ಬಸವರಾಜ ಹಿರೇಮಠ
ಧಾರವಾಡ:ಲೋಕಸಭೆಗೆ ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ಅರ್ಹರೆಲ್ಲರೂ ಮತದಾನ ಮಾಡಲೆಂದು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯು ಮತದಾರರ ಬೆನ್ನು ಬಿದ್ದಿದೆ. ಕಳೆದ ಒಂದೂವರೆ ತಿಂಗಳಿಂದ ನಿಂರತರವಾಗಿ ಹಲವು ರೀತಿಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳಾಗಿವೆ. ಇದೀಗ ಕೊನೆ ಕ್ಷಣದ ಭಾಗವಾಗಿ ಮತದಾನಕ್ಕೆ ಮತಗಟ್ಟೆಗೆ ಬರುವ ಮತದಾರರಿಗೆ ಆಕರ್ಷಣೀಯ ಮತಗಟ್ಟೆಗಳನ್ನು ಜಿಲ್ಲಾಡಳಿತ ರೂಪಿಸಿದೆ.
ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ಮಾಡಲು ಬರುವ ಮತದಾರರನ್ನು ವಿಶೇಷವಾಗಿ ಸ್ವಾಗತಿಸಲು ಆಯೋಗ ಮತಗಟ್ಟೆಗಳನ್ನು ಅಂದವಾಗಿ ರೂಪಿಸಿದೆ. ಧಾರವಾಡ ಲೋಕಸಭೆಗೆ ಜಿಲ್ಲೆಯ ಏಳು ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿ ಒಟ್ಟು 1660 ಮತಗಟ್ಟೆಗಳಿದ್ದು ಈ ಪೈಕಿ 63 ಕೇಂದ್ರಗಳನ್ನು ವಿಶೇಷ ಮತಗಟ್ಟೆಗಳನ್ನಾಗಿ ರೂಪಿಸಿದೆ.ವಿಶೇಷ ಮತಗಟ್ಟೆಗಳಲ್ಲೇನಿದೆ?
ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳನ್ನಾಗಿ ಮಾಡಿದ್ದು ಮಹಿಳೆಯರನ್ನು ಸೆಳೆಯುವ ಹಿನ್ನೆಲೆಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಸಖಿ ಮತಗಟ್ಟೆಗಳಲ್ಲಿ ಪ್ರತಿ ಬಾರಿಯಂತೆ ಎಲ್ಲವೂ ಗುಲಾಬಿ ಬಣ್ಣದಿಂದ ಕಂಗೊಳಿಸಲಿದೆ. ಹಾಗೆಯೇ, ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಒಂದು ವಿಕಲಚೇತನರ ಮತಗಟ್ಟೆ, ಒಂದು ಯುವ ಮತಗಟ್ಟೆ, ಥೀಮ್ ಮತಗಟ್ಟೆ ಹಾಗೂ ಸಾಂಪ್ರದಾಯಿಕ ಮತಟ್ಟೆಗಳು ಸೇರಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ 28 ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಥೀಮ್ ಮತಗಟ್ಟೆಯಲ್ಲಿ ಧಾರವಾಡದ ಪ್ರಸಿದ್ಧ ಸಿಹಿ ತಿಂಡಿ ಪೇಢಾ ಚಿತ್ರವನ್ನು ಆಕರ್ಷಕವಾಗಿ ಬಿಡಿಸಲಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ತೊಟ್ಟಿಲು ಇತ್ತು. ಈ ಬಾರಿ ಲಂಬಾಣಿ ಜನಾಂಗದ ಸಾಂಪ್ರದಾಯಿಕ ಉಡುಪು ಗಮನ ಸೆಳೆಯುತ್ತಿದೆ. ಹೀಗೆ ಆಯಾ ಕ್ಷೇತ್ರದ ಆಕರ್ಷಣೀಯ, ವಿಶೇಷಗಳು ಮತಗಟ್ಟೆಯ ಗೋಡೆಗಳಲ್ಲಿ ಮತದಾರರನ್ನು ಆಕರ್ಷಿಸಲಿವೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸ್ವರೂಪ ಟಿ.ಕೆ. ಮಾಹಿತಿ ನೀಡಿದರು.ಜಾಗೃತಿ ಬರಹ:
ವಿಶೇಷ ಮತಗಟ್ಟೆ ಹೊರತುಪಡಿಸಿ ಎಲ್ಲ ಮತಗಟ್ಟೆಗಳಲ್ಲೂ ಈ ಬಾರಿ ಜಾಗೃತಿ ಬರಹ ಗಮನ ಸೆಳೆಯಲಿದೆ. ನಾನು ಮತ್ತ ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ ನನ್ನ ಧ್ವನಿ, ನನ್ನ ಮತ ನನ್ನ ಶಕ್ತಿ ಹಾಗೂ ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ ಎಂಬ ಬರಹಗಳಿವೆ. ವಿಕಲಚೇತನ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ, ಅವರಿಗೆ ಸಹಾಯಕರನ್ನು ನೀಡಲಾಗುತ್ತಿದೆ. ಪ್ರತಿ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು. ಬೇಸಿಗೆ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ ಸಹ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ಶೇ. 80ರಷ್ಟು ಮತದಾನಕ್ಕೆ ಕಸರತ್ತು..ಧಾರವಾಡ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಮೇ 7ರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಕ್ಷೇತ್ರದಲ್ಲಿ ಈ ಬಾರಿ ಶೇ. 80ರಷ್ಟು ಮತದಾನಕ್ಕೆ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಪ್ರಯತ್ನ ನಡೆಸಿದೆ. 2019ರ ಚುನಾವಣೆಯಲ್ಲಿ ಶೇ. 72ರಷ್ಟು ಮತದಾನವಾಗಿದ್ದು, ಈ ಬಾರಿ ತೀವ್ರ ಪ್ರಯತ್ನ ನಡೆಸಿದೆ. ಈಗಾಗಲೇ ಹಲವು ಬಾರಿಯ ಮತದಾರರ ಜಾಗೃತಿ ಆಗಿದ್ದರೂ, ರಾಜಕಾರಣಿಗಳು ಸಹ ಮತದಾನಕ್ಕೆ ಕಟಿ ಬಿದ್ದರೂ ಎಷ್ಟರ ಮಟ್ಟಿಗೆ ಮತದಾರರು ಮತಗಟ್ಟೆಗೆ ಬಂದು ಮತ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.