ಕೊಪ್ಪಳ: ಪ್ರಜಾಪ್ರಭುತ್ವ ಬಲಪಡಿಸಲು ಪ್ರತಿಯೊಬ್ಬ ಅರ್ಹ ಮತದಾರ ಮತದಾನ ಮಾಡುವುದು ಅತೀ ಮುಖ್ಯ. ಮತದಾನ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯ ಮಹತ್ವದ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಜಿಪಂ ಸಹಾಯಕ ಕಾರ್ಯದರ್ಶಿ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಶಿವಪ್ಪ ಸುಬೇದಾರ ಹೇಳಿದರು.
ಭಾರತ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಪ್ರತಿವರ್ಷ ಜ.25ರಂದು ಆಚರಿಸಲಾಗುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚರ್ಚಿಸಲು ಶುಕ್ರವಾರ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗಿನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಬಲಪಡಿಸಲು ಮತದಾರರ ಪಾಲ್ಗೊಳ್ಳುವಿಕೆಯ ಅಗತ್ಯವಿದೆ. ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಭಾರತ/ಕರ್ನಾಟಕ ನಕ್ಷೆಯಲ್ಲಿ ಬೃಹತ್ ಮಾನವ ಸರಪಳಿಯನ್ನು ಶಾಲಾ ಕಾಲೇಜ್ ವಿದ್ಯಾರ್ಥಿಗಳಿಂದ ನಿರ್ಮಿಸಿ ಜಿಲ್ಲೆಯ ತಾಲೂಕು, ನಗರ ಪ್ರದೇಶ, ಪುರಸಭೆ, ಪಪಂ, ಗ್ರಾಪಂ ಮಟ್ಟದಲ್ಲಿ ಗ್ರಾಮಸ್ಥರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಯುವ ಮತದಾರರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ವಿಶೇಷ ಚೇತನರಿಗೆ, ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ನೈತಿಕ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.
ಈ ಮೂಲಕ ಮತದಾನದ ಪ್ರತಿಶತ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ, ತಾಲೂಕು ಮಟ್ಟದ ಸ್ವೀಪ್ ಅಧಿಕಾರಿಗಳಿಗೆ ತಿಳಿಸಿದರು.ಅಂದು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧನೆ ಮತ್ತು ಪ್ರಶಸ್ತಿ ಪತ್ರ ವಿತರಣೆ, ಶಾಲಾ ಮಕ್ಕಳಿಂದ ಮತದಾನ ಜಾಗೃತಿಯ ನೃತ್ಯ ರೂಪಕ, ಆಸಕ್ತ ಶಿಕ್ಷಕರಿಂದ ಮತದಾನ ಜಾಗೃತಿ ಗೀತೆಗಳನ್ನು ಏರ್ಪಡಿಸಬೇಕು.
ಶಾಲಾ ಕಾಲೇಜು ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿಯಾಗಿ ಮತದಾನದ ಜಾಗೃತಿ ಮೂಡಿಸಬಹುದು. ಇದರಿಂದ ಮಕ್ಕಳು ಪ್ರಭಾವಿತರಾಗಿ ತಮ್ಮ ಕುಟುಂಬ, ನೆರೆಹೊರೆಯವರಿಗೆ ಮತದಾನದ ಬಗ್ಗೆ ತಿಳಿ ಹೇಳುತ್ತಾರೆ. ಇದರಿಂದ ಪ್ರತಿಶತ ಮತದಾನದ ಪ್ರಮಾಣ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಡಿಡಿಪಿಯು ಜಗದೀಶ ಜಿ.ಎಚ್. ಪ್ರಭಾರ ಡಿಡಿಪಿಐ ಸುನಂದಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ನಿರೂಪಣಾಧಿಕಾರಿ ಗಂಗಪ್ಪ, ತಾಪಂ ಇಒ ದುಂಡಪ್ಪ ತುರಾದಿ, ಸಿಡಿಪಿಒ ಜಯಶ್ರೀ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎನ್‌ಆರ್‌ಎಲ್‌ಎಂನ ಡಿಪಿಎಂ ಅಂಬಣ್ಣ, ಎಸ್‌ಬಿಎಂ ಐಇಸಿ ಸಂಯೋಜಕ ಮಾರುತಿ ಸೇರಿದಂತೆ ತಾಲೂಕು ಮಟ್ಟದ ದೈಹಿಕ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಇದ್ದರು.