ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಅಂಗವಿಕಲರ ಯಂತ್ರಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಗುರುವಾರ ನಡೆಸಲಾಯಿತು.
ಜಿಪಂ ಸಿಇಒ ಸದಾಶಿವ ಪ್ರಭು ಬಿ. ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗವಿಕಲರ ಜಾಥಾದಿಂದ ನಗರ ನಿವಾಸಿಗಳಲ್ಲಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲು ಪ್ರೇರಣೆ ನೀಡುತ್ತದೆ. ಈ ಬಾರಿ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಶೇ.80ರಿಂದ 90ರಷ್ಟು ಮತದಾನದ ಗುರಿ ಹೊಂದಲಾಗಿದೆ. ಜಿಲ್ಲೆಯ ಉಳಿದ ನಗರ ಪ್ರದೇಶದಲ್ಲಿ ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಮೂಲಕ ಮತದಾನ ಜಾಗೃತಿ ಮೂಡಿಸಬೇಕು ಎಂದರು.ಸುಮಾರು 100ಕ್ಕೂ ಹೆಚ್ಚು ಅಂಗವಿಕಲರ ತ್ರಿಚಕ್ರ ವಾಹನ, ದ್ವಿಚಕ್ರ ವಾಹನ ಜಾಥಾವು ಜಿಲ್ಲಾ ಕ್ರೀಡಾಂಗಣದಿಂದ ಅಂಬೇಡ್ಕರ್ ಸರ್ಕಲ್, ಪುನಿತ್ ರಾಜಕುಮಾರ ಸರ್ಕಲ್, ಗಾಂಧಿ ಚೌಕ್, ಮಿರ್ ಆಲಂ ಟಾಕೀಸ್, ಬಸ್ ಡಿಪೋ, ಆಜಾದ್ ನಗರ ಮೂಲಕ ಎಂ.ಪಿ. ಪ್ರಕಾಶ್ ನಗರ, ಅನಂತಶಯನಗುಡಿ ಮೂಲಕ ಹಂಪಿ ರೋಡ್, ಮೂರಂಗಡಿ ಸರ್ಕಲ್ ಮೂಲಕ ಬಸ್ ನಿಲ್ದಾಣ, ಕನಕದಾಸರ ವೃತ್ತದಿಂದ ಪಟೇಲ್ ನಗರ, ಕೋರ್ಟ್ ರಸ್ತೆ ಮೂಲಕ ಮತದಾನ ಜಾಗೃತಿ ಮೂಡಿಸುವ ಮೂಲಕ ಜಿಲ್ಲಾ ಕ್ರೀಡಾಂಗಣದಲ್ಲಿ ಜಾಥಾವನ್ನು ಮುಕ್ತಾಯಗೊಳಿಸಲಾಯಿತು.
ನಗರಸಭೆ ಆಯುಕ್ತ ಚಂದ್ರಪ್ಪ, ತಾಪಂ ಇಒ ಉಮೇಶ ಎಂ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ ಗೋಟಖಿಂಡಿ. ಎಸಿಡಿಪಿಒ ಅಂಬುಜಾ, ಜಿಲ್ಲಾ ಐಇಸಿ ಸಂಯೋಜಕ ಫಾಜಿಲ್ ಅಹಮ್ಮದ್, ತಾಲೂಕು ಐಇಸಿ ಸಂಯೋಜಕ ಎಚ್. ನಾಗರಾಜ, ಸಾಧ್ಯ ಸಂಸ್ಥೆಯ ಆರತಿ, ವಿಕಲಚೇತನರ ಸಂಘಗಳ ಪದಾಧಿಕಾರಿಗಳು ಭಾಗಹಿಸಿದ್ದರು.