ದೇಶಾಭಿವೃದ್ಧಿ, ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕಿ: ಕರುಣಾಕರ ರೆಡ್ಡಿ

KannadaprabhaNewsNetwork |  
Published : Apr 14, 2024, 01:51 AM IST
ಹರಪನಹಳ್ಳಿ ತಾಲೂಕಿನ ಹಿರೇಮೇಗಳಗೇರಿಯಲ್ಲಿ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರವಾಗಿ ಮತಯಾಚಿಸಿದರು. | Kannada Prabha

ಸಾರಾಂಶ

ಮೋದಿ ಆಯುಷ್ಮಾನ್ ಭಾರತ, ಜನಧನ, ಫಸಲ್‌ ಬಿಮಾ ಯೋಜನೆ, ಯುವಕರಿಗೆ ಮೇಕ್‌ ಇನ್ ಇಂಡಿಯಾ, ಜಲಜೀವನ್‌ ಮಿಷನ್‌ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ

ಹರಪನಹಳ್ಳಿ: ಕೇವಲ 10 ವರ್ಷದಲ್ಲಿ ನರೇಂದ್ರ ಮೋದಿ ಭಾರತ ಅಭಿವೃದ್ಧಿ ಮಾಡಿ ವಿಶ್ವ ಮೆಚ್ಚುವ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ಅಭಿವೃದ್ಧಿ, ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಮಾಜಿ ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಮತದಾರರಿಗೆ ಮನವಿ ಮಾಡಿದರು.

ತಾಲೂಕಿನ ಹಿರೇಮೇಗಳಗೇರಿ, ಸತ್ತೂರು, ಕಂಚಿಕೇರಿ, ಶಿಂಗ್ರಿಹಳ್ಳಿ, ರಾಗಿಮಸಲವಾಡ ಮುಂತಾದ ಗ್ರಾಮಗಳಲ್ಲಿ ಸಂಚರಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತಯಾಚಿಸಿ ಶನಿವಾರ ಅವರು ಮಾತನಾಡಿದರು.

ಮೋದಿ ಆಯುಷ್ಮಾನ್ ಭಾರತ, ಜನಧನ, ಫಸಲ್‌ ಬಿಮಾ ಯೋಜನೆ, ಯುವಕರಿಗೆ ಮೇಕ್‌ ಇನ್ ಇಂಡಿಯಾ, ಜಲಜೀವನ್‌ ಮಿಷನ್‌ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ನಾನು ಇಲ್ಲಿ ಶಾಸಕನಾಗಿದ್ದಾಗ ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆ, ಸಿಸಿರಸ್ತೆ, ಶಾಲಾ ಕೊಠಡಿ, ಕುಡಿಯುವ ನೀರು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲೂ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ದೂರಿದರು.

ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಮೋದಿ ಎಂದಾಕ್ಷಣ ಕಾಂಗ್ರೆಸ್‌ ನವರಿಗೆ ತಲೆ ತಿರುಗುವಂತಾಗುತ್ತದೆ. ಮೋದಿಯಂತಹ ನಾಯಕ ದೇಶಕ್ಕೆ ಅಗತ್ಯ, ದೇಶದ ರಕ್ಷಣೆಗಾಗಿ ಮೋದಿ ಬೇಕು ಎಂದರು.

ಹರಪನಹಳ್ಳಿ ತಾಲೂಕಲ್ಲಿ ಇಂಡಿಯನ್‌ ರಿಸರ್ವ್ ಬೆಟಾಲಿಯನ್‌ ಮಂಜೂರಾತಿಗೆ ಪತಿ ಸಿದ್ದೇಶ್ವರ ಪ್ರಯತ್ನಿಸಿದ್ದಾರೆ. ಸಂಸದಳಾದರೆ ನಾನು ಸಹ ಅದರ ಸ್ಥಾಪನೆಗೆ ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ನನಗೆ ಗೆಲ್ಲಿಸಿದರೆ ನನ್ನನ್ನು ಹುಡುಕಿಕೊಂಡು ಬರಬೇಕಾದ ಅಗತ್ಯವಿಲ್ಲ. ನಾನೇ ಪ್ರತಿ ತಾಲೂಕಲ್ಲಿ ಜನಸಂಪರ್ಕ ಕೇಂದ್ರ ತೆರೆಯುತ್ತೇನೆ ಎಂದು ತಿಳಿಸಿದರು.

ಸಂಸದ ಸಿದ್ದೇಶ್ವರ ಪುತ್ರಿ ಅಶ್ವಿನಿ ಮಾತನಾಡಿದರು. ಸತ್ತೂರಲ್ಲಿ ಮಕ್ಕಳು ಆರತಿ ಬೆ‍ಳಗಿ ಅಭ್ಯರ್ಥಿ ಗಾಯತ್ರಿ ಹಾಗೂ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಅವರನ್ನು ಬರಮಾಡಿಕೊಂಡರು.

ಮುಖಂಡರಾದ ಆರ್‌.ಅಶೋಕ, ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ , ಸ್ಥಳೀಯ ಮುಖಂಡ ಮಲ್ಲೇಶ, ಯಡಿಹಳ್ಳಿ ಶೇಖರಪ್ಪ, ವಿಷ್ಣು ರೆಡ್ಡಿ, ಮಹೇಶ ಪೂಜಾರ, ಮಂಜುನಾಥ ಆರ್‌ ನಾಯ್ಕ ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ