ಹಾವೇರಿ: ಜಿಲ್ಲೆಯಲ್ಲಿ ಆಯುಧ ಪೂಜಾ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶುಕ್ರವಾರ ಆಯುಧ ಪೂಜೆ ನಿಮಿತ್ತ ವಾಹನಗಳ ಪೂಜೆ, ಅಂಗಡಿ ಮುಂಗಟ್ಟುಗಳಲ್ಲಿ ದೇವತೆಗೆ ಪೂಜೆ ಸಲ್ಲಿಸಲಾಯಿತು. ಶನಿವಾರ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆ, ದುರ್ಗಾದೇವಿ, ನವದುರ್ಗೆ, ಕಾಳಿಕಾ ದೇವಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಒಂಬತ್ತು ದಿನಗಳ ಕಾಲ ದುರ್ಗಾದೇವಿ, ಗ್ರಾಮದೇವತೆಯ ದೇವಸ್ಥಾನಗಳಲ್ಲಿ ಪುರಾಣ ಪ್ರವಚನ, ವಿಶಿಷ್ಟ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಗ್ರಾಮೀಣ ಭಾಗದಲ್ಲಿ ಗ್ರಾಮದೇವತೆಯ ಭಾವಚಿತ್ರದ ಮೆರವಣಿಗೆ, ಕುಂಭ ಮೆರವಣಿಗೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಹಬ್ಬಕ್ಕೆ ಮೆರಗು ತಂದವು. ವಿಜಯದಶಮಿ ಹಬ್ಬ ಶುಭ ಸೂಚಕವಾಗಿದ್ದರಿಂದ ಹೊಸ ವಾಹನ ಖರೀದಿ, ನೂತನ ಅಂಗಡಿ ಪ್ರಾರಂಭೋತ್ಸವ, ನಿವೇಶನ ಖರೀದಿಸುವುದು ಕಂಡು ಬಂದಿತು.ಬನ್ನಿ ಮುಡಿಯುವ ಕಾರ್ಯಕ್ರಮ: ಶನಿವಾರ ಸಂಜೆ ಸುಮಾರು ೭.೩೦ರ ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು. ಹಾವೇರಿಯಲ್ಲಿ ಮೊದಲಿಗೆ ಪುರಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ಬನ್ನಿ ಅರ್ಪಿಸಲಾಯಿತು. ಅಲ್ಲಿಂದ ಭಕ್ತರು ಹುಕ್ಕೇರಿಮಠದಲ್ಲಿ ಸದಾಶಿವ ಸ್ವಾಮೀಜಿಗಳಿಗೆ ಬನ್ನಿ ಅರ್ಪಿಸಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಮೆರವಣಿಗೆ ಮೂಲಕ ತಂಡೋಪತಂಡವಾಗಿ ತೆರಳಿ ಪೂಜೆ ಸಲ್ಲಿಸಿ, ಪೂಜೆ ಸಲ್ಲಿಸಿ ಬನ್ನಿ ಸಮರ್ಪಿಸಲಾಯಿತು. ಬಳಿಕ ಬನ್ನಿಗಿಡದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲ ಸಮಾಜದ ಬಾಂಧವರು ''''''''ಬನ್ನಿ ತೊಗೊಂಡು ನಾವು-ನೀವು ಬಂಗಾರದಂಗ ಇರೋಣ'''''''' ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಪರಸ್ಪರರು ಬನ್ನಿ ಎಲೆಗಳನ್ನು ಹಿಡಿದು ಬನ್ನಿ ಹಂಚಿಕೊಂಡು ಸಂಭ್ರಮಪಟ್ಟರು. ಪರಸ್ಪರರು ಬನ್ನಿ ವಿನಿಮಯ ಮಾಡಿಕೊಂಡು ಸಹೋದರತ್ವ, ಸಹಭಾಳ್ವೆ ಪ್ರೀತಿಗೆ ಪಾತ್ರರಾಗಲು ಮನೆ ಹಿರಿಯರಿಗೆ ನಮಿಸಿ ಆಶೀರ್ವಾದ ಪಡೆದುಕೊಂಡರು.ದೇವಿ ಪೂಜೆ ನಡೆಸಲು ಹಾಗೂ ಬನ್ನಿ ಮುಡಿಯುವ ಸಲುವಾಗಿ ಬೆಳಗ್ಗೆ ಮಾರುಕಟ್ಟೆಗೆ ತೆರಳಿ ಹೂ, ಹಣ್ಣು, ಬಾಳೆ ದಿಂಡು, ಚೆಂಡು ಹೂ, ಜೋಳದ ದಂಟು, ಕಬ್ಬು ಖರೀದಿ ಮಾಡಿದರು. ವಿವಿಧ ಗ್ರಾಮಗಳಲ್ಲಿ ಮನೆ ದೇವಸ್ಥಾನ, ಮಠಗಳಿಗೆ, ದೇವರ ಕರ್ತೃಗೆ ಗದ್ದುಗೆ ತೆರಳಿ ಬನ್ನಿ ನೀಡಿ ದೇವರ ಕೃಪೆಗೆ ಪಾತ್ರರಾದರು.ಶ್ರೀ ದ್ಯಾಮವ್ವ, ಕಾಳಿಕಾ ದೇವಿ ಕಾರ್ಯಕ್ರಮ: ಹಾವೇರಿಯ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿ ಬನ್ನಿ ಮುಡಿಯುವ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ನಗರದ ಹೊರವಲಯದಲ್ಲಿರುವ ಪೂಜಾ ಸ್ಥಳಕ್ಕೆ ತೆರಳಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು.