ಹಾನಗಲ್ಲ: ಮೂಢ ನಂಬಿಕೆಗಳಿಗೆ ತಿಲಾಂಜಲಿ ಹಾಡುವ ಸಂಕಲ್ಪವಾದರೆ ಸಾಮಾಜಿಕ ಹಿತ ಕಾಯಲು ಸಾಧ್ಯ. ವಚನಗಳು ಮೌಢ್ಯ, ಅನಿಷ್ಟಗಳನ್ನು ಅಟ್ಟಿ ಸಾಮಾಜಿಕ ಸ್ವಾಸ್ಥ್ಯ ಉಳಿಸುವ ಶಕ್ತಿ ಹೊಂದಿವೆ ಎಂದು ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಹೊನ್ನಪ್ಪ ಭೋವಿ ತಿಳಿಸಿದರು.
ಹಾನಗಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸತ್ಯ ನಿಷ್ಠೆಯಿಂದ ನಡೆಯುವುದೇ ಧರ್ಮ. ಸರ್ವ ಧರ್ಮ ಸಹಿಷ್ಣುತೆ, ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಒಂದಾಗಿ ಮುನ್ನಡೆಯಬೇಕು. ಬದಲಾದ ಕಾಲದಲ್ಲಿ ಧರ್ಮ ಸಿದ್ಧಾಂತಗಳು ಬದಲಾಗುವುದು ಬೇಡ. ಮನುಷ್ಯರೆಲ್ಲ ಒಂದೇ ಎಂಬ ನಿರ್ಮಲ ಭಾವ ನಮ್ಮದಾಗಬೇಕು. ಸಮಾಜ ಸುಧಾರಕರನ್ನೇ ಟೀಕಿಸುವ, ದ್ವೇಷಿಸುವ ಸಾಮಾಜಿಕ ವ್ಯವಸ್ಥೆಯ ನಡುವೆ ನಾವಿದ್ದೇವೆ ಎಂಬುದೇ ಖೇದದ ಸಂಗತಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ನಗರ ಘಟಕದ ಅಧ್ಯಕ್ಷ ಪ್ರೊ. ಸಿ. ಮಂಜುನಾಥ, ವಚನಗಳು ಬರಿ ಹಾಡಿಗೆ ಸೀಮಿತವಾದವುಗಳಲ್ಲ. ಅವುಗಳ ಅಂತರ್ಯದ ಅರ್ಥ ಸಮಾಜಕ್ಕೆ ತಲುಪಬೇಕು. ೧೨ನೇ ಶತಮಾನ ಇಡೀ ಕನ್ನಡ ಸಾಹಿತ್ಯ ಇತಿಹಾಸಕ್ಕೆ ಮಾತ್ರವಲ್ಲ ಸಾಂಸ್ಕೃತಿಕ ಇತಿಹಾಸಕ್ಕೆ ಕೂಡ ಮೇರು ಸ್ಥಾನ ಹೊಂದಿದೆ. ಶರಣರ ಸಂದೇಶಗಳು ಶ್ರೇಷ್ಠ ವಾಣಿಗಳು ಎಂದರು.
ಶಿಕ್ಷಕ ಎಸ್.ವಿ. ಮಠದ ಉಪನ್ಯಾಸ ನೀಡಿ, ಅಲ್ಲಮ ಪ್ರಭುಗಳು ಕಂಡ ಸಾಮಾಜಿಕ ಕಲ್ಪನೆ ಸಂಪೂರ್ಣವಾಗಿ ಸ್ವಸ್ಥ್ಯ ಸಮಾಜವನ್ನು ಮಾಡುವುದಾಗಿತ್ತು. ಇಡೀ ದೇಶದ ಬೇರೆ ಬೇರೆ ರಾಜ್ಯಗಳಿಂದ ರಾಜರಾದಿಯಾಗಿ ಬಂದು ಶರಣರಾದರು. ಎಲ್ಲ ಕಾಲ ದೇಶಕ್ಕೆ ಸಲ್ಲುವ ವಚನಗಳು ಈಗ ನಮ್ಮೆಲ್ಲರ ಮನೆ ಮನೆಯ ಮಾತಾಗಬೇಕು ಎಂದರು.ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ, ಸುವರ್ಣ ಹಿರೇಗೌಡರ, ವೀಣಾ ಹೂಗಾರ, ನೀಲಮ್ಮ ಮೂಲಿಮನಿ, ಅಶೋಕ ದಾಸರ, ಎಸ್.ವಿ. ಹೊಸಮನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೇಯಾ ಹೂಗಾರ ವಚನ ಸಂಗೀತ ಹಾಡಿದರು.