ಕುಡಿಯುವ ನೀರಿನ ತೀವ್ರ ಅಭಾವ । ಕೂಲಿ ಕಾರ್ಮಿಕರೇ ಹೆಚ್ಚಿರುವ ಗ್ರಾಮದ 80 ಕುಟುಂಬಗಳಿಗೆ ತೊಂದರೆ । ಅಧಿಕಾರಿಗಳ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಹನೂರು
ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ರಾಮಾಪುರ ಗ್ರಾಪಂ ವ್ಯಾಪ್ತಿಯ ಮಾಮರದೊಡ್ಡಿ ಗ್ರಾಮದಲ್ಲಿ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದ ಜನತೆಯ ಗೋಳು ಕೇಳುವವರು ಇಲ್ಲದಂತಾಗಿದೆ.ಹನೂರು ತಾಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಮರದೊಡ್ಡಿ ಗ್ರಾಮದಲ್ಲಿ 80 ಕುಟುಂಬಗಳ 300ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸದೆ ಜನಪ್ರತಿನಿಧಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನತೆ ಪರಿತಪಿಸುವಂತಾಗಿದೆ.
ಮಾಮರದೊಡ್ಡಿ ಗ್ರಾಮ ಇಲ್ಲಿನ ಜನತೆ ನಿತ್ಯ ಕುಡಿಯುವ ನೀರಿನ ಶೇಖರಣೆ ಮಾಡಲು ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಇದ್ದರೂ ಸಹ ನೀರಿನ ಸಮಸ್ಯೆ ನೀಗಿಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಿಲ್ಲ. ಹಲವಾರು ಬಾರಿ ನಿವಾಸಿಗಳು ದೂರು ಸಲ್ಲಿಸಿದ್ದರೂ ಸಹ ಒಂದು ಬಾರಿಯೂ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಮರದೊಡ್ಡಿ ಗ್ರಾಮದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸಿಸುತ್ತಿರುವುದರಿಂದ ಇತ್ತ ಯಾವ ಜನಪ್ರತಿನಿಧಿ ಅಧಿಕಾರಿಗಳು ಸಹ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮವಹಿಸದೆ ಇರುವುದರಿಂದ ಇಲ್ಲಿನ ಕೂಲಿ ಕಾರ್ಮಿಕರು ನಿತ್ಯ ಕೂಲಿ ಕೆಲಸ ಬಿಟ್ಟು ನೀರಿನ ಶೇಖರಣೆ ಮಾಡುವುದು ಅನಿವಾರ್ಯವಾಗಿದೆ. ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಗ್ರಾಮಸ್ಧರು ಒತ್ತಾಯಿಸಿದ್ದಾರೆ.
ಮನೋಜಮ್ಮ, ರೈತ ಸಂಘ, ಗ್ರಾಮ ಘಟಕ, ಮಾಮರದೊಡ್ಡಿ
ಪುಷ್ಪಲತಾ. ಗ್ರಾಪಂ ಅಭಿವೃದ್ಧಿ ಅಧಿಕಾರಿ, ರಾಮಾಪುರ