ಶಿವಮೊಗ್ಗ: ಶತಮಾನಗಳಿಂದ ಸಮಾಜದಲ್ಲಿ ಬೇರುಬಿಟ್ಟಿದ್ದ ಶೋಷಣೆ ವಿರುದ್ಧ ದನಿ ಎತ್ತಿದ ಮಹಾಚೇತನ ಕನಕದಾಸರು. ಇವರ ತತ್ವ ಚಿಂತನೆಗಳನ್ನು ಇಂದಿನ ಯುವಸಮುದಾಯ ಅರ್ಥೈಸಿಕೊಳ್ಖುವುದು ಅಗತ್ಯ ಎಂದು ಡಾ. ಎಂ.ಎಂ. ಮಂಜುನಾಥ ಹೇಳಿದರು.
ನಗರದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಯುದ್ಧ ಮಾನವ ಲೋಕವನ್ನು ಮರುಭೂಮಿ ಆಗಿಸುತ್ತದೆಂದು ತಿಳಿದು ಯುದ್ಧದಿಂದ ವಿಮುಖರಾದರು. ಮನುಷ್ಯನ ಅಹಂಕಾರಗಳು ನಾಶವಾದರೆ ಮಾತ್ರ ಸ್ವರ್ಗಪ್ರಾಪ್ತಿ ಎನ್ನುವುದರ ಮೂಲಕ ಮೇಲ್ವರ್ಗದವರಿಗೆ ಅರಿವು ಮೂಡಿಸಿದರು. ಜಾತಿ ನಿರ್ಮೂಲನೆಯನ್ನು ಬಲವಾಗಿ ವಿರೋಧಿಸಿದ ಅವರು ಸಮಸಮಾಜವನ್ನು ಕಟ್ಟುವಲ್ಲಿ ಶ್ರಮಿಸಿದವರು. ಮಾನವ ಶರೀರ ತಾತ್ಕಾಲಿಕವಾದುದು, ಅದನ್ನು ಒಳ್ಳೆಯದಕ್ಕೆ ದಾಸವಾಗಿಸಿಕೊಂಡರೆ ಅದು ಶಾಶ್ವತವಾಗಿ ಉಳಿಯುತ್ತದೆ ಎಂಬ ಮಾನವತಾ ತತ್ವವನ್ನು ಲೋಕದಲ್ಲಿ ಬತ್ತಿದವರು ಎಂದು ವಿಶ್ಲೇಷಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಚನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ವ್ಯವಸ್ಥೆ ರೋಗಗ್ರಸ್ಥವಾಗಿದ್ದ ಹೊತ್ತಿನಲ್ಲಿ ದಿವ್ಯೌಷಧವಾಗಿ ಬಂದವರು ಕನಕದಾಸರು. ಕನ್ನಡದಲ್ಲಿ ಮಹಾಕಾವ್ಯಗಳನ್ನು ಬರೆದರು. ಇಡೀ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಧಾನ್ಯಗಳನ್ನು ಕಾವ್ಯದ ನಾಯಕರಾಗಿಸಿಕೊಂಡರು. ಇದರ ಮೂಲಕ ವರ್ಗ ಸಂಘರ್ಷದ ಕಥನ ತಂದು ಮೇಲು ಕೀಳಿನ ಬೇರುಗಳನ್ನು ಕಿತ್ತರು. ಅವರ ಕಾವ್ಯ, ಕೀರ್ತನೆ, ಉಗಾಬೋಗಾದಿಗಳು, ಮುಂಡಿಗೆಗಳ ಮೂಲಕ ಶ್ರೀಸಾಮಾನ್ಯರಲ್ಲಿ ಅರಿವನ್ನು ಮೂಡಿಸಿ ಸಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾದವರು ಎಂದರು.ಕಾರ್ಯಕ್ರಮದಲ್ಲಿ ಡಾ. ಸಕ್ರೀನಾಯ್ಕ, ಸುರೇಶ್ ಟಿ.ಎಂ., ನರಸಿಂಹಮೂರ್ತಿ, ಜಾಹ್ನವಿ, ಜಯಕೀರ್ತಿ, ಡಾ. ಅಣ್ಣಪ್ಪ ಎನ್. ಮಳೀಮಠ್, ಗಂಧರ್ವ, ಹೆಗಡೆ, ಸೀಮಾ, ಪೂರ್ಣಿಮಾ ಇತರರು ಹಾಜರಿದ್ದರು.
- - - -ಫೋಟೋ:ಶಿವಮೊಗ್ಗದ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಯಿತು.