ಮಾಗಡಿ: ತಾಲೂಕಿನಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ತಹಸೀಲ್ದಾರ್ ಅವರ ಗಮನಕ್ಕೆ ತಂದು ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಯಾವುದೇ ಕ್ರಮ ವಹಿಸಿಲ್ಲ. ಕೂಡಲೆ ರೈತರ ಸಮಸ್ಯೆ ಬಗೆಹರಿಸಿದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಎಚ್ಚರಿಕೆ ನೀಡಿದರು.
ಜಿಲ್ಲಾ ಮಟ್ಟದ ರೈತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದ ಅಪಘಾತಗಳು ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಇಲಾಖೆಯಲ್ಲಿ ರೈತರಿಗೆ ವಿತರಿಸಿದ್ದ ರಾಗಿ ಕಳಪೆಯಾಗಿದ್ದರಿಂದ ಬೆಳೆ ನಷ್ಟ ಸಂಭವಿಸಿದೆ. ರೈತರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ರೈತರನ್ನು ಅಲೆದಾಡಿಸುವುದು ಇನ್ನು ತಪ್ಪಿಲ್ಲ. ಬೆಸ್ಕಾಂನಲ್ಲಿ ರೈತರ ಪಂಪ್ ಸೆಟ್ ಗಳಿಗೆ ನಿಯಮದಂತೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳೆತ್ತಲು ಸರ್ಕಾರ ಅನುದಾನ ಬಿಡುಗಡೆ ಮಾಡಿರುವ ಮಾಹಿತಿಯಿದೆ. ಆದರೆ ಜಲಾಶಯದ ಸುತ್ತಾಮುತ್ತ ಮೂಗು ಮಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಬಂದಿದೆ. ಇದೇ ನೀರನ್ನು ಮಂಚನಬೆಲೆ ಜಲಾಶಯಕ್ಕೆ ಬಿಡಲಾಗಿದ್ದು ಅದೇ ನೀರನ್ನು ಮಾಗಡಿ ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ಈ ಬಗ್ಗೆ ತಾಲೂಕು ಆಡಳಿತ ಕೂಡಲೆ ಎಚ್ಚೆತ್ತು ಕ್ರಮ ವಹಿಸಿದಿದ್ದರೆ ಮುಂದಿನ ದಿನಗಳಲ್ಲಿ ರೈತಸಂಘ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿಲ್ಲಾ ಯುವ ಘಟಕ ಅಧ್ಯಕ್ಷ ರವಿಕುಮಾರ್, ಶಿವಲಿಂಗಣ್ಣ, ಚನ್ನರಾಯಪ್ಪ, ಜಿಲ್ಲಾ ಉಪಾಧ್ಯಕ್ಷ ಬುಡನ್ ಸಾಬ್, ಪಟೇಲ್ ಹನುಮಂತಯ್ಯ, ನಿಂಗಣ್ಣ ಗುಡ್ಡಳ್ಳಿ ರಾಮಣ್ಣ, ನಾರಾಯಣಪ್ಪ ರಾಮಚಂದ್ರಪ್ಪ, ಸಿದ್ದಪ್ಪ, ಮುನಿರಾಜು, ಚಿಕ್ಕಣ್ಣ, ನಾಗರಾಜ್, ಕಲೀಂ, ಬಶೀರ್, ಬೆಳಗೋಡಿ ಗಂಗಣ್ಣ, ಕಾಂತರಾಜು ಕೃಷ್ಣ, ಕರ್ಲಹಳ್ಳಿ ಶಿವಲಿಂಗಣ್ಣ ರಾಜಣ್ಣ, ನಾಗರಾಜು, ರಘು ಇತರರು ಭಾಗವಹಿಸಿದ್ದರು.
(ಫೋಟೊ ಕ್ಯಾಫ್ಷನ್)ಮಾಗಡಿಯಲ್ಲಿ ಮಂಗಳವಾರ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಅಧ್ಯಕ್ಷತೆಯಲ್ಲಿ ರೈತ ಸಭೆ ನಡೆಯಿತು. ಜಿಲ್ಲಾ ಯುವ ಘಟಕ ಅಧ್ಯಕ್ಷ ರವಿಕುಮಾರ್, ಶಿವಲಿಂಗಣ್ಣ, ಚನ್ನರಾಯಪ್ಪ, ಜಿಲ್ಲಾ ಉಪಾಧ್ಯಕ್ಷ ಬುಡನ್ ಸಾಬ್ ಇತರರಿದ್ದರು.