ಉಪಚುನಾವಣೆಯಲ್ಲಿ ಮತದಾರರು ಬಿಜೆಪಿ, ಜೆಡಿಎಸ್‌ ಗೆ ಪಾಠ ಕಲಿಸಿದ್ದಾರೆ: ಟಿ.ಡಿ.ರಾಜೇಗೌಡ

KannadaprabhaNewsNetwork | Updated : Nov 25 2024, 11:35 AM IST

ಸಾರಾಂಶ

ನರಸಿಂಹರಾಜಪುರ, ಬಿಜೆಪಿ ಮತ್ತು ಜೆಡಿಎಸ್ ನವರು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಡಿದ ಅಪಪ್ರಚಾರಕ್ಕೆ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷಕ್ಕೆ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

 ನರಸಿಂಹರಾಜಪುರ : ಬಿಜೆಪಿ ಮತ್ತು ಜೆಡಿಎಸ್ ನವರು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಡಿದ ಅಪಪ್ರಚಾರಕ್ಕೆ ಮೂರು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷಕ್ಕೆ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಶನಿವಾರ ಸಂಜೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದರು. ಜಾತ್ಯಾತೀತ ಪಕ್ಷವೆಂದು ಬಿಂಬಿಸಿಕೊಂಡಿದ್ದ ಜೆಡಿಎಸ್ ನ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಸಹಕಾರದಿಂದ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಯಾಗಿದ್ದ ಜೆಡಿಎಸ್ ನ ಪ್ರಮುಖ ಮುಖಂಡರು ಬಿಜೆಪಿಯೊಂದಿಗೆ ಸೇರಿ ಅವಕಾಶ ರಾಜಕಾರಣ ಮಾಡಿದ್ದಾರೆ. 

ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಅನುಷ್ಟಾನಗೊಳಿಸಿದ್ದರೂ ಈ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಲಾಯಿತು. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ ಸರ್ಕಾರ ಅಭಿವೃದ್ಧಿಗೆ ಅನುದಾನ ಕಡಿಮೆ ಮಾಡಿಲ್ಲ ಎಂದು ಟೀಕಿಸಿದ್ದರು. ಬಿಜೆಪಿ ಮತ್ತು ಜೆಡಿಎಸ್ ನವರು ನೈಜ ವಿಚಾರಗಳ ಬಗ್ಗೆ ಮಾತನಾಡದೆ ಸುಳ್ಳನ್ನು ವೈಭವೀಕರಿಸುವ ಕೆಲಸ ಮಾಡಿದ್ದಾರೆ. 

ಜಾತ್ಯಾತೀತ ತತ್ವಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಜನರು ಸಾಬೀತು ಪಡಿಸಿದ್ದಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ನುಡಿದಂತೆ ನಡೆದು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಬಡವರಿಗೆ ಜಾರಿಗೆ ತಂದು 5 ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಜನರ ದಿಕ್ಕು ತಪ್ಪಿಸುವ ಕೆಲಸಮಾಡಿದವು. 

ಇದಕ್ಕೆ ಉಪಚುನಾವಣೆಯಲ್ಲಿ ಜನರು ಉತ್ತರ ನೀಡಿದ್ದಾರೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ, ಸಹಕಾರ ನೀಡುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿಫಲವಾಗಿದೆ. ಜನರ ಭಾವನೆಗಳನ್ನು ಕೆದಕುವ ಕೆಲಸ ಮಾಡಿವೆ. ಚನ್ನಪಟ್ಟಣ ಮತ್ತು ಶಿಗ್ಗಾವಿ ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ಸರ್ಕಾರದ ಜನಪರ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವದಲ್ಲಿ ಸಂಭ್ರಮಿಸಿದರು. ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಕಾಂಗ್ರೆಸ್ ಮುಖಂಡ ಪಿ.ಆರ್.ಸದಾಶಿವ, ಎಸ್.ಡಿ. ರಾಜೇಂದ್ರ, ಸುರಯ್ಯಬಾನು, ಪ್ರಶಾಂತ್ ಶೆಟ್ಟಿ, ಉಪೇಂದ್ರ, ಸುಬ್ರಹ್ಮಣ್ಯ, ಜುಬೇದಾ, ಸೈಯದ್ ವಸೀಂ, ಬಿನು, ಸುನಿಲ್ ಕುಮಾರ್, ನಂದೀಶ, ಶಿವಣ್ಣ, ಈ.ಸಿ.ಜೋಯಿ, ಎಂ.ಆರ್‌.ರವಿಶಂಕರ್‌, ಮನು, ಮಾಳೂರು ದಿಣ್ಣೆ ರಮೇಶ್, ಬೆನ್ನಿ ಮತ್ತಿತರರಿದ್ದರು.

Share this article