ಶಿರಸಿ:
ಅರಣ್ಯ ಭೂಮಿ ಅತಿಕ್ರಮಣದಾರರಿಗೆ ನ್ಯಾಯ ಸಿಕ್ಕೇ ಸಿಗಲಿದೆ ಎಂದು ಹಿರಿಯ ಹೋರಾಟಗಾರ, ರಾಜ್ಯ ವಿಧಾನಸಭೆಯ ಮಾಜಿ ಅಧ್ಯಕ್ಷ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ನಗರದಲ್ಲಿ ಶನಿವಾರ ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಜಾಥಾ ಸಭೆಯಲ್ಲಿ ಅವರು ಮಾತನಾಡಿದರು. ಬಡವರು ಜೀವನೋಪಾಯಕ್ಕಾಗಿ ಅತಿಕ್ರಮಣ ಮಾಡಿದ್ದಾರೆ. ಆ ಭೂಮಿ ಅವರ ಹಕ್ಕು, ತಲೆತಲಾಂತರದಿಂದ ಅಲ್ಲಿ ವಾಸವಾಗಿದ್ದಾರೆ. ಅರಣ್ಯ ಭೂಮಿ ಹಕ್ಕಿಗಾಗಿನ ಹೋರಾಟ ಬಡವರ, ಜನಪರ ಹೋರಾಟ. ಜನರಲ್ಲಿಯೂ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇವೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಸರ್ಕಾರ ನಿಮ್ಮ ಜತೆ ಇರುತ್ತದೆ. ಅತಿಕ್ರಮಣದಾರರ ಮೇಲಿನ ದೌರ್ಜನ್ಯ ತಡೆಗೆ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ. ರವೀಂದ್ರನಾಥ ನಾಯ್ಕ ಏಕವ್ಯಕ್ತಿಯಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.ಶಾಸಕ ಸತೀಶ ಸೈಲ್ ಅರಣ್ಯ ಉಳಿದಿದ್ದು ಇಲಾಖೆಯಿಂದ ಅಲ್ಲ. ಅರಣ್ಯ ವಾಸಿಗಳೇ ಅರಣ್ಯ ಉಳಿಸಿಕೊಂಡಿದ್ದಾರೆ. ಸತೀಶ ಜಾರಕಿಹೋಳಿ ಮನಸ್ಸು ಮಾಡಿದರೆ ಈ ಕಾರ್ಯ ಆಗುತ್ತದೆ ಎಂದರು.ಶಾಸಕ ಭೀಮಣ್ಣ ನಾಯ್ಕ, ಅತಿಕ್ರಮಣದಾರರಿಗೆ ನ್ಯಾಯ ಒದಗಿಸಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ, ಆ ಕೆಲಸವನ್ನು ನಾವು ಮಾಡಲಿದ್ದೇವೆ. ಉತ್ತರ ಕನ್ನಡ ಜಿಲ್ಲೆ ಅರಣ್ಯಭೂಮಿಯೇ ಜಾಸ್ತಿ ಇದ್ದು, ಅನಿವಾರ್ಯವಾಗಿ ಅತಿಕ್ರಮಣ ಮಾಡಿದ್ದಾರೆ. ಜನಕ್ಕೆ ಹಕ್ಕು ಪತ್ರ ನೀಡದಿದ್ದರೆ ನಾವು ನಾಯಕರಾಗಿ ಏನು ಮಾಡಿದಂತಾಗುತ್ತದೆ? ಎಂದು ಪ್ರಶ್ನಿಸಿದರು.ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಮಾತನಾಡಿ, ಇಡೀ ಜಿಲ್ಲೆಯ ಜನತೆ ಆಸೆ ಹೊತ್ತು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸೇರಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ೧೫ ವರ್ಷಗಳು ಕಳೆದರೂ ಇನ್ನೂ ಅತಿಕಮಣದಾರರಿಗೆ ನ್ಯಾಯ ಸಿಕ್ಕಿಲ್ಲ. ೮೫ ಸಾವಿರ ಜನ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಕೇವಲ ಎರಡು ಸಾವಿರ ಜನಕ್ಕೆ ಹಕ್ಕುಪತ್ರ ಲಭಿಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದ್ದರೂ ಅರಣ್ಯ ಅಧಿಕಾರಿಗಳ ಮನಸ್ಸು ಪರಿವರ್ತನೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಅರಣ್ಯ ಅತಿಕ್ರಮಣದಾರರ ಮೇಲೆ ಇದೇ ರೀತಿ ದುರ್ವರ್ತನೆ ಮಾಡಿದರೆ ಅತಿಕ್ರಮಣದಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಈ ಕಾನೂನು ಏಕೆ ಹೇರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಹಳ್ಳಿಗರಿಗೆ ಬದುಕಲು ಸಾಧ್ಯವಿಲ್ಲ. ಎಚ್.ಕೆ. ಪಾಟೀಲ್ ಅವರಿಗೆ ಗದಗದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಾಗಿದೆ. ರಾಜ್ಯದ ಬೇರೆಡೆ ಏಕೆ ಸಾಧ್ಯವಾಗುತ್ತಿಲ್ಲ? ಅತಿಕ್ರಮಣದಾರರಿಗೆ ನ್ಯಾಯ ಒದಗಿಸಲು ಹೊಸ ಕಾನೂನು ಅಗತ್ಯವಿಲ್ಲ. ಇರುವ ಕಾನೂನಿನಲ್ಲೇ ಅವಕಾಶವಿದ್ದು, ಕಸ್ತೂರಿ ರಂಗನ್ ವರದಿ ತಿರಸ್ಕೃತವಾಗಬೇಕು ಎಂದು ಆಗ್ರಹಿಸಿದರು.
ಜಿ.ಎಂ. ಶೆಟ್ಟಿ ಸ್ವಾಗತಿಸಿದರು, ವಕೀಲ ಅನಂತ ನಾಯ್ಕ,ರಾಮಾ ಮೊಗೇರ, ಸಿಎಫ್ ನಾಯ್ಕ ಇತರರಿದ್ದರು.8 ಸಾವಿರಕ್ಕೂ ಅಧಿಕ ಜನಕಸ್ತೂರಿ ರಂಗನ್ ವರದಿ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಜಾಥಾದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 8 ಸಾವಿರಕ್ಕೂ ಅಧಿಕ ಅತಿಕ್ರಮಣದಾರರು ಆಗಮಿಸಿದ್ದರು. ಇಲ್ಲಿಯ ಪೊಲೀಸ್ ಮೈದಾನದಲ್ಲಿ ಕುಳಿತುಕೊಳ್ಳಲೂ ಜಾಗವಿಲ್ಲದೇ ಹಲವರು ನೆಲದ ಮೇಲೆ ಕುಳಿತರೆ, ಅನೇಕರು ನಿಂತುಕೊಂಡೇ ಸಭಾ ಕಾರ್ಯಕ್ರಮ ವೀಕ್ಷಿಸಿದರು.