ಮಡಿಕೇರಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಮಡಿಕೇರಿ ನಗರದ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಇ.ಡಿ. ಪರದೆಯ ಮೂಲಕ ಕೇಂದ್ರದ ಆಹಾರ ಭದ್ರತೆ ಖಾತ್ರಿ, ಜಲಜೀವನ ಮಿಷನ್, ಪಿಎಂ ಸ್ವನಿಧಿ, ವಿಶ್ವಕರ್ಮ, ವಸತಿ, ಉಜ್ವಲ, ಆರೋಗ್ಯ, ಮುದ್ರಾ ಸೇರಿದಂತೆ ಅನೇಕ ಯೋಜನೆಗಳ ಕುರಿತು ಹಾಗೂ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೃಶ್ಯಾವಳಿಗಳ ಮೂಲಕ ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರ ಸರ್ಕಾರದ ಯೋಜನೆಗಳನ್ನು ಕಡೆಯ ಮೈಲಿಯವರೆಗೂ ತಲುಪಿಸುವ ಉದ್ದೇಶ ಹೊಂದಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಬುಧವಾರ ಮಡಿಕೇರಿಗೆ ಆಗಮಿಸಿತು.

ನಗರದ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಇ.ಡಿ. ಪರದೆಯ ಮೂಲಕ ಕೇಂದ್ರದ ಆಹಾರ ಭದ್ರತೆ ಖಾತ್ರಿ, ಜಲಜೀವನ ಮಿಷನ್, ಪಿಎಂ ಸ್ವನಿಧಿ, ವಿಶ್ವಕರ್ಮ, ವಸತಿ, ಉಜ್ವಲ, ಆರೋಗ್ಯ, ಮುದ್ರಾ ಸೇರಿದಂತೆ ಅನೇಕ ಯೋಜನೆಗಳ ಕುರಿತು ಹಾಗೂ ಅನುಷ್ಠಾನಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೃಶ್ಯಾವಳಿಗಳ ಮೂಲಕ ಪ್ರದರ್ಶಿಸಲಾಯಿತು. ಜೊತೆಗೆ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ 2047 ರ ವೇಳೆಗೆ ಭವ್ಯ, ಅಭಿವೃದ್ಧಿಪಥದ ದೇಶ ನಿರ್ಮಿಸುತ್ತೇವೆ ಎಂದು ಸಂಕಲ್ಪ ಮಾಡಿದರು.

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಬಲಿಷ್ಠ, ಸ್ವಾವಲಂಬಿ ರಾಷ್ಟ್ರದ ಸಂಕಲ್ಪದೊಂದಿಗೆ ಹೆಜ್ಜೆ ಇಟ್ಟ ಮೋದಿ ಅವರ ಚಿಂತನೆ ಹಂತಹಂತವಾಗಿ ಕಾರ್ಯಗತಗೊಳ್ಳುತ್ತ, ದೇಶ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಎಲ್ಲ ವರ್ಗದವರನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಅದರ ಪ್ರಯೋಜನವನ್ನು ಅರ್ಹರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಕಾರ್ಯಕ್ರಮದ ಉದ್ದೇಶ ಎಂದರು. ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನುಮಂಜುನಾಥ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ನಗರ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಜಗದೀಶ್, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಬಿ.ಎಂ. ರಾಜೇಶ್, ನಗರಸಭಾ ಸದಸ್ಯರುಗಳಾದ ಸಬಿತಾ, ಶಾರದ ನಾಗಾರಾಜ್, ಉಷಾ ಕಾವೇರಪ್ಪ, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಲಕ್ಷ್ಮೀಕಾಂತ್‌ ಮೊದಲಾದವರು ಉಪಸ್ಥಿತರಿದ್ದರು.

Share this article