ಖಾಜಾಮೈನುದ್ದೀನ್ ಪಟೇಲ್
ಕನ್ನಡಪ್ರಭ ವಾರ್ತೆ ವಿಜಯಪುರಒಂದೆಡೆ ರಣ ಬಿಸಿಲು, ಮತ್ತೊಂದೆಡೆ ಬಿಸಿಗಾಳಿ ಇವುಗಳ ಮಧ್ಯೆ ಮತದಾರರು ಬಂದು ಮತ ಚಲಾಯಿಸಿ ತಮ್ಮಕರ್ತವ್ಯ ನಿಭಾಯಿಸಿದರು. ಬೆಳಗ್ಗೆ ಬಿರುಸಿನಿಂದ ಮತದಾನ ನಡೆಯಿತು. ನೆತ್ತಿ ಮೇಲೆ ಬಿಸಿಲು ಬರುತ್ತಿದ್ದಂತೆ ಮತದಾನ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತು. ಸಂಜೆ ಹೊತ್ತಿಗೆ ಬಿರುಸಿನ ಮತದಾನ ನಡೆಯಿತು. ಒಟ್ಟಿನಲ್ಲಿ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.
ವಿಜಯಪುರ ಮೀಸಲು ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮತದಾನ ದಿನವಾದ ಮಂಗಳವಾರ ನಡೆಯಿತು. ಜಿಲ್ಲೆಯಲ್ಲಿ ಹಲವೆಡೆ ಇತ್ತೀಚಿನ ದಿನಗಳಲ್ಲೇ ಗರಿಷ್ಠ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಬಿಸಿಲೇರಿ ಬರುತ್ತಿದ್ದಂತೆ 10 ಗಂಟೆಯ ಬಳಿಕ ಮತಗಟ್ಟೆಗಳಿಗೆ ಆಗಮಿಸುವ ಮತದಾರರ ಸಂಖ್ಯೆ ದಿಢೀರನೆ ಕುಸಿಯತೊಡಗಿತ್ತು. ಮಧ್ಯಾಹ್ನ 12ರಿಂದ 3 ಗಂಟೆಯ ನಡುವೆ ಹೆಚ್ಚಿನ ಮತಗಟ್ಟೆಗಳಲ್ಲಿ ಜನರೇ ಇರಲಿಲ್ಲ. ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಬಂದು ಮತದಾನ ಮಾಡುವ ದೃಶ್ಯ ಕಂಡು ಬಂದಿದೆ. ಮತಗಟ್ಟೆ ಹೊರಗೆ ಅಲ್ಲಿ ತಂಪು ಪಾನೀಯ ಅಂಗಡಿ, ತಳ್ಳುವಗಾಡಿ ವ್ಯಾಪಾರವು ಬಲು ಜೋರಾಗಿತು.ಬೆಳಗ್ಗೆ, ಸಂಜೆ ಹೌಸ್ ಫುಲ್:
ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲಿಗೆ ಕಂಗೆಟ್ಟ ಮತದಾರರು ಮತದಾನ ಮಾಡಲು ಬೆಳಗ್ಗೆ ಮತ್ತು ಸಂಜೆ ಹೊತ್ತನ್ನೇ ಆಯ್ಕೆ ಮಾಡಿಕೊಂಡಿದ್ದರು. ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತ್ತು.ಬೆಳಗ್ಗೆಯಿಂದ 11 ಗಂಟೆವರಿಗೆ ಶೇ.24.30 ರಷ್ಟು ಮತದಾನವಾಗಿದ್ದರೆ, 1 ಗಂಟೆಯ ವೇಳೆಗೆ ಶೇ.40.18 ಮತದಾನವಾಗಿತ್ತು. ಮಧ್ಯಾಹ್ನ ಹಲವಾರು ಮತಗಟ್ಟೆಯಲ್ಲಿ ಮತದಾರ ಕಂಡು ಬಂದಿಲ್ಲ. ಆದರೆ ಸಂಜೆ ನಂತರ ಮತ್ತೆ ಸರತಿ ಸಾಲು ಕ೦ಡುಬ೦ದಿತ್ತು. ಹೆಚ್ಚಿನ ಮತಗಟ್ಟೆಗಳಲ್ಲಿ ಬಿಸಿಲಿನ ಬೇಗೆ ನೀಗಿಸಲು ಶಾಮಿಯಾನ, ಕೂರಲು ಬೆಂಚು, ಕುರ್ಚಿಗಳ ವ್ಯವಸ್ಥೆ ಸೇರಿದಂತೆ ಮತದಾನಕ್ಕೆ ಆಗಮಿಸುವ ಮತದಾರರಿಗೆ ಆರೋಗ್ಯ ಸಮಸ್ಯೆ ಕಂಡು ಬಂದರೆ ತುರ್ತು ಚಿಕಿತ್ಸೆಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರು, ವೀಲ್ ಚೇರ್‌ಇತ್ಯಾದಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಹಿಂದಿನ ಚುನಾವಣೆಗಳಲ್ಲಿ ಅಶಕ್ತ ಮತದಾರರನ್ನು ಹೊತ್ತುತರುವುದು ಇತ್ಯಾದಿ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಆದರೆಈ ಬಾರಿ ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ
ಕಲ್ಪಿಸಿದ್ದರಿಂದ ಇಂಥ ಸನ್ನಿವೇಶಗಳು ಅಪರೂಪಕ್ಕೆ ಒಂದು ಕಂಡು ಬಂದವು.ಅಲ್ಲಲ್ಲಿ ಮತದಾರರ ಓಲೈಕೆ:
ಪ್ರತಿ ಬೂತ್ ಹೊರಗೆ ಪಕ್ಷಗಳ ಕೌಂಟರ್‌ಗಳಿದ್ದರೂ, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಗೌಜಿ ಗದ್ದಲ ಅಷ್ಟಾಗಿರಲಿಲ್ಲ. ಆದರೆ ಮತದಾರರ ಓಲೈಕೆ ಮಾಡುವುದು ನಡೆದೇ ಇತ್ತು. ಮತದಾರರನ್ನು ಪಕ್ಷಗಳು ವಾಹನಗಳಲ್ಲಿ ಕರೆದುಕೊಂಡು ಬರುವುದು ಮತದಾನ ಮಾಡಲು ಅನುವು ಮಾಡಿಕೊಡುತ್ತಿದ್ದ ದೃಶ್ಯಗಳಲ್ಲೂ ಅಲ್ಲಲ್ಲಿ ಕಂಡು ಬಂದವು.ಆಧುನಿಕ ತಂತ್ರಜ್ಞಾನ ಆಧರಿಸಿ ಹೆಸರು, ಎಪಿಕ್ ಸಂಖ್ಯೆ ಹೇಳಿದರೆ ನಿಮ್ಮ ಕ್ರಮ ಸಂಖ್ಯೆ, ಬೂತ್ ಸಂಖ್ಯೆ ಎಂಬಿತ್ಯಾದಿ ವಿವರವುಳ್ಳ ಸಣ್ಣ ಫ್ರಿಂಟ್ ಔಟ್ ಸಿಗುವ ವ್ಯವಸ್ಥೆಯನ್ನು ಅನೇಕ ರಾಜಕೀಯ ಪಕ್ಷಗಳು ಮಾಡಿದ್ದವು. ನಿಷೇದಾಜ್ಞೆ ಹಿನ್ನೆಲೆಯಲ್ಲಿ ಅಣತಿ ದೂರದಲ್ಲಿಯೇ ತಂಡವೊಂದು ಟೇಬಲ್ ಹಾಕಿಕೊಂಡು ಈ ಕಾರ್ಯದಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಗೋಚರಿಸಿತು.
ಸಾಂಪ್ರದಾಯಿಕ ಸರತಿ ಸಾಲು ಎಲ್ಲೆಡೆ ಗೋಚರಿಸಿತು. ಪ್ರತಿಯೊಂದು ಮತದಾನ ಕೇಂದ್ರದ ಮುಂಭಾಗದಲ್ಲಿ ಕಣ್ಣು ಹಾಯಿಸಿದರೂ ಕಾರ್ಯಕರ್ತರ ದಂಡು, ಟೇಬಲ್ ಹಾಕಿಕೊಂಡು ಮತದಾರರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ ಹುಡುಕಿ ಕೊಡುತ್ತಿರುವವರ ದಂಡು ಕಂಡಿತು.ಹಿರಿಯ ನಾಗರಿಕರ ಉತ್ಸಾಹ:
ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ವೋಟ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದ್ದರೂ ಅನೇಕ ಹಿರಿಯರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರು ಅತ್ಯಂತ ಉತ್ಸಾಹ ಭರಿತರಾಗಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಅನೇಕ ಆರೋಗ್ಯ ಸಮಸ್ಯೆಗಳ ಮಧ್ಯೆಯೂ ಕುಟುಂಬಸ್ಥರ ಸಹಾಯ ಪಡೆದು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಯುವಕರಿಗೆ ಮತದಾನ ಮಾಡುವ ಸ್ಪೂರ್ತಿಯನ್ನು ಅನೇಕ ಹಿರಿಯರು ತುಂಬಿದ್ದು ಗಮನ ಸೆಳೆಯಿತು.ವ್ಹೀಲ್‌ಚೇರ್-ನೆರಳಿನ ವ್ಯವಸ್ಥೆ:
ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ವಿಶೇಷಚೇತನ ಮತದಾರರಿಗೆ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವ ಮತದಾರರಿಗೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಲು ಅನುಕೂಲವಾಗಲು ಎಲ್ಲ ಮತದಾನ ಕೇಂದ್ರಗಳಲ್ಲಿಯೂ ಭೂತ್ ಸಂಖ್ಯೆಗನುಗುಣವಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.ಆಟೋ ಮೊದಲಾದ ವಾಹನಗಳಲ್ಲಿ ಆಗಮಿಸುವ ಹಿರಿಯ ನಾಯಕರನ್ನು ವ್ಹೀಲ್ ಚೇರ್ ಮೂಲಕ ಬೂತ್‌ಗೆ ಕರೆತರುವ ದೃಶ್ಯ ಎಲ್ಲೆಡೆ ಕಂಡು ಬಂಧಿತು.
ಎಲ್ಲೆಡೆ ಪೊಲೀಸ್ ಭದ್ರತೆ:ಪ್ರತಿ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬಂದಿತು. ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಸಜ್ಜಿತ ಪ್ಯಾರಾ ಮಿಲಟರಿ ಪಡೆಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಸಹ ಇದ್ದರು.
ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಪೆಟ್ರೋಲಿಂಗ್ ವಾಹನಗಳ ಮೂಲಕ ಬೂತ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತೆಗಳನ್ನು ಪರಿಶೀಲನೆ ನಡೆಸಿದರು. ಅನೇಕ ಹಿರಿಯ ಅಧಿಕಾರಿಗಳು ಬೂತ್‌ನಲ್ಲಿಯೇ ಇದ್ದುಕೊಂಡು ಸುರಕ್ಷತೆಯ ಮೇಲುಸ್ತುವಾರಿ ವಹಿಸಿದ್ದು ಕಂಡು ಬಂದಿತು.---
ಅಗತ್ಯ ಆರೋಗ್ಯ ಸೇವೆಯೂ ಇತ್ತು!ಮತಗಟ್ಟೆಯಲ್ಲಿ ಬಿಸಿಲಿನ ಆಘಾತಕ್ಕೊಳಗಾದರೆ ಪ್ರಥಮ ಚಿಕಿತ್ಸೆ ಒದಗಿಸಲು ಪ್ರತಿ ಮತಗಟ್ಟೆಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತು. ಆಶಾ ಕಾರ್ಯಕರ್ತರು, ಆರೋಗ್ಯ ನಿರೀಕ್ಷಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮತದಾನದ ಸಂದರ್ಭ ತುರ್ತು ಆರೋಗ್ಯ ಸೇವೆ ಒದಗಿಸುತ್ತಿದ್ದರು. ಪ್ರತಿ ಮತಗಟ್ಟೆಗೂ ಪ್ರಥಮ ಚಿಕಿತ್ಸೆಯ ಕಿಟ್‌ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದರು. ಒಆರ್‌ಎಸ್ ಪೊಟ್ಟಣ ಹಾಗೂ ವಿವಿಧ ಔಷಧಿಯ ಸಾಮಾಗ್ರಿಗಳು ಇದ್ದವು. ಸರತಿ ಸಾಲಿನಲ್ಲಿ ನಿಂತವರು ಬಿಸಿಲಿನ ಝಳದಿಂದ ಸಮಸ್ಯೆ ಎದುರಿಸಿದರೆ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯ ಬಿದ್ದರೆ ಸಮೀಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆ್ಯಂಬುಲೆನ್ಸ್ ಕಳುಹಿಸಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದೇವೆ ಎಂದು ಸಿಬ್ಬಂದಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.