ಸಮಗ್ರ ಯೋಜನೆಗೆ ಪ್ಲಾನ್ । ನಾಲ್ಕು ಹಂತದಲ್ಲಿ ಜಾರಿಗೆ ಜಿಲ್ಲಾಧಿಕಾರಿ ಸೂಚನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಪಂ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜಾರಿ ತಂಡಗಳನ್ನು ರಚನೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಪೋಕ್ಸೋ ಹಾಗೂ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇವುಗಳನ್ನು ತಡೆಗಟ್ಟಲು ಚುನಾವಣೆಯ ಮತದಾನ ಜಾಗೃತಿ ಮಾದರಿಯಲ್ಲಿ ಪ್ರತಿ ಮನೆ ಮನೆಗಳಿಗೂ ತೆರಳಿ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಸಹಾಯಕ, ಆರ್‌ಡಿಪಿಆರ್ ಸಿಬ್ಬಂದಿ, ಬೀಟ್ ಪೊಲೀಸ್, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ವಾರ್ಡ್‌ನಗಳ ನೇತೃತ್ವದಲ್ಲಿ ಜಾರಿ ತಂಡಗಳನ್ನು ರಚಿಸಬೇಕು.ಈ ತಂಡಗಳು ಪ್ರತಿ ಮನೆಮನೆಗೆ ತೆರಳಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವುದರೊಂದಿಗೆ ಮಾಹಿತಿ ಸಂಗ್ರಹಿಸಬೇಕು. ಈ ತಂಡಗಳ ಮೇಲುಸ್ತುವಾರಿಗೆ ಗ್ರಾಪಂ ಹಂತದಲ್ಲಿ ಪಿಡಿಒ, ರಾಜಸ್ವ ನಿರೀಕ್ಷಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ವಾರ್ಡನ್, ಸಬ್ ಇನ್ಸ್‌ಪೆಕ್ಟರ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಹಾಗೂ ಅಂಗನವಾಡಿ ಮೇಲ್ವಿಚಾರಕರ ನೇತೃತ್ವದಲ್ಲಿ 2ನೇ ಹಂತದ ಜಾರಿ ತಂಡ ರಚಿಸಬೇಕು.
ಈ ತಂಡ ಹಳ್ಳಿಗಳ ಜಾರಿ ತಂಡದಿಂದ ಪ್ರತಿದಿನ ಮಾಹಿತಿ ಪಡೆದು ವಾರಕೊಮ್ಮೆ ಸಭೆ ನಡೆಸಬೇಕು. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ತಡೆಯಬೇಕು ಎಂದು ಸೂಚಿಸಿದರು.ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಜಾರಿ ತಂಡ ರಚಿಸಬೇಕು. ಇದರಲ್ಲಿ ತಾಪಂ ಇಒ, ಸಿಡಿಪಿಒ, ಬಿಇಒ, ಸಿಪಿಐ, ತಾಲೂಕು ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಸೇರಿ ಇತರೆ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು. ಪ್ರತಿ ತಾಲೂಕಿಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ತಾಲೂಕು ಹಂತದ ತಂಡ ಪ್ರತಿ 15 ದಿನಗಳಿಗೊಮ್ಮೆ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳ ಕುರಿತು ಸಭೆ ನಡೆಸಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್‌ಪಿ, ಡಿವೈಎಸ್‍ಪಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಪಿಯು, ಸಮಾಜ ಕಲ್ಯಾಣ, ಆರೋಗ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಕೋರ್ ಕಮಿಟಿ ರಚಿಸಬೇಕು. ಈ ಸಮಿತಿ 30 ದಿನಗಳಿಗೊಮ್ಮೆ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ಸಹ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣ ಪಿಡುಗುಗಳು ಜಿಲ್ಲೆಯಲ್ಲಿ ಹೆಚ್ಚಾಗಲು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಇವೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ CAP-SECUR (Comprehensive Approach to Prevent-Sexual Explotation, Child-marriages & to Uplift the Right of-Children) ಎನ್ನುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ. ಇತರೆ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ತಂಡಗಳನ್ನು ರಚಿಸಿ, ಸಮಾಜದ ಅತ್ಯಂತ ದುಸ್ತರದಲ್ಲಿರುವ ಸ್ಥಳಗಳಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆ ಹಾಗೂ ಬಲವಂತದ ಮದುವೆಯಿಂದ ಪಾರು ಮಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 93, 2023-24ನೇ ಸಾಲಿನಲ್ಲಿ 131, 2024-25ನೇ ಸಾಲಿನಲ್ಲಿ 150 ಹಾಗೂ 2025-26ನೇ ಸಾಲಿನಲ್ಲಿ ಪ್ರಸ್ತುತ 21 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ದಾಖಲಾದ ಈವರೆಗಿನ ಪೋಕ್ಸೋ ಪ್ರಕರಣಗಳಲ್ಲಿ 18 ತುಂಬಿದ ಹಾಗೂ 30 ವರ್ಷದ ಒಳಗಿನ ಆರೋಪಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಕ್ಸೋ ಕಾಯ್ದೆಯ ಅರಿವು ಇಲ್ಲದೇ ತಪ್ಪು ಮಾಡಿ, ಶಿಕ್ಷೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಪಿಡುಗುಗಳನ್ನು ತೊಡೆದು ಹಾಕಲು ವಿನೂತನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರ ಮೂಲಕ ಗ್ರಾಮಗಳಲ್ಲಿ ಕಿರು ನಾಟಕಗಳನ್ನು ಏರ್ಪಡಿಸಿ, ಮನಮುಟ್ಟುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಸೇರಿದಂತೆ ಎನ್‍ಜಿಒ ಪ್ರತಿನಿಧಿಗಳು ಇದ್ದರು.