ಮತದಾನ ಮಾಡಿ, ಪ್ರಜಾಪ್ರಭುತ್ವ ಬಲಪಡಿಸಿ: ಜಿಲ್ಲಾಧಿಕಾರಿ

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮತದಾನದ ಮಹತ್ವ ಜಾಗೃತಿ ಅಭಿಯಾನ ಹಾಗೂ ಸಮಾಜ ಕಲ್ಯಾಣ ಇಲಾಖಾ ನೌಕರರ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿಪ್ರಜಾಪ್ರಭುತ್ವ ಬಲಪಡಿಸಲು ೧೮ ವರ್ಷ ಪೂರ್ಣಗೊಂಡ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ಆಶಯಗಳಿಗೆ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದ್ದಾರೆ.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮತದಾನದ ಮಹತ್ವ ಜಾಗೃತಿ ಅಭಿಯಾನ ಹಾಗೂ ಸಮಾಜ ಕಲ್ಯಾಣ ಇಲಾಖಾ ನೌಕರರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ನಿತ್ಯ ಒತ್ತಡದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಕ್ರೀಡಾಕೂಟ ಸಂದರ್ಭದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವುದು ಮೆಚ್ಚುವಂತಹದ್ದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರ್ಹರೆಲ್ಲರೂ ತಪ್ಪದೆ ಮತಹಕ್ಕು ಚಲಾಯಿಸಬೇಕು ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಸ್ವೀಪ್ ಕಾರ್ಯಕ್ರಮದಡಿ ಕ್ರೀಡಾಕೂಟ ಆಯೋಜಿಸಿ ಮತದಾನ ಜಾಗೃತಿ ಮೂಡಿಸುವುದರೊಂದಿಗೆ ಮತದಾನಕ್ಕೆ ಎಲ್ಲರನ್ನು ಸೆಳೆಯಬೇಕು. ಸಹಾಯವಾಣಿ ಬಳಕೆ ಮಾಡಿಕೊಂಡು ಗೊಂದಲ ಪರಿಹರಿಸಿಕೊಳ್ಳಲು ಅವಕಾಶವಿದೆ. ಆ್ಯಪ್ ಮೂಲಕ ಮತದಾರರ ಪಟ್ಟಿಯಲ್ಲಿನ ತಪ್ಪನ್ನು ಮನೆಯಲ್ಲಿಯೇ ಕುಳಿತು ಸರಿಪಡಿಸಿಕೊಳ್ಳಬಹುದಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ವೆಬ್‌ಸೈಟ್ ಮೂಲಕ ಸಲ್ಲಿಸಿದರೆ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಮತದಾನದ ಪ್ರಾಮುಖ್ಯತೆ ಎಲ್ಲರಿಗೂ ಅರಿವಿದ್ದು, ಶೇ. 100 ರಷ್ಟು ಮತದಾನಕ್ಕೆ ನೌಕರರು ಶ್ರಮಿಸಬೇಕು. ಕಾನೂನು, ಸುವ್ಯವಸ್ಥೆಗೆ ತೊಡಕು ಉಂಟಾಗದಂತೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಲು ಕರೆ ನೀಡಿದರು.ಉಪ ವಿಭಾಗಧಿಕಾರಿ‌ ವಿನಾಯಕ ನಾರ್ವಡೆ ಮಾತನಾಡಿದರು.ಸಮಾಜ ಕಲ್ಯಾಣ ಉಪ ನಿರ್ದೇಶಕ ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಧ್ಯೇಯೋದ್ದೇಶ ಈಡೇರಿಕೆಗೆ ಸಿಬ್ಬಂದಿ ಶ್ರಮಿಸಬೇಕು. ಮತದಾನದ ಮಹತ್ವ ತಿಳಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಪಣ ತೊಡಬೇಕು ಎಂದು ತಿಳಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕ ಸಿದ್ದೇಗೌಡ, ವೀರಾಜಪೇಟೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಮಡಿಕೇರಿ ತಾಲೂಕು ಸಹಾಯಕ ನಿರ್ದೇಶಕ ನವೀನ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮತ್ತಿತರರು ಇದ್ದರು.ಸಮಾಜ ಕಲ್ಯಾಣ ಇಲಾಖೆಯ 3 ತಾಲೂಕಿನ ಸಿಬ್ಬಂದಿ ಹಗ್ಗಜಗ್ಗಾಟ, ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಸಂಗೀತ ಕುರ್ಚಿ, ಅಥ್ಲೆಟಿಕ್ಸ್, ಲಗೋರಿ ಸೇರಿದಂತೆ ಇನ್ನಿತರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಜಿಲ್ಲಾಧಿಕಾರಿ ವೆಂಕಟ್ ರಾಜ್, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಕೂಡ ಡಿಸಿ ಇಲೆವೆನ್ ತಂಡದಲ್ಲಿ ಕ್ರಿಕೆಟ್ ಆಟವಾಡಿ ಗಮನ ಸೆಳೆದರು.

Share this article