳೆಯರಿಗೆ, ಠೇವಣಿ ಹಣ ವಾಪಸ್ ಬರುವ ಸೂಚನೆಗಳು ಕಂಡು ಬರುತ್ತಿವೆ ಎಂದರು.
ಇದೇ ಜ.12 ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹುರ ಮುಖ್ಯರಸ್ತೆಯಲ್ಲಿರುವ ಮಾದಾಪುರ ಗ್ರಾಮದ ತೆಂಗು ಅಡಿಕೆ, ತೋಟ ಹಾಗೂ ನಂಜನಗೂಡು- ಚಾಮರಾಜನಗರ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಕೌಲಂದೆ ಗ್ರಾಮದಲ್ಲಿ ಸುಮಾರು 6 ಎಕರೆ ತೆಂಗಿನ ತೋಟ ಫಲವತ್ತಾದ ಭೂಮಿಯನ್ನು ಹರಾಜು ನಡೆಯುತ್ತಿದ್ದು, ಆನ್ ಲೈನ್ ನಲ್ಲಿ ಅರ್ಜಿ ಹಾಕಿಕೊಂಡು ಇದರ ಸದುಪಯೋಗವನ್ನು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ತಾಲೂಕಿನ ಜನತೆ ಖರೀದಿಯಲ್ಲಿ ಪಡೆದುಕೊಳ್ಳಬಹುದು ಎಂದರು.ಈ ಸಭೆಯಲ್ಲಿ ಮುಖಂಡರಾದ ಬರಡನಪುರ ನಾಗರಾಜ್, ಪುಷ್ಪಾ ಪ್ರಸಾದ್, ರೂಪ, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ, ಪುರ ಜಗದೀಶ್, ಮಾದೇವಪ್ಪ, ಉಮೇಶ್, ನಿಂಗಣ್ಣ, ಗೀತಮ್ಮ, ಗಿರಿಜಮ್ಮ, ಮಸಣಮ್ಮ, ರಾಜು, ನಂದನ್ ಕುಮಾರ್, ಮಂಜು, ಚಿಕ್ಕರಂಗನಾಯಕ, ಶಿವರಾಜ್ ಮೊದಲಾದವರು ಇದ್ದರು.