ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕೆ ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮತ್ತು ಇತರ ಮಾರ್ಗೋಪಾಯದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಜತೆಗೆ ರಾಜ್ಯದ ಪ್ರಮುಖ ಅಣೆಕಟ್ಟು ಗೇಟ್‌ಗಳ ಸದೃಢತೆಯನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ ಅಗತ್ಯ ಕಂಡುಬಂದಲ್ಲಿ ಗೇಟ್‌ಗಳ ದುರಸ್ತಿ ಮತ್ತು ಬದಲಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಸಿಎಂ ಪ್ರಸ್ತಾಪಿಸಿದ್ದಾರೆ.ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕೆ ಕೊಪ್ಪಳದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮತ್ತು ಇತರ ಮಾರ್ಗೋಪಾಯದ ಬಗ್ಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ. ಪ್ರತಿ ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪವಾದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 105 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಹೂಳಿನ ಗೋಳಿನಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ರೈತರನ್ನು ಯಾವಾಗ ಪಾರು ಮಾಡಲಾಗುತ್ತದೆ ಎಂಬುದೇ ಈಗ ಎದ್ದಿರುವ ಪ್ರಶ್ನೆಯಾಗಿದೆ.
ಇನ್ನೂ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು 40 ಟಿಎಂಸಿಯಷ್ಟು ನೀರು ನದಿಪಾಲಾಗಿತ್ತು. ಈಗ ಈ ಗೇಟ್‌ಗೆ ಸ್ಪಾಪ್ ಲಾಗ್ ಅಳವಡಿಕೆ ಮಾಡಲಾಗಿದೆ. ಉಳಿದ ಗೇಟ್‌ಗಳ ಸ್ಥಿತಿ ಬಗ್ಗೆ ಅಧ್ಯಯನ ಕೂಡ ನಡೆದಿದೆ. ಹಾಗಾಗಿ ಸಮರೋಪಾದಿಯಲ್ಲಿ ಗೇಟ್‌ಗಳ ದುರಸ್ತಿ ಇಲ್ಲವೇ ಬದಲಾವಣೆ ಮಾಡುವ ಕಾರ್ಯ ನಡೆಯಬೇಕು ಎಂಬುದು ಈ ಭಾಗದ ರೈತರ ಒತ್ತಾಸೆಯೂ ಆಗಿದೆ.ವಿಜಯನಗರ ಜಿಲ್ಲೆಯಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನೀಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಕೋಲಾರ, ರಾಮನಗರ ಜಿಲ್ಲೆಗಳ ಜತೆಗೆ ವಿಜಯನಗರ ಜಿಲ್ಲೆಯಲ್ಲೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಎಐ ಆಧಾರಿತ ಕ್ಯಾಮೆರಾ: ವಾಹನಗಳ ಸಂಚಾರ ಮೇಲ್ವಿಚಾರಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಹೊಸಪೇಟೆಯಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತದೆ. ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ವಿವಿಧ ನಗರಗಳಿಗೆ ₹50 ಕೋಟಿ ಮೀಸಲಿಡಲಾಗಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಪೊಲೀಸರು ಹಾಗೂ ಆರ್‌ಟಿಐಗಳಿಗೆ ಅನುಕೂಲ ಆಗಲಿದೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ವಿಭಾಗ ಮಟ್ಟದ ಆಸ್ಪತ್ರೆಯನ್ನಾಗಿಸಲು ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ.
ಮಹಿಳಾ ಗರ್ಭಕಂಠದ ಕ್ಯಾನ್ಸರ್ ತಡೆಗೆ ಗಣಿಬಾಧಿತ ಪ್ರದೇಶದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲು ಕ್ರಮವಹಿಸಲಾಗಿದೆ. ಇನ್ನೂ ಕಲ್ಯಾಣ ಕರ್ನಾಟಕದ 20 ತಾಲೂಕುಗಳನ್ನು ಕೂಡ ಆಯ್ಕೆ ಮಾಡಲಾಗಿದೆ. ಇದಕ್ಕೆ ₹9 ಕೋಟಿ ಮೀಸಲಿಡಲಾಗಿದೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸೂಚ್ಯಂಕ ಹೆಚ್ಚಿಸಲು ವಿವಿಧ ಆರೋಗ್ಯ ಸಂಬಂಧಿತ ಕ್ರಮವಹಿಸಲು ₹873 ಕೋಟಿ ಮೀಸಲಿರಿಸಲಾಗಿದೆ. ಅಲ್ಲದೇ, ತಾಯಿ ಮರಣ ಶೂನ್ಯಕ್ಕೆ ಇಳಿಸಲು ₹320 ಕೋಟಿ ಮೀಸಲಿಡಲಾಗಿದೆ. ಇದರಿಂದ ಬಾಣಂತಿಯರ ಸಾವಿನ ಪ್ರಮಾಣ ತಡೆಗಟ್ಟಲು ಅಭಿಯಾನ ಮಾದರಿ ಅನುಸರಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ವಸತಿ ಶಾಲೆ ತೆರೆದು ಶಿಕ್ಷಣ ನೀಡಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಇನ್ನೂ ಗ್ರಾಮ ಪಂಚಾಯಿತಿಗಳನ್ನು ಸರ್ಕಾರಿ ಅಧಿಕಾರಿಗಳು ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆ ಕೂಡ ಹೊಂದಲಾಗಿದೆ.
ಪ್ರವಾಸಿ ಮಿತ್ರರಿಗೆ ಆದ್ಯತೆ: ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರ ಸಂಖ್ಯೆಯನ್ನು ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಇನ್ನೂ ಪ್ರವಾಸಿಗರಿಗೆ ಮಾಹಿತಿ ನೀಡಲು 24/7 ಪ್ರವಾಸಿ ಸಹಾಯವಾಣಿ ತೆರೆಯಲಾಗುತ್ತಿದೆ. ಇದರಿಂದ ಹಂಪಿ ಪ್ರವಾಸೋದ್ಯಮ ಬೆಳವಣಿಗೆಗೆ ಸಹಾಯವಾಗಲಿದೆ. ಹಂಪಿಗೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರಿಗೆ ಪ್ರವಾಸಿ ಮಿತ್ರರಿಂದ ಭದ್ರತೆ ದೊರೆಯಲಿದೆ. ಇನ್ನೂ ಸಹಾಯವಾಣಿ ಪ್ರವಾಸಿಗರಿಗೆ ಪೂರಕವಾಗಲಿದೆ.