ರಾಘು ಕಾಕರಮಠ
ಅಂಕೋಲಾ: ಮಂಗಾರು ಮಳೆಯ ಅಬ್ಬರಕ್ಕೆ ತಾಲೂಕಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ 850 ಮನೆಗಳು ಜಲಪ್ರಳಯಕ್ಕೆ ತುತ್ತಾಗುತ್ತಿದ್ದವು. ಇದನ್ನು ತಡೆಗಟ್ಟಲು ಭೂರಮೆಯಲ್ಲಿ ಶೇಖರಣೆಗೊಂಡ ನೀರನ್ನು ಸಮುದ್ರಕ್ಕೆ ಕೋಡಿ ಕಡಿದು ಹರಿಬಿಡುವ ಕಾರ್ಯವು ಭಾನುವಾರ ಸಂಜೆ ಇಲ್ಲಿಯ ನದಿಭಾಗದ ಸಂಗಮ ತೀರದಲ್ಲಿ ನೆರವೇರಿತು.
ಇಲ್ಲಿನ ಪ್ರದೇಶದಲ್ಲಿ ಬಿದ್ದ ಮಳೆ ಸಹಜವಾಗಿ ಹರಿದು ಸಮುದ್ರ ಸೇರಬೇಕು. ಆದರೆ ಘಟ್ಟದ ಮೇಲಿಂದ ಬಂದ ನೀರಿನೊಡನೆ ಇಲ್ಲಿಯ ಮಳೆ ನೀರು ಸೇರಿ ಸಮುದ್ರಕ್ಕೆ ಸಾಗದೇ ಇಲ್ಲಿನ ಪ್ರದೇಶಗಳಲ್ಲಿ ಜಲಾವೃತಗೊಳ್ಳುತ್ತದೆ. ಹೀಗಾಗಿ ನದಿಭಾಗದಲ್ಲಿ ಭೂ ಭಾಗದಲ್ಲಿ ಸಂಗ್ರಹವಾದ ನೀರನ್ನು ನದಿಭಾಗದ ಮುಖಜ ಪ್ರದೇಶದಿಂದ ಸಮುದ್ರ ಸಂಗಮದಲ್ಲಿ ಮರಳನ್ನು ತೆಗೆದು ನೀರನ್ನು ಬಿಡಲಾಗುತ್ತದೆ. ಇದಕ್ಕೆ ಕೋಡಿ ಕಡಿಯುವುದು ಎನ್ನಲಾಗುತ್ತದೆ. ಒಂದು ವೇಳೆ ಪ್ರತಿವರ್ಷ ಕೋಡಿ ಕಡಿಯದೇ ಹೋದರೆ ಸುತ್ತಲಿನ 8 ಗ್ರಾಮಗಳು ಜಲಪ್ರಳಯದಲ್ಲಿ ಸಿಲುಕಿ ತನ್ನ ನೆಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
ತಾಲೂಕಿನ ಸಮುದ್ರದಂಚಿನ 7 ಕಿಮೀ ವ್ಯಾಪ್ತಿಯ ಬೊಬ್ರವಾಡ, ವಂದಿಗೆ ಶೇಟಗೇರಿ ಹಾಗೂ ಬೆಳಂಬಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಗೇರಿ, ತೆಂಕಣಕೇರಿ, ನದಿಭಾಗ, ಬೆಳಂಬಾರ, ಲಕ್ಷ್ಮೇಶ್ವರ, ವಂದಿಗೆ, ಖಾರ್ವಿವಾಡಾ ಭಾಗದಲ್ಲಿ ಮಳೆ ನೀರು ಶೇಖರಣೆಗೊಂಡು ಗ್ರಾಮ ಜಲಾವೃತವಾಗಿತ್ತು. ಸುಮಾರು 850 ಮನೆಗಳಲ್ಲಿ ಈಗಾಗಲೇ 2 ಮನೆಗಳಿಗೆ ನೀರು ನುಗ್ಗಿತ್ತು. ಉಳಿದ ಮನೆಗಳಿಗೆ ನೀರು ಮನೆಯ ಮೆಟ್ಟಿಲಿನ ತನಕ ಬಂದು ನಿಂತಿತ್ತು. ಹೀಗಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ನದಿಭಾಗದ ಜನರು ಕೋಡಿ ಕಡಿದು ನೀರನ್ನು ಸಮುದ್ರಕ್ಕೆ ಬಿಟ್ಟು ಜಲಪ್ರಳಯದಿಂದ ದೂರವಾಗಲು ಕಾರಣರಾದರು.
ಕೋಡಿಯ ಆತಂಕ: ಕೋಡಿ ಕಡಿಯುವ ಸಮಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿರುತ್ತದೆ. ಏಕೆಂದರೆ ಕೋಡಿ ಕಡೆಯುವಾಗ ಒಂದೇ ಸಮನೆ ನಿಂತ ನೀರು ಸಮುದ್ರ ಕಡೆಗೆ ನುಗ್ಗುವುದರಿಂದ ಕೊಚ್ಚಿ ಹೋಗುವ ಸಾಧ್ಯತೆಗಳಿರುತ್ತದೆ. 32 ವರ್ಷಗಳ ಹಿಂದೆ ಕೋಡಿ ಕಡಿಯುವಾಗ ಎರಡು ಜನ ಸಮುದ್ರಪಾಲಾಗಿರುವುದನ್ನು ಸ್ಮರಿಸಬಹುದು. ಸಮುದ್ರ ದೇವನಿಗೆ ಪೂಜಾ ಕಾರ್ಯ, ಬಲಿ ವಿಧಾನಗಳು ಪೂರೈಸಿ ಇಲ್ಲಿ ಕೋಡಿ ಕಡಿಯುವ ಅನುಭವವಿದ್ದವರನ್ನು ಮಾತ್ರ ಕೋಡಿ ಕಡಿಯುವ ಕಾರ್ಯಕ್ಕೆ ಕೈ ಹಚ್ಚುತ್ತಾರೆ.
ಸುಮಾರು 18 ವರ್ಷಗಳ ಹಿಂದೆ ಜಲಾವೃತಗೊಳ್ಳುವ ಎಲ್ಲ ಗ್ರಾಮದವರೂ ಈ ಕೋಡಿ ಕಡಿಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರಂತೆ. ಆದರೆ ಈಗ ನದಿಭಾಗದ ಜನತೆ ಮಾತ್ರ ಈ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮ ಸಾಮಾಜಿಕ ಸೇವೆಯನ್ನು ಪ್ರಕಟಿಸುತ್ತಾ ಬಂದಿದ್ದಾರೆ.
ಗ್ರಾಮ ಪಂಚಾಯಿತಿ ಬೊಬ್ರವಾಡ ಹಾಗೂ ತಾಲೂಕಾಡಳಿತದ ಆಶ್ರಯದಲ್ಲಿ ನದಿಭಾಗದ ನೂರಾರು ನಾಗರಿಕರು ಕೋಡಿ ಕಡೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬ್ರಿಟಿಷ ಆಡಳಿತಾವಧಿಯಲ್ಲಿ ಕೋಡಿ ಕಡಿಯುವುದಕ್ಕಾಗಿ ₹20 ನೀಡುತ್ತಿದ್ದರಂತೆ. ಆದರೆ ಈಗ ಬೊಬ್ರವಾಡ ಗ್ರಾಮ ಪಂಚಾಯಿತಿ ಈ ಕೋಡಿ ಕಡಿಯುವ ಕಾರ್ಯಕ್ಕೆ ₹10 ಸಾವಿರ ಪ್ರತಿವರ್ಷ ಗೌರವಧನ ನೀಡುತ್ತಿದೆ.
ಕೋಡಿ ಕಡಿಯುವ ಕಾರ್ಯದಲ್ಲಿ ಚಂದ್ರಕಾಂತ ನಾಯ್ಕ, ಲಿಂಗಪ್ಪ ಶಂಕರ ನಾಯ್ಕ, ವಿನೋದ ನಾಯ್ಕ, ರಮೇಶ ನಾಯ್ಕ, ಪಾಂಡುರಂಗ ಡಾಂಗಿ, ಹರೀಶ ನಾಯ್ಕ, ಕಿರಣ, ರಾಜು ನಾಯ್ಕ, ರೂಪೇಶ ನಾಯ್ಕ, ಉದಯ ನಾಯ್ಕ, ಶ್ರೀಧರ ನಾಯ್ಕ, ನಿರಂಜನ ನಾಯ್ಕ, ಮಹೇಶ ನಾಯ್ಕ, ರಾಮಕೃಷ್ಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಮಂಜುನಾಥ ಶಂಕರ ನಾಯ್ಕ, ಗ್ರಾಮ ಸಹಾಯಕ ವಿನೋದ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರತೀತಿ: ಈ ಜನಹಿತ ಕೈಂಕರ್ಯವು ಪುರಾತನ ಕಾಲದಿಂದಲೂ ನಡೆಯುತ್ತ ಬಂದಿದೆ. ಇದಕ್ಕೆ ಧಾರ್ಮಿಕವಾಗಿ ಪ್ರತೀತಿ ಇದೆ. ಬೊಬ್ರದೇವರು, ನದಿ ಆಚೆ ಇರುವ ಬೆಳಂಬಾರ ಕುಸ್ಲ ದೇವಸ್ಥಾನಕ್ಕೆ ಬಂಡೆ ಆಟವಾಡಲು ಹೋಗಲು ಸಮುದ್ರ ಸಂಗಮ ಪ್ರದೇಶದಲ್ಲಿ ಮರಳಿನ ರಾಶಿಯನ್ನೇ ನಡೆದಾಡಲು ಸೇತುವೆ ನಿರ್ಮಿಸಿ ದೇವರು ಹೋಗಿ ಬರುವ ದಾರಿಯನ್ನೆ ದೈವದತ್ತ ಕೋಡಿ ಎಂದು ಕರೆಯುಲಾಗುತ್ತದೆ ವಿನೋದ ನಾಯ್ಕತಿಳಿಸಿದರು.
₹10 ಸಾವಿರ ಅನುದಾನ: ಕೋಡಿ ಕಡಿಯುವ ಕಾರ್ಯಕ್ಕೆ ಬೊಬ್ರವಾಡ, ಶೆಟಗೇರಿ, ವಂದಿಗೆ, ಬೆಳಂಬಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರು ಸಹ ಕೈಜೋಡಿಸುವಂತಾಗಬೇಕು. ಬೊಬ್ರವಾಡ ಗ್ರಾಪಂ ಮಾತ್ರ ₹10 ಸಾವಿರ ಅನುದಾನ ನೀಡುತ್ತಿದೆ. ಉಳಿದ ಗ್ರಾಪಂಗಳು ತಲಾ ₹10 ಸಾವಿರದಂತೆ ನೀಡಲು ಠರಾವು ಕೂಡ ಮಾಡಲಾಗಿದೆ. ಆದರೆ ಇದ್ಯಾವುದು ಕಾರ್ಯರೂಪಕ್ಕೆ ಬರದಿರುವುದು ದುರದೃಷ್ಟಕರ ಎಂದು ಚಂದ್ರಕಾಂತ ನಾಯ್ಕ ತಿಳಿಸಿದರು.