ಕನ್ನಡಪ್ರಭ ವಾರ್ತೆ ಬೆಂಗಳೂರು
ನಾವು ವಿಶ್ವಕರ್ಮರೆಂಬುದು ಹೆಮ್ಮೆಯ ಸಂಗತಿ. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡು ಸಮುದಾಯದ ಸಮಸ್ಯೆಗಳ ನಿವಾರಣೆಗೆ ಒಗ್ಗಟ್ಟಾಗಬೇಕು ಎಂದು ಅರೆಮಾದನಹಳ್ಳಿ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಮೂಡಲಪಾಳ್ಯದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ ಸಮ್ಮಿಲನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಉತ್ತರ ಕರ್ನಾಟಕವಿರಲಿ ಅಥವಾ ದಕ್ಷಿಣ ಕರ್ನಾಟಕವಿರಲಿ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಿಕೊಳ್ಳಬೇಕು. ಸಮುದಾಯದ ಸಮಸ್ಯೆಗಳ ನಿವಾರಣೆಗೆ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ದೇಶದ ಯಾವ ಭಾಗಕ್ಕೆ ತೆರಳಿ ‘ನಾವು ವಿಶ್ವಕರ್ಮರು’ ಎಂದು ಹೇಳಿದರೆ ಸಾಕು ಬಹಳಷ್ಟು ಗೌರವ ಸಿಗುತ್ತದೆ. ಎಲ್ಲಿಯೂ ನಮ್ಮನ್ನು ಕಡೆಗಣಿಸಿಲ್ಲ. ಅಂತಹ ಶ್ರೇಷ್ಠ ಸಂಸ್ಕೃತಿ ನಮ್ಮದು. ಪ್ರಾಚೀನ ಶಿಲ್ಪಿ ಜಕಣಾಚಾರಿ ಸೇರಿದಂತೆ ಇತ್ತೀಚಿನ ಆಧುನಿಕ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ದೇಶಕ್ಕೆ ನೀಡಿದ ಹೆಮ್ಮೆಯ ಸಮುದಾಯ ನಮ್ಮದು ಎಂದು ಬಣ್ಣಿಸಿದರು.ಪ್ರಸಿದ್ಧವಾದ ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯು ಬಹಳ ವೈಭವಯುತವಾಗಿ ನೆರವೇರಿತು. ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಅರುಣ್ ಯೋಗಿರಾಜ್. ರಾಷ್ಟ್ರಮಟ್ಟದ ಹಲವು ವಿಗ್ರಹಳನ್ನು ರೂಪಿಸಿದ್ದರಿಂದ ಅರುಣ್ ಅವರಿಗೆ ಈ ಯೋಗ ಒಲಿದುಬಂತು. ಬಾಲರಾಮನ ವಿಗ್ರಹ ರೂಪಿಸಲು ದೇಶದ ಸಾಕಷ್ಟು ಶಿಲ್ಪಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೂ ಅರುಣ್ ಅವರ ಶಿಲ್ಪ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಪ್ರಶಂಸಿಸಿದರು.
ಹಲವೆಡೆಯಿಂದ ಶಿಲೆಗಳನ್ನು ತರಿಸಿದ್ದರೂ ಹೆಗ್ಗಡದೇವನಕೋಟೆಯ ಶಿಲೆಯನ್ನು ಬಾಲರಾಮನ ವಿಗ್ರಹ ತಯಾರಿಸಲು ಆಯ್ಕೆ ಮಾಡಿಕೊಳ್ಳಲಾಯಿತು. ಇದಿಷ್ಟೇ ಅಲ್ಲದೆ, ನಮ್ಮವರೇ ಆದ ಅರುಣ್ ಕೆತ್ತಿದ ವಿಗ್ರಹವೇ ಆಯ್ಕೆಯಾಗಿದ್ದು ನಮಗೆ ಜಾಗತಿಕ ಸ್ಥಾನಮಾನ ಕೊಟ್ಟಿದೆ. ಅರುಣ್ ಅವರ ಕೌಶಲ್ಯವನ್ನು ಗುರುತಿಸಿ ಕಳೆದ ವರ್ಷವೇ ಅವರಿಗೆ ‘ಶಿಲ್ಪಕಲಾ ಸಾರ್ವಭೌಮ’ ಬಿರುದು ನೀಡಿ ಮಠದಿಂದ ಗೌರವಿಸಲಾಗಿತ್ತು. ಅರುಣ್ ನಮ್ಮ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಹಲವು ಗಣ್ಯರನ್ನು ಗೌರವಿಸಲಾಯಿತು. 2024 ನೇ ಸಾಲಿನ ಕ್ಯಾಲೆಂಡರ್ ಲೋಕಾರ್ಪಣೆಗೊಳಿಸಲಾಯಿತು. ಮುಖಂಡರಾದ ಧಾರವಾಡದ ಶಿವಣ್ಣ ಬಡಿಗೇರ, ಬಾಬು ಪತ್ತಾರ, ಸಂಘದ ಅಧ್ಯಕ್ಷ ನಾಗೇಂದ್ರ ಜಿ.ಕಮ್ಮಾರ, ಪ್ರಧಾನ ಕಾರ್ಯದರ್ಶಿ ಡಾ.ಮಹಾರುದ್ರಪ್ಪ ಮನುವಾಚಾರ್ಯ, ಮಾಜಿ ಅಧ್ಯಕ್ಷ ಡಾ.ಸೋನಾರ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಆರ್.ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.