ವಿಶ್ವಗುರು ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ: ವಿ.ಡಿ.ಶಾಂತಲ

KannadaprabhaNewsNetwork |  
Published : Feb 18, 2024, 01:31 AM IST
17 ಬೀರೂರು 1ಬೀರೂರಿನ ಪುರಸಭಾ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ವನ್ನು ಮುಖ್ಯಾಧಿಕಾರಿ ವಿ.ಡಿ.ಶಾಂತಲ ಅನಾವರಣಗೊಳಿಸಿದರು. ಸದಸ್ಯರಾದ ಮೋಹನ್ ಕುಮಾರ್, ಲೋಕೇಶಪ್ಪ, ಜಿಮ್ ರಾಜು ಮತ್ತಿತರರಿದ್ದರು. | Kannada Prabha

ಸಾರಾಂಶ

ಬೀರೂರು ಪುರಸಭೆ ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀರೂರು

ವಿಶ್ವಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಬಣ್ಣಿಸಿದರು.

ಅವರು ಶನಿವಾರ ಪುರಸಭಾ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಮಹನೀಯರಾದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದ್ದು ಇದರ ಅನ್ವಯ ಇಂದು ಭಾವಚಿತ್ರ ಅನಾವರಣ ಮಾಡಲಾಗಿದೆ. ಬಸವಣ್ಣನವರ ಭಾವಚಿತ್ರ ಕಚೇರಿಗಳಲ್ಲಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರದೆ, ಸಿಬ್ಬಂದಿಯು ಅವರ ವಚನದಲ್ಲಿನ ಸಾರವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗೌತಮ ಬುದ್ಧರ ನಂತರ ಬಸವೇಶ್ವರರು ರಾಷ್ಟ್ರದಲ್ಲಿ ಸಾಮಾಜಿಕ ಕ್ರಾಂತಿ ಉಂಟು ಮಾಡಿದರು.12ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳುವಳಿ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ ವಚನಗಳ ಮೂಲಕ ಜಾಗೃತಿ ಮೂಡಿಸಿದ ಅವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ವಿಶೇಷವಾಗಿದೆ. ಗೌತಮ ಬುದ್ಧ, ಬಸವಣ್ಣ ನಂತರ ಗಾಂಧೀಜಿ ಸಮಾಜದಲ್ಲಿ ಸಮಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಿದ್ದಾರೆ. ಬಸವೇಶ್ವರರು ವಚನಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಪುರಸಭಾ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಭಾರತದ ಇತಿಹಾಸದಲ್ಲಿ 12ನೇ ಶತಮಾನ ಅತ್ಯಂತ ಮಹತ್ವಪೂರ್ಣವಾದದ್ದು. ಅಜ್ಞಾನ, ಜಾತೀಯತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜ ಮೇಲೆತ್ತಲು ಬಸವಣ್ಣನವರು ಶ್ರಮಿಸಿದ್ದರು. ಸಮಾಜದ ಕಟ್ಟ ಕಡೆ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅವಕಾಶಗಳು ಸಿಗಬೇಕು ಎಂದು ಬಸವಣ್ಣನವರು ಬಯಸಿದ್ದರು ಎಂದರು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದವರು ಬಸವಣ್ಣನವರು. ತಮ್ಮ ಬೋಧನೆ ಮತ್ತು ತತ್ವಜ್ಞಾನದಿಂದ ಜನರ ಬದುಕನ್ನು ಪರಿವರ್ತಿಸಿ ಸುಧಾರಿಸಲು ಹೊರಟಿದ್ದವರು. ಆದರೆ ಅವರ ತತ್ವಾದರ್ಶ ಪಾಲನೆ ಮಾಡಲು ನಾವು ಇಂದು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಪುರಸಭೆ ಸದಸ್ಯ ಜಿಮ್ ರಾಜು, ಲೋಕೇಶಪ್ಪ, ಪತ್ರಕರ್ತ ಸೋಮಶೇಖರ್ ಮಾತನಾಡಿದರು. ಪುರಸಭೆ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಪರಿಸರ ಅಭಿಯಂತರ ನೂರುದ್ದೀನ್, ವೀಣಾ, ಶಿಲ್ಪಾ, ದೀಪಕ್, ಗಿರಿರಾಜ್, ಜಯಮ್ಮ, ಕುಮಾರಿ, ರೇಣುಕಾ, ಕರಿಯಪ್ಪ, ಸಾಧಿಕ್ ಸೇರಿದಂತೆ ಪುರಸಭಾ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌