ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿಗೆ ಚಾಲನೆ

KannadaprabhaNewsNetwork |  
Published : Apr 05, 2024, 01:10 AM IST
4ಕೆಎಂಎನ್ ಡಿ15 | Kannada Prabha

ಸಾರಾಂಶ

ಪ್ರತಿಯೊಬ್ಬರು ಜವಾಬ್ದಾರಿಯುತ ಮತದಾರರಾಗಿ, ತಮ್ಮ ಹೊಣೆಗಾರಿಕೆ ಅರಿತು ಮೂಲ ಕರ್ತವ್ಯವನ್ನು ನಿಭಾಯಿಸುವ ದೃಷ್ಟಿಯಿಂದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಬೇಕು ಎಂಬ ಉದ್ದೇಶದಿಂದ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ. ಕುಮಾರ್ ನಗರದ ಜಿಲ್ಲಾ ಪಂಚಾಯತ್ ಮುಂಭಾಗ ಚಾಲನೆ ನೀಡಿದರು.

ನಂತರ ಪಂಜಿನ ಮೆರವಣಿಗೆಯು ಜಿಲ್ಲಾ ಪಂಚಾಯತ್ ಆವರಣದಿಂದ ಹೊರಟು ಬನ್ನೂರು ರಸ್ತೆ-ಕನ್ನಿಕಾ ಪರಮೇಶ್ವರಿ ದೇವಾಲಯ ರಸ್ತೆಯ ಮೂಲಕ ಸಂಚರಿಸಿ ಹೊಸಹಳ್ಳಿ ಸರ್ಕಲ್ ನಲ್ಲಿ ಕೊನೆಗೊಂಡಿತು.

ಮೆರವಣಿಗೆಗೆ ಚಾಲನೆ ನೀಡಿದ ಡೀಸಿ ಡಾ. ಕುಮಾರ್ ಮಾತನಾಡಿ, 18ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಂಡ್ಯ ಕ್ಷೇತ್ರಕ್ಕೆ ಏ.26 ರಂದು ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ನಡೆಯಲಿದೆ. ಜಿಲ್ಲೆಯ ಸಾರ್ವಜನಿಕರು ತಪ್ಪದೇ ಮತ ಚಲಾಯಿಸುವಂತೆ ತಿಳಿಸಿದರು.

ಪ್ರತಿಯೊಬ್ಬರು ಜವಾಬ್ದಾರಿಯುತ ಮತದಾರರಾಗಿ, ತಮ್ಮ ಹೊಣೆಗಾರಿಕೆ ಅರಿತು ಮೂಲ ಕರ್ತವ್ಯವನ್ನು ನಿಭಾಯಿಸುವ ದೃಷ್ಟಿಯಿಂದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಬೇಕು ಎಂಬ ಉದ್ದೇಶದಿಂದ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಮತದಾರರು ಕೂಡ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು. ನೌಕರರಿಗೆ ಏ.26 ರಂದು ಸಂಬಳ ಸಹಿತ ರಜೆ ನೀಡಲಾಗಿದೆ. ಮನೆಯಲ್ಲಿ ಉಳಿಯದೇ ಮತಗಟ್ಟೆಗೆ ಬಂದು ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ಪ್ರಜಾಸತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಎಲ್ಲರಲ್ಲಿಯೂ ವಿನಂತಿಸಿಕೊಳ್ಳುತ್ತೇನೆ ಎಂದು ಕೋರಿದರು.

ಜಿಪಂ ಮುಂಭಾಗದ ಆವರಣದಲ್ಲಿ ಮತದಾನದ ಜಾಗೃತಿಗೆ ಸಂಬಂಧಿಸಿದಂತೆ ರಂಗೋಲಿಯಿಂದ ಬಿಡಿಸಿದ ಚಿತ್ರಗಳು ಕಂಗೊಳಿಸಿದವು. ‘ಆಮಿಷಕ್ಕೆ ಮರುಳಾಗದೇ ಮತ ಚಲಾಯಿಸಿ’, ‘ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಹೆಮ್ಮೆಯಿಂದ’, ‘ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’, ‘ನಮ್ಮ ಮತ ನಮ್ಮ ಹಕ್ಕು’, ‘ಮತ ಚಲಾಯಿಸುವುದು ನಮ್ಮೆಲ್ಲರ ಹಕ್ಕು’, ‘ತುಂಬಿತು 18 ವರ್ಷ, ಸಿಕ್ಕಿತು ಮತದಾನದ ವರ್ಷ’, ‘ಮತದಾನ ಮಾಡಿ ಆಡಳಿತದಲ್ಲಿ ಕೈಜೋಡಿಸಿ’, ‘ರಾಜ್ಯದ ಭವಿಷ್ಯ ನಮ್ಮ ಬೆರಳಲ್ಲಿ’, ‘ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ’, ‘ಮತದಾನ ನಮ್ಮ ಭವಿಷ್ಯ’ ಎಂಬ ಫ್ಲೆಕ್ಸ್ ಗಳ ಮೂಲಕ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ನಗರಸಭೆ ಆಯುಕ್ತ ಮಂಜುನಾಥ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ