ಕನ್ನಡಪ್ರಭ ವಾರ್ತೆ ತುಮಕೂರುಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಕನಿಷ್ಠ ಶೇಕಡಾ 80ಕ್ಕಿಂತ ಹೆಚ್ಚಿಸುವ ಸಂಕಲ್ಪ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಜಿ. ಪ್ರಭು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳ ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿ) ಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ/ ತಿದ್ದುಪಡಿ, ಚುನಾವಣಾ ಸಂದರ್ಭದಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಚುನಾವಣೆಗೆ ಪೂರಕವಾದ ಕೆಲಸಗಳನ್ನು ನಿರಂತರವಾಗಿ ನಿರ್ವಹಿಸುವ ಮತಗಟ್ಟೆ ಮಟ್ಟದ ಅಧಿಕಾರಿಗಳ ಶ್ರಮ ಚುನಾವ ಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಮಟ್ಟದ ಸರಾಸರಿ ಶೇ.67.40ಗಿಂತ ಕಡಿಮೆ ಮತದಾನವಾಗಿರುವ ಜಿಲ್ಲೆಯ ವಿಧಾನಸಭಾ ಕ್ಷೇತ್ರದ 456 ಮತಗಟ್ಟೆ ಹಾಗೂ ಶೇ.10, 15, 20ಕ್ಕಿಂತ ಕಡಿಮೆ ಮತದಾನವಾಗಿರುವ 167 ಮತಗಟ್ಟೆಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಬಗ್ಗೆ ಬಿಎಲ್‌ಒಗಳ ಮೂಲಕ ಅರಿವು ಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದೆ ಎಂದು ತಿಳಿಸಿದರು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚುನಾವಣೆ ಪ್ರಮುಖ ಪ್ರಕ್ರಿಯೆ. ಭಾರತ ಸೇರಿದಂತೆ ವಿಶ್ವದ ಶೇ.೫೫ರಷ್ಟು ರಾಷ್ಟ್ರಗಳ ಆಡಳಿತದಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಉಳಿದ ಶೇ.45 ರಷ್ಟು ರಾಷ್ಟ್ರಗಳಲ್ಲಿ ರಾಜರ ಆಳ್ವಿಕೆ, ಕಮ್ಯೂನಿಸ್ಟ್, ಸರ್ವಾಧಿಕಾರಿ, ಮಿಲಿಟರಿ ಆಡಳಿತ ವ್ಯವಸ್ಥೆಯನ್ನೊಳಗೊಂಡಿದೆ. ಸರ್ವ ಸಮ್ಮತ ಹಾಗೂ ಮೌಲ್ಯಯುತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸುವುದು ಸಂವಿಧಾನದ ಆಶಯವಾಗಿದೆ. ಸಂವಿಧಾನದ ಆಶಯದಂತೆ ಲೋಪದೋಷವಿಲ್ಲದ ಪಾರದರ್ಶಕ ಚುನಾವಣೆ ನಡೆಸುವಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಗುರುತರವಾದುದು ಎಂದು ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿ ದಿನದಿಂದ ಮುಕ್ತಾಯವಾಗುವವರೆಗೂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣಾ ಆಯೋಗದ ನಿಯೋಜನೆಗೆ ಒಳಗಾಗಿರುತ್ತಾರೆ. ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಮಾರ್ಚ್ 16ಕ್ಕಿದ್ದಂತೆ ಒಟ್ಟು 22,72,996 ಮತದಾರರಿದ್ದು, ಸ್ವೀಪ್ ಚಟುವಟಿಕೆಗಳ ಮೂಲಕ ಎಲ್ಲಾ ಮತದಾರರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಕಡ್ಡಾಯ ಮತದಾನ ಮಾಡು ವಂತೆ ಮತದಾರರನ್ನು ಪ್ರೇರೇಪಿಸುವ ಜವಾಬ್ದಾರಿ ಬಿಎಲ್‌ಒಗಳ ಮೇಲಿರುತ್ತದೆ ಎಂದರು.ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿದ್ದು, ಬಿಎಲ್‌ಒಗಳು ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಮತದಾರರಿಗೆ ಮತದಾನ ಕುರಿತು ಸಾರ್ವತ್ರಿಕ ಜಾಗೃತಿ ಮೂಡಿಸಬೇಕು. ತಮ್ಮ ಮತ ಗಟ್ಟೆ ವ್ಯಾಪ್ತಿಯ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ಮತದಾನ ಮಹತ್ವದ ಬಗ್ಗೆ ತಿಳಿಸಬೇಕು. ಮತದಾನ ಮಾಡುವ ಸಂದರ್ಭದಲ್ಲಿ ಹಾಜರುಪಡಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಬೇಕಲ್ಲದೆ ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ಇಳಿಜಾರು ಹಾಗೂ ವ್ಹೀಲ್ ಚೇರ್, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ಪೀಠೋಪಕರಣ, ನಿರೀಕ್ಷಣಾ ಸ್ಥಳ, ಮತದಾರರ ಮಾರ್ಗದರ್ಶಿ ವ್ಯವಸ್ಥೆಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ರಾಜ್ಯ ಮಟ್ಟದ ಚುನಾವಣಾ ತರಬೇತಿದಾರ ರಿಜ್ವಾನ್ ಪಾಷಾ ಅವರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಕೃಷಿ ಉಪನಿರ್ದೇಶಕ ಅಶೋಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್, ತಾಲ್ಲೂಕು/ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.