ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಕಠಿಣ ಶಿಕ್ಷೆ: ಜಿಲ್ಲಾಧಿಕಾರಿ ವೈಶಾಲಿ

KannadaprabhaNewsNetwork |  
Published : Mar 19, 2024, 12:52 AM IST
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜರುಗಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಮಾತನಾಡಿದರು. | Kannada Prabha

ಸಾರಾಂಶ

ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಮುದ್ರಕರು ಕಾರ್ಯನಿರ್ವಹಿಸಬೇಕು. ಜತೆಗೆ ಎಲ್ಲರೂ ಮಾದರಿ ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಿಟಿಂಗ್ ಪ್ರೆಸ್ ಮಾಲೀಕರಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚನೆ ನೀಡಿದ್ದಾರೆ.

ಗದಗ: ಲೋಕಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಯೋಗದ ಮಾರ್ಗಸೂಚಿಯ ಅಡಿಯಲ್ಲಿ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣಾ ಪ್ರಚಾರದ ಸಾಮಗ್ರಿಗಳ ಮುದ್ರಣ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜರುಗಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಮುದ್ರಕರು ಕಾರ್ಯನಿರ್ವಹಿಸಬೇಕು. ಜತೆಗೆ ಎಲ್ಲರೂ ಮಾದರಿ ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಆಯೋಗವು ನೀಡಿರುವ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಆರು ತಿಂಗಳ ಜೈಲುವಾಸ ಅಥವಾ ಎರಡು ಸಾವಿರ ರು.ಗಳ ದಂಡ ಇಲ್ಲವೇ ಎರಡೂ ಶಿಕ್ಷೆಗಳನ್ನು ವಿಧಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಪ್ರಿಂಟಿಂಗ್ ಪ್ರೆಸ್ ಮಾಲೀಕರೆಲ್ಲರೂ ಆಯೋಗದ ನಿರ್ದೇಶನಗಳಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣವನ್ನು ಮಾಡಬೇಕೆಂದು ಸೂಚಿಸಿದರು.

ಕರಪತ್ರ, ಭಿತ್ತಿಪತ್ರ ಮುದ್ರಣ ಮಾಡುವಾಗ ಅವುಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಹೆಸರು ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆ ನಮೂದಿಸುವುದನ್ನು ಮರೆಯಬಾರದು. ಮುದ್ರಕರ ಆಯೋಗವು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಕಾಶಕರಿಂದ ವಿವರಗಳನ್ನು ಪಡೆದು ಮುದ್ರಣ ಕಾರ್ಯ ಕೈಗೊಳ್ಳಬೇಕು. ಕರಪತ್ರ, ಪೋಸ್ಟರ್ಸ್ ಅಲ್ಲದೇ ಶಾಲು, ಕ್ಯಾಪ್, ಬಟ್ಟೆ ಮೇಲೆ ಪಕ್ಷದ ಹೆಸರು, ಚಿಹ್ನೆ ಹಾಗೂ ಅಭ್ಯರ್ಥಿಗಳ ಫೋಟೋ ಮುದ್ರಿಸುವ ಬಗ್ಗೆಯೂ ನಿಗಾವಹಿಸಲಾಗುತ್ತಿದೆ. ಎಲ್ಲಿಯೂ ಚುನಾವಣಾ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ, ಚುನಾವಣಾ ಶಾಖೆಯ ತಹಸೀಲ್ದಾರ್‌ ಪ್ರಕಾಶ ನಾಶಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಎಂ.ಎಸ್. ಮೇಲ್ಮನಿ, ಎಸ್.ಪಿ. ಸಾವಳಗಿಮಠ, ವಿನಾಯಕ ಸಾಲಿಮಠ ಹಾಗೂ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ