ಎಸಿಒ ಶಾಲೆಯಲ್ಲಿ ಹಳ್ಳಿಯ ಸೊಗಡು, ಚಿಣ್ಣರ ಕಲರವ: ಗುರುಮಹಾಂತ ಸ್ವಾಮೀಜಿ

KannadaprabhaNewsNetwork | Published : Feb 21, 2025 12:49 AM

ಸಾರಾಂಶ

ಗ್ರಾಮೀಣ ಕಲೆ, ಜಾನಪದ ಹಾಗೂ ಹಳ್ಳಿಯ ಜೀವನ ಶೈಲಿಯನ್ನು ಆಧುನಿಕತೆಯ ಸೋಂಕಿಲ್ಲದೆ ಪುನರ್ನಿಮಿಸಿರುವ ಎಸಿಒ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ ಹಾಗೂ ಆಚರಣೆಗಳು ಸ್ಫೂರ್ತಿ ನೀಡುವಲ್ಲಿ ಸಫಲವಾಗಿವೆ ಎಂದು ವಿಜಯ ಮಹಾಂತೇಶ ಮಠದ ಪೀಠಾಧೀಶ ಗುರುಮಹಾಂತ ಶ್ರೀಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಗ್ರಾಮೀಣ ಕಲೆ, ಜಾನಪದ ಹಾಗೂ ಹಳ್ಳಿಯ ಜೀವನ ಶೈಲಿಯನ್ನು ಆಧುನಿಕತೆಯ ಸೋಂಕಿಲ್ಲದೆ ಪುನರ್ನಿಮಿಸಿರುವ ಎಸಿಒ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ ಹಾಗೂ ಆಚರಣೆಗಳು ಸ್ಫೂರ್ತಿ ನೀಡುವಲ್ಲಿ ಸಫಲವಾಗಿವೆ ಎಂದು ವಿಜಯ ಮಹಾಂತೇಶ ಮಠದ ಪೀಠಾಧೀಶ ಗುರುಮಹಾಂತ ಶ್ರೀಗಳು ಅಭಿಪ್ರಾಯಪಟ್ಟರು.

ನಗರದ ಕಲೆ ಮತ್ತು ಸಾಂಸ್ಕೃತಿಕ ಸಂಘದ ಅಡಿಯಲ್ಲಿ ಎಸಿಒ ಶಾಲೆ ಏರ್ಪಡಿಸಿದ ಹಳ್ಳಿಯ ಸೊಗಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಶಿರೂರು ವಿಜಯಮಹಾಂತ ತೀರ್ಥದ ಶ್ರೀ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮವನ್ನು ಪ್ರಶಂಸಿಸಿದರು.

ಸಂಸ್ಥೆಯ ನಿರ್ದೇಶಕರಾದ ಬಂಡು ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಳ್ಳಿಯ ಜೀವನದ ಉತ್ತಮ ಅಂಶಗಳ ಬಗ್ಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ದರಕ ಅವರು ವಹಿಸಿದ್ದರು. ಹಿರಿಯ ಸದಸ್ಯರಾದ ಡಾ.ಜಿ.ಕೆ. ಕಾಖಂಡಕಿ, ಎಂ.ವಿ. ಪಾಟೀಲ, ವಿಜಯಕುಮಾರ ಹಂಚಾಟೆ, ವೆಂಕಣ್ಣ ಸೂಳಿಕಲ್, ವಿಶ್ವನಾಥ ಪತ್ತಾರ, ಬಸವರಾಜ ಮದಗಲ್, ಹರೀಶ ದೀವಟೆ, ವಿದ್ಯಾಧರ ರ‍್ಯಾವಣಕಿ, ಯಮನೂರ ಸಾಕಾ, ಕಾರ್ಯದರ್ಶಿ ಸಂತೋಷ ಗೋಟೂರ, ಖಜಾಂಚಿ ಚಂದ್ರಕಾಂತ ಮಾರಾ ಇತರರು ವೇದಿಕೆ ಮೇಲಿದ್ದರು.

ವಿಜಯ ಮಹಾಂತೇಶ ಮಠದಿಂದ ಡೊಳ್ಳು ಮೆರವಣಿಗೆಯಲ್ಲಿ ಉಭಯ ಶ್ರೀಗಳು ಪಾದಯಾತ್ರೆ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಪಾಲಕರು ಹಾಗೂ ಸಾರ್ವಜನಿಕರು ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮರುಕಳಿಸಿದ ಹಳ್ಳಿಯ ವೈಭವ: ಕಾರ್ಯಕ್ರಮವು ಕೇವಲ ಅಣಕು ಪ್ರದರ್ಶನಗಳಾಗಿರದೆ ನಿಜವಾಗಿಯೂ ಹಳ್ಳಿಯನ್ನು ಮರುಸೃಷ್ಟಿಗೊಳಿಸಲಾಗಿತ್ತು. ಹಳ್ಳಿಗಳ ಕೂಡುಕುಟುಂಬಗಳ ಅಡುಗೆಮನೆಯನ್ನು ಪ್ರದರ್ಶಿಸಿ ಬಂದವರಿಗೆಲ್ಲ ನಿಜವಾಗಿಯೂ ಬಿಸಿಬಿಸಿ ರೊಟ್ಟಿ-ಪಲ್ಯಗಳನ್ನು ತಿನ್ನಲು ಕೊಡುವ ದೃಶ್ಯವು ಜನರಲ್ಲಿ ಸಂಚಲವನ ಮೂಡಿಸಿತು. ಅಲ್ಲಿಯೇ ತಾಜಾ ಮಜ್ಜಿಗೆ ಕಡೆದು ಕುಡಿಯಲು ಕೊಡಲಾಗುತ್ತಿತ್ತು. ಕೇರುವುದು, ಬೀಸುವುದು, ಕುಟ್ಟುವುದು, ಶಾವಿಗೆ ಹೊಸೆಯುವುದು, ಗೌರಿಗೆ ಆರತಿ ಆಕರ್ಷಕವಾಗಿದ್ದವು. ಒಳಕಲ್ಲಿನ ಪೂಜೆ ವಿಭಿನ್ನವಾಗಿತ್ತು. ವಿದ್ಯಾರ್ಥಿನಿಯರು ಹಳ್ಳಿಯ ಹಾಡು ಹೇಳಿ ಆರತಿ ಮಾಡಿ ಪೂಜೆ ಮಾಡುವುದು ಪ್ರೇಕ್ಷಕರಿಗೆ ಇಷ್ಟವಾಯಿತು. ಹಳ್ಳಿಯ ಮದುವೆ, ಬಳೆ ಇಡಿಸುವ ಕಾರ್ಯಕ್ರಮ, ಆರತಕ್ಷತೆ, ಮಗುವಿನ ನಾಮಕರಣ, ಆಯುಧ ಪೂಜೆ, ಚೌಕಾಬಾರ ಆಟಗಳನ್ನು ವಿದ್ಯಾರ್ಥಿಗಳು ಅದ್ಭುತವಾಗಿ ಪ್ರಸ್ತುಪಡಿಸಿದರು.

ವಿಜಯ ಮಹಾಂತಸ್ವಾಮಿಗಳ ಜಾತ್ರಾ ಮಹೋತ್ಸವದ ಪ್ರದರ್ಶನದಲ್ಲಿ ಗಡಿಗೆ, ಬಟ್ಟೆ, ಅಲಂಕಾರ ಸಾಮಗ್ರಿ ಹಾಗೂ ಹಣ್ಣು ಮುಂತಾದ ಆಹಾರ ಪದಾರ್ಥಗಳ ನೈಜ ಅಂಗಡಿ ಮುಂಗಟ್ಟುಗಳ ಸಾಲು, ಅಂಗಡಿಕಾರನ ವೇಷದ ವಿದ್ಯಾರ್ಥಿಯು ಬಂದವರಿಗೆ ಕುಡಿಯಲು ನಿಜವಾಗಿಯೂ ಹಾಲು ನೀಡುತ್ತಿದ್ದ, ನಾಗಪಂಚಮಿ ಹಾಲೆರೆಯವ, ಮೊಹರಂ ದೇವರು, ಅಲಾಯಿ ಆಡುವುದು, ಡೊಳ್ಳು ಬಾರಿಸುವುದು, ಜಡಿಬೂಟಿ, ಹಳ್ಳಿಯ ಟೇಲರ್‌ಗಳು, ರಾಶಿ ಕಣದಲ್ಲಿ ಜೋಳ ಶೇಖರಿಸುವುದು, ಕಣಿ ಹೇಳುವವರು, ಹೆಳವರು, ಸಾರುವ ಅಯ್ಯನವರು ಸೇರಿದಂತೆ ಇಡೀ ಕಾರ್ಯಕ್ರಮಗಳು ಹಳ್ಳಿಯ ವೈಭವ ಮರುಕಳಿಸುವಂತಿದ್ದವು.

Share this article