ಹಾವೇರಿ (ಶಿಗ್ಗಾಂವಿ): ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಅಭಿವೃದ್ಧಿ ಮುಂದುವರಿಯಬೇಕೆಂಬ ಬಯಕೆ ಜನರಿಗಿದೆ. ಹೀಗಾಗಿ ಭರತ್ ಬೊಮ್ಮಾಯಿ ಹೆಚ್ಚಿನ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರ, ದುಂಢಸಿ, ಅರಟಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣೆಗೆ ಬಂದಿದ್ದೇವೆ. ಇದು ಹೊಸ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ಯಾವಾಗ ಪ್ರಧಾನಿ ಮೋದಿಯವರು ವಕ್ಫ್ ಕಾಯಿದೆ ತಿದ್ದುಪಡಿ ಮಾಡಲು ಮುಂದಾದರೋ ವಕ್ಫ್‌ನವರು ರೈತರ ಲಕ್ಷಾಂತರ ಎಕರೆ ಜಮೀನಿಗೆ ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ ಎಂದರು.ಬೆಳಗಾವಿಯಲ್ಲಿ ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡರು, ಸರ್ಕಾರಿ ನೌಕರರೂ ನೆಮ್ಮದಿಯಿಂದ ಬದುಕುತ್ತಿಲ್ಲ. ಸಿಎಂ ಹೆಂಡತಿ ಹೆಸರಿನಲ್ಲಿ ಸೈಟ್ ಪಡೆದಿದ್ದಾರೆ. ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಈ ಚುನಾವಣೆಯಲ್ಲಿ ತುಷ್ಟೀಕರಣ ನೀತಿಗೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಕಾಂಗ್ರೆಸ್ ಈ ಸರ್ಕಾರ ಗ್ಯಾರಂಟಿ ಬಿಟ್ಟರೆ ಬೇರೆ ಏನನ್ನೂ ರಾಜ್ಯದ ಜನತೆಗೆ ಕೊಡುವುದಿಲ್ಲ ಎನ್ನುವಂತಾಗಿದೆ. ಮಳೆ ಹಾನಿ, ಮನೆ ಹಾನಿಯಾಗಿ ಜನರು ಸಂಕಷ್ಟ ಪಡುತ್ತಿದ್ದರೆ ಈ ಸರ್ಕಾರಕ್ಕೆ ಯಾವುದೇ ಜನಪರ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕಾಲದಲ್ಲಿ 5 ಲಕ್ಷದ ಮನೆ ಮಂಜೂರು ಮಾಡಿದ್ದಾರೆ. ಜಗದೀಶ್ ಶೆಟ್ಟರ್ ರೈತರ ಸಾಲ ಮನ್ನಾ ಮಾಡಿದ್ದಾರೆ. ಬೊಮ್ಮಾಯಿ ಅವರು ನಾಲ್ಕು ಬಾರಿ ಶಾಸಕರಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ನೀಡಲು ಸಾಯಿ ಗಾರ್ಮೆಂಟ್, ಜವಳಿ ಪಾರ್ಕ್ ನೀಡಿದ್ದಾರೆ ಎಂದರು.ಈ ವೇಳೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತರರು ಇದ್ದರು.