ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರ ಮತ್ತು ಬೆಂಗಳೂರು ಜಲಮಂಡಳಿಯ ಸಹಯೋಗದಲ್ಲಿ ನೀತಿ ಆಯೋಗ ಆಯೋಜಿಸಿದ್ದ ಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆ ಕುರಿತ ಎರಡು ದಿನದ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ದೇಶದ 11 ರಾಜ್ಯದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆಗೆ ನೀತಿ ಇದೆ. ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತ ಪಡಿಸಲು ಏಕೀಕೃತ ರಾಷ್ಟ್ರೀಯ ಮಾನದಂಡ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಂತರ್ಜಲ ಮಟ್ಟ ಕುಸಿಯುತ್ತಿದೆ. ನದಿಗಳಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಗಂಗಾ ನದಿಯನ್ನು ಪುನಶ್ಚೇತನ ನಡೆಸುವ ಕಾರ್ಯ ಪ್ರಗತಿಯಲ್ಲಿದ್ದು, 2045ರ ವೇಳೆಗೆ ಪೂರ್ಣಗೊಳ್ಳಲಿದೆ. ಕೃಷಿ ಕೆಲಸಕ್ಕೆ ಸಂಸ್ಕರಿಸಿದ ನೀರು ಬಳಸಲು ಉತ್ತೇಜನ ನೀಡಬೇಕು ಎಂದು ಹೇಳಿದರು.ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಪರ ಕಾರ್ಯದರ್ಶಿ ಡಿ. ತಾರಾ ಮಾತನಾಡಿ, ಬೆಂಗಳೂರು ಜಲಮಂಡಳಿಯು ಪ್ರಸ್ತುತ 190 ಕೋಟಿ ರು. ನೀರಿನ ಆದಾಯವನ್ನು ಹೊಂದಿದ್ದು, ಪುನರ್‌ಬಳಕೆ, ಮೀಟರಿಂಗ್ ಮತ್ತು ವ್ಯವಸ್ಥಿತ ಮರುಬಳಕೆಯಿಂದ ಈ ಆದಾಯವನ್ನು ಒಂದು ಸಾವಿರ ಕೋಟಿ ರು.ಗೆ ಏರಿಸಬಹುದಾಗಿದೆ. ಜಲಮಂಡಳಿಯು ನೀರಿನ ಲೆಕ್ಕಪತ್ರ ಮತ್ತು ಪುನರ್‌ಬಳಕೆಯನ್ನು ನಿರ್ವಹಿಸಲು ವೃತ್ತಿಪರ ವಿಭಾಗ ಸ್ಥಾಪಿಸುವ ಅಗತ್ಯವಿದೆ. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ನೀರಿನ ಬಳಕೆ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿಗೆ ಪ್ರತಿದಿನ 2,225 ಎಂಎಲ್‌ಡಿ ನೀರು ಪೂರೈಸುತ್ತಿದೆ. ಜತೆಗೆ ಪ್ರತಿ ನಿತ್ಯ 34 ಒಳಚರಂಡಿ ಸಂಸ್ಕರಿಸುವ ಘಟಕ (ಎಸ್‌ಟಿಪಿ)ದ ಮೂಲಕ 1,350 ಎಂಎಲ್‌ಡಿ ಸಂಸ್ಕರಿಸಲಾಗುತ್ತಿದೆ. ಬಾಕಿ ಇರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು 12 ಹೊಸ ಎಸ್‌ಟಿಪಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.