ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಈ ಬಾರಿಯ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅಪೇಕ್ಷಿತ ಮತದಾರರ ಸಂಖ್ಯೆ ಪೈಕಿ ದ.ಕ.ಜಿಲ್ಲೆಯಲ್ಲೇ ಅತ್ಯಧಿಕ ಮತದಾರರು ಸೇರಿದ್ದಾರೆ. ಈ ಮೂಲಕ ದ.ಕ.ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
ದ.ಕ. ಜಿಲ್ಲೆಯ ಎಂಟು ಅಸೆಂಬ್ಲಿ ಕ್ಷೇತ್ರ ಸೇರಿ ಮನೆಯಿಂದಲೇ ಮತ ಚಲಾಯಿಸುವವರ ಒಟ್ಟು ಸಂಖ್ಯೆ 8,009 ಮಂದಿ. ಇದರಲ್ಲಿ 85 ವರ್ಷ ಮೇಲ್ಪಟ್ಟವರು 6,053 ಹಾಗೂ ಅಂಗವಿಕಲರು 1,956 ಮಂದಿ ಸೇರಿದ್ದಾರೆ.ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ ಶೇ. 22.6ರಷ್ಟು ಮಂದಿ ಮನೆಯಿಂದಲೇ ಮತ ಚಲಾವಣೆಗೆ ನೋಂದಾಯಿಸುವುದರೊಂದಿಗೆ ದ.ಕ. ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಶೇ.22.2ರೊಂದಿಗೆ ಕೊಡಗು ದ್ವಿತೀಯ ಹಾಗೂ ಶೇ. 21.8ರೊಂದಿಗೆ ಉಡುಪಿ ತೃತೀಯ ಸ್ಥಾನದಲ್ಲಿದೆ.
ಶೇಕಡಾವಾರು ದ.ಕ. ಗರಿಷ್ಠ:ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಅದನ್ನು 85 ವರ್ಷಕ್ಕೆ ಏರಿಕೆ ಮಾಡಲಾಗಿದೆ.
ದ.ಕ. ಜಿಲ್ಲೆಯಲ್ಲಿ ಈ ಬಾರಿ 21,896 ಮಂದಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ 8,055 ಮಂದಿ ಮನೆಯಿಂದಲೇ ಮತದಾನಕ್ಕೆ 12 ಡಿ ಫಾರ್ಮ್‌ನಡಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ 6,053 ಮಂದಿಗೆ ಅವಕಾಶ ನೀಡಲಾಗಿದೆ. 4,447 ಮಂದಿ ವಯಸ್ಸಾದರೂ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ.ಬೆಳ್ತಂಗಡಿ 573, ಮೂಡುಬಿದಿರೆ 913, ಮಂಗಳೂರು ಉತ್ತರ 795, ಮಂಗಳೂರು ದಕ್ಷಿಣ 1,310, ಮಂಗಳೂರು 351, ಬಂಟ್ವಾಳ 623, ಪುತ್ತೂರು 787, ಸುಳ್ಯ 701 ಮಂದಿ 85 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಮತ ಚಲಾಯಿಸಲಿದ್ದಾರೆ.
ಅಂಗವಿಕತೆಯಲ್ಲಿ ಶೇ.40ಕ್ಕಿಂತ ವೈಕಲ್ಯತೆ ಹೊಂದಿದ್ದರೆ ಅಂತಹವರಿಗೆ ಕೂಡ ಮನೆಯಿಂದಲೇ ಮತದಾನಕ್ಕೆ ಅವಕಾಶ ಇದೆ. ಸುಮಾರು 14,084 ಅಂಗವಿಕಲ ಮತದಾರರನ್ನು ಗುರುತಿಸಿದ್ದು, ಒಟ್ಟು 14,084 ಅಂಗವಿಕಲ ಮತದಾರರ ಪೈಕಿ 1,977 ಮಂದಿ 12 ಡಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿ 239, ಮೂಡುಬಿದಿರೆ 253, ಮಂಗಳೂರು ಉತ್ತರ 180, ಮಂಗಳೂರು ದಕ್ಷಿಣ 91, ಮಂಗಳೂರು 164, ಬಂಟ್ವಾಳ 352, ಪುತ್ತೂರು 340 ಹಾಗೂ ಸುಳ್ಯದಲ್ಲಿ 337 ಮಂದಿ ಅಂಗವಿಕಲರು ಮನೆಯಿಂದಲೇ ಮತ ಚಲಾಯಿಸಲಿದ್ದಾರೆ.ಮನೆಯಿಂದಲೇ ಮತ ಚಲಾವಣೆ ಹೇಗೆ?
ಲೋಕಸಭಾ ಚುನಾವಣೆಗೆ ಒಂದು ವಾರ ಮೊದಲು ಇಬ್ಬರು ಮತಗಟ್ಟೆ ಅಧಿಕಾರಿಗಳು, ವಿಡಿಯೋ ಗ್ರಾಫರ್ಸ್, ಮೈಕ್ರೋ ಅಬ್ಸರ್ವರ್, ಪೋಲಿಂಗ್ ಆಫೀಸರ್, ಚುನಾವಣಾ ಏಜೆಂಟರು ಸೇರಿದಂತೆ ಆರರಿಂದ ಏಳು ಮಂದಿ ಮನೆಗೆ ತೆರಳಿ ಮತದಾನ ಮಾಡಿಸಿಕೊಂಡು ಬರಲಿದ್ದಾರೆ. ಇದಕ್ಕೂ ಚುನಾವಣಾ ಅಧಿಕಾರಿಗಳು ಮೊಬೈಲ್ ಕರೆ, ಅಂಚೆ ಮೂಲಕ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಮನೆಯಿಂದಲೇ ಮತ ಚಲಾವಣೆಗೆ ಸನ್ನದ್ಧರಾಗಿರುವಂತೆ ಸೂಚನೆ ನೀಡುತ್ತಾರೆ. ಮತದಾನ ಬಳಿಕ ಬ್ಯಾಲೆಟ್‌ನ್ನು ಭದ್ರಪಡಿಸಿ ಜಿಲ್ಲಾ ಚುನಾವಣಾ ಶಾಖೆಗೆ ರವಾನಿಸುತ್ತಾರೆ. 85 ವರ್ಷಕ್ಕಿಂತ ಕೆಳಗಿನವರು ಅಶಕ್ತರಿದ್ದರೆ, ಅಂತಹವುರ ಮತಗಟ್ಟೆಗೆ ಬಂದು ಮತ ಚಲಾಯಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಾರೆ.2 ಬಾರಿ ಮಾತ್ರ ಅವಕಾಶ: ಮತದಾನಕ್ಕಾಗಿ ಗರಿಷ್ಠ ಎರಡು ಬಾರಿ ಚುನಾವಣಾ ಅಧಿಕಾರಿಗಳು ಒಬ್ಬರ ಮನೆಗೆ ಬಂದು ಹೋಗಲು ಅವಕಾಶ ಇದೆ. ಮೂರನೇ ಬಾರಿ ಮನೆಗೆ ಅಧಿಕಾರಿಗಳೂ ಬರುವುದಿಲ್ಲ, ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಬೂತ್‌ಗೆ ತೆರಳಿ ಮತ ಚಲಾಯಿಸಲೂ ಅವಕಾಶ ಇರುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಾರೆ.ಕೇರಳದವರಿಗೆ ಅಂಚೆ ಮತ ಇಲ್ಲ: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮತದಾರರ ಪಟ್ಟಿಯಲ್ಲಿರುವ ಸರ್ಕಾರಿ ಉದ್ಯೋಗಿಗಳಿಗೆ ಅಂಚೆ ಮತ ಚಲಾಯಿಸಲು ಅವಕಾಶ ಸಿಕ್ಕಿಲ್ಲ.
ದ.ಕ.ಜಿಲ್ಲೆ ಗಡಿ ಪ್ರದೇಶ ಆಗಿರುವುದರಿಂದ ಕಾಸರಗೋಡಿನಿಂದ ಬಂದು ಇಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿದ್ದಾರೆ. ಅಂತಹವರಿಗೆ ಅಂಚೆ ಮೂಲಕ ಮತದಾನ ಸೌಲಭ್ಯ ಸಾಧ್ಯವಾಗುತ್ತಿಲ್ಲ. ಅಂತರ್ ರಾಜ್ಯ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿಲ್ಲ. ಈ ಕುರಿತು ಸ್ಪಷ್ಟನೆ ಕೋರಿ ಜಿಲ್ಲಾ ಚುನಾವಣಾ ಶಾಖೆಯಿಂದ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ.ಪ್ರಸಕ್ತ ಒಂದೇ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವವರು ಇಡಿಸಿ (ಎಲೆಕ್ಷನ್ ಡ್ಯೂಟಿ ಸರ್ಟಿಫಿಕೆಟ್) ಪಡೆದು ಯಾವುದೇ ಅಸೆಂಬ್ಲಿ ಕ್ಷೇತ್ರದಲ್ಲೂ ಮತ ಚಲಾಯಿಸಬಹುದು. ಅಂಚೆ ಮತಗಳನ್ನು ಈ ಬಾರಿ ಅಂಚೆ ಮೂಲಕ ತರಿಸಿಕೊಳ್ಳುವ ಬದಲು ತರಬೇತಿ ಕೇಂದ್ರಗಳಲ್ಲೇ ಚುನಾವಣಾಧಿಕಾರಿಗಳೇ ಆಯಾ ಕ್ಷೇತ್ರಗಳ ಮತ ಪತ್ರಗಳನ್ನು ತರಿಸಿಕೊಂಡು ಮತ ಚಲಾವಣೆಗೆ ಅವಕಾಶ ನೀಡುತ್ತಾರೆ. ಅಂಚೆ ಮತದಾನದ ಗೌಪ್ಯತೆ ಕಾಪಾಡುವ ಸಲುವಾಗಿ ಈ ಬಾರಿ ಮಾರ್ಪಾಟು ಮಾಡಲಾಗಿದೆ.