ಸ್ವಯಂ ಉದ್ಯೋಗಕ್ಕಾಗಿ ವೃತ್ತಿ ತರಬೇತಿ

KannadaprabhaNewsNetwork | Published : Sep 14, 2024 1:49 AM

ಸಾರಾಂಶ

ಮಹಿಳೆ ಸ್ವಾವಲಂಬಿ ಜೀವನ ಸಾಗಿಸಲು ಸ್ವಯಂ ಉದ್ಯೋಗ ಕೈಗೊಳ್ಳಲು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ವೃತ್ತಿ ತರಬೇತಿ ನೀಡಲಾಗುತ್ತಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆ ಸ್ವಾವಲಂಬಿ ಜೀವನ ಸಾಗಿಸಲು ಸ್ವಯಂ ಉದ್ಯೋಗ ಕೈಗೊಳ್ಳಲು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ವೃತ್ತಿ ತರಬೇತಿ ನೀಡಲಾಗುತ್ತಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿರುವ ರೈತ ವಿಕಾಸ ಭವನದಲ್ಲಿ ತೋವಿವಿ, ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರ, ಬವಿವ ಸಂಘದ ಅಕ್ಕಮಹಾದೇವಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸಿರಿ ಸಂಸ್ಕೃತಿ ಹಾಗೂ ಮಹಿಳಾ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ತಾರಸಿ ಕೈತೋಟ ಹಾಗೂ ಲಂಬ ಉದ್ಯಾನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಕೃಷಿ ಅವಲಂಬಿತ ಕುಟುಂಬಸ್ಥರು ತಮಗೆ ಬೇಕಾದ ತರಕಾರಿಗಳನ್ನು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದರು. ಆದರೆ ಇಂದು ಬೆಳೆಯುತ್ತಿರುವ ಜನಸಂಖ್ಯೆಗೆ ಹಾಗೂ ರೈತರ ಅಬಿವೃದ್ಧಿಗಾಗಿ ಇಂದು 300 ಮಿಲಿಯನ್ ಟನ್ ತರಕಾರಿ, ಹಣ್ಣು ಹಂಪಲ ಉತ್ಪಾದಿಸಲಾಗುತ್ತಿದೆ. ಕಡಿಮೆ ಸ್ಥಳದಲ್ಲಿ ಹೆಚ್ಚು ಇಳುವರಿ ಕೊಡುವ ಅಲ್ಪಾವಧಿ ತರಕಾರಿ, ಹಣ್ಣುಗಳು, ಹೂಗಳನ್ನು ಬೆಳೆಸುವುದು ಇಂದು ಅವಶ್ಯವಾಗಿದೆ. ಜನರ ಆಕರ್ಷಣೆಗಾಗಿ ರಾಸಾಯನಿಕ ಹಾಗೂ ವಿಷಯುಕ್ತ ಔಷಧಿಗಳನ್ನು ಉಪಯೋಗಿಸುತ್ತಿರುವುದು ಮಾರಕವಾಗಿದೆ ಎಂದರು.

ಆರೋಗ್ಯವಂತ ಜೀವನಕ್ಕಾಗಿ ಉತ್ತಮ ತರಕಾರಿ, ಸೊಪ್ಪು, ಹಣ್ಣುಗಳ ಅವಶ್ಯಕತೆ ಇದೆ. ಆದರೆ ಇಂದು ಬೆಳೆಯುತ್ತಿರುವ ತರಕಾರಿಗಳಿಗೆ ರಾಸಾಯನಿಕ ಸಿಂಪಡಿಸುತ್ತಿರುವುದರಿಂದ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಂಡಿವೆ. ಹೂ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಈ ಭಾಗದಲ್ಲಿ ಹೊಸ ಕ್ರಾಂತಿ ಮಾಡುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ರೈತರ ಮಹಿಳೆಯರಿಗೆ ಹಾಗೂ ಸ್ವಸಹಾಯಕ ಗುಂಪುಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಪಯುಕ್ತವಾದ ಅಣಬೆ ಕೃಷಿ, ಬೇಕರಿ ಉತ್ಪನ್ನ ತಯಾರಿಕೆ, ಲಂಬ ಉದ್ಯಾನ, ತಾರಸಿ ಕೈತೋಟಗಳಂತಹ ತರಬೇತಿ ನೀಡಿ ಅಲ್ಪ ಸಮಯದಲ್ಲಿಯೇ ಮನೆಗೆಲಸ ಮುಗಿಸಿಕೊಂಡು ಇಂತಹ ಕಾರ್ಯಗಳಲ್ಲಿ ತೊಡಗಿದಾಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತರಬೇತಿಯಿಂದ ಯಶಸ್ವಿಯಾದ ಮುಧೋಳದ ಮಂಜುಳಾ ಪಾಟೀಲ ಅವರು ಮೊದ ಮೊದಲು ನಾನಾ ಬಗೆಯ ಉಪ್ಪಿನಕಾಯಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದ ನಂತರ ಹಿಂದಿನ ಕಾಲದ ಹಾಗೂ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಗುಳಂಬ (ಮಾವಿನ ಕಾಯಿಯಿಂದ ಸಿಹಿ ಖಾದ್ಯ) ತಯಾರಿಸುತ್ತಾ ಇಂದು ಪ್ರತಿ ವರ್ಷ 3 ಟನ್‌ವರೆಗೆ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ತೋವಿವಿಯಲ್ಲಿ ಪಡೆದ ತರಬೇತಿ ಕಾರಣ ಎಂದರು.

ತೃಪ್ತಿ ಪಾಟೀಲ ಸಹ ತಮ್ಮ ಯಶೋಗಾಥೆಯನ್ನು ವಿವರಿಸಿದರು. ವಿವಿಯ ಡಾ.ಸತೀಶ ಪಾಟೀಲ ಅವರು ತಾರಸಿ ತೋಟ ಹಾಗೂ ಲಂಬ ಉದ್ಯಾನದ ನಿರ್ಮಿಸುರುವುದು ಇಂದು ನೂತನ ಪ್ರಯೋಗವಾಗಿದ್ದು, ಅಲ್ಪಾವಧಿಯಲ್ಲಿಯೇ ಆರ್ಥಿಕವಾಗಿ ಬೆಳೆಯಲು ಸಹಕಾರಿಯಾಗಿದೆ. ವಿವಿಧ ಮಾದರಿಯ ಆಕರ್ಷಕ ಸಸಿಗಳನ್ನು ಬೆಳೆಸಸುವುದಲ್ಲದೇ ನಿರೂಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ಹೊಸ ಹೊ ವಿಧಾನದ ಹೂದೋಟ ಮಾಡಿ ಕಸದಲ್ಲಿ ರಸ ತೆಗೆಯುವಂತ ಕಲೆಯನ್ನು ಕರಗತ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿವಿಯ ವಿಸ್ತರಣಾಧಿಕಾರಿ ಡಾ.ಟಿ.ಪಿ.ಅಳ್ಳೊಳ್ಳಿ, ಅಕ್ಕಮಹಾದೇವಿ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸುಷ್ಮಾ ಒಡೆಯರ, ಸಿರಿ ಸಂಸ್ಕೃತಿ ಹಾಗೂ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶಿಲ್ಪಾ ಯರನಾಸಿ, ತೋವಿವಿಯ ಪ್ರಾಧ್ಯಾಪಕಿ ವಸಂತಿ ಗಾಣಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

---

ಕೋಟ್‌ತೋಟಗಾರಿಕೆ ವಿಶ್ವವಿದ್ಯಾಲಯ ನೀಡುವ ತರಕಾರಿ ಸಂಸ್ಕರಣೆಯ ತರಬೇತಿ ಪಡೆದ ಮುಧೋಳಿನ ಮಂಜುಳಾ ಪಾಟೀಲ ಸ್ವತಃ ಆಹಾರ ಸಂಸ್ಕರಣೆಯ ಉದ್ಯಮಿಯಾಗಿದ್ದು, ಮಾವು ಸಂಸ್ಕಾರ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ನಗರದ ಅನೇಕ ಮಹಿಳೆಯರು ಕೈತೋಟ ಹಾಗೂ ತಾರಸಿ ತೋಟದಿಂದ ಸಾವಯವ ತರಕಾರಿಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಉಪಯುಕ್ತ ಉದ್ಯಮಶೀಲ ತರಬೇತಿಗಳನ್ನು ವಿಶ್ವವಿದ್ಯಾಲಯ ನೀಡಲಿದೆ.

-ವಸಂತ ಗಾಣಿಗೇರ, ಪ್ರಾದ್ಯಾಪಕ, ತೋವಿವಿ, ಬಾಗಲಕೋಟೆ

Share this article