ವಿವಿ ಸಾಗರ ನೀರು ಹೆಚ್ಚಳ: ಹೊಸದುರ್ಗ ರೈತರಲ್ಲಿ ತಳಮಳ

KannadaprabhaNewsNetwork | Published : Oct 25, 2024 12:54 AM

ಸಾರಾಂಶ

ವಾಣಿವಿಲಾಸ ಸಾಗರ ಜಲಾಶಯ ಮತ್ತೆ ಭರ್ತಿಯಾಗುವತ್ತ ಮುಖ ಮಾಡಿದೆ. 89 ವರ್ಷಗಳ ನಂತರ ಅಂದರೆ 2022 ರಲ್ಲಿ ಭರ್ತಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ವೇದಾವತಿ ಮೈ ದುಂಬಿ ಹರಿಯುತ್ತಿದ್ದು ಭರ್ತಿಯಾಗುವ ಎಲ್ಲ ಸುಳಿವು ದೊರೆತಿವೆ. ಬುಧವಾರ ಜಲಾಶಯಕ್ಕೆ 7740 ಕ್ಯೂಸೆಕ್‌ ನೀರು ಹರಿದು ಬಂದಿತ್ತು. 130 ಅಡಿ ಸಂಗ್ರಹ ಸಾಮರ್ಥ್ಯದ ವಿವಿ ಸಾಗರದ ನೀರಿನ ಮಟ್ಟ ಶುಕ್ರವಾರಕ್ಕೆ 126 ಅಡಿ ದಾಟಲಿದ್ದು ಕೋಡಿ ಬೀಳಲು ನಾಲ್ಕು ಅಡಿ ಮಾತ್ರ ಉಳಿದಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಾಣಿವಿಲಾಸ ಸಾಗರ ಜಲಾಶಯ ಮತ್ತೆ ಭರ್ತಿಯಾಗುವತ್ತ ಮುಖ ಮಾಡಿದೆ. 89 ವರ್ಷಗಳ ನಂತರ ಅಂದರೆ 2022 ರಲ್ಲಿ ಭರ್ತಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ವೇದಾವತಿ ಮೈ ದುಂಬಿ ಹರಿಯುತ್ತಿದ್ದು ಭರ್ತಿಯಾಗುವ ಎಲ್ಲ ಸುಳಿವು ದೊರೆತಿವೆ. ಬುಧವಾರ ಜಲಾಶಯಕ್ಕೆ 7740 ಕ್ಯೂಸೆಕ್‌ ನೀರು ಹರಿದು ಬಂದಿತ್ತು. 130 ಅಡಿ ಸಂಗ್ರಹ ಸಾಮರ್ಥ್ಯದ ವಿವಿ ಸಾಗರದ ನೀರಿನ ಮಟ್ಟ ಶುಕ್ರವಾರಕ್ಕೆ 126 ಅಡಿ ದಾಟಲಿದ್ದು ಕೋಡಿ ಬೀಳಲು ನಾಲ್ಕು ಅಡಿ ಮಾತ್ರ ಉಳಿದಿದೆ.ವಿವಿಸಾಗರ ಕೋಡಿ ಬಿದ್ದಲ್ಲಿ ಒಂದೆಡೆ ರೈತರ ಮೊಗದಲ್ಲಿ ಸಂತಸದ ಗೆರೆ ಮೂಡಿದರೆ ಹೊಸದುರ್ಗ ತಾಲೂಕಿನ ರೈತರಿಗೆ ಕಾರ್ಮೋಡ ಕವಿಯುತ್ತದೆ. ವಿವಿ ಸಾಗರ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 130 ಅಡಿ ದಾಟಿ ಕೋಡಿ ಬೀಳುತ್ತಿದ್ದಂತೆ ಹೊಸದುರ್ಗ ರೈತರ ಜಮೀನುಗಳು, ಫಸಲು ಹಿನ್ನೀರಲ್ಲಿ ಮುಳುಗಲು ಶುರುವಾಗುತ್ತವೆ. ಜಲಾಶಯ ಭರ್ತಿಯಾದಾಗ ಬೇರೆ ಡ್ಯಾಂಗಳಲ್ಲಿ ಇರುವಂತೆ ನೀರು ಹೊರ ಹಾಕಲು ಕ್ರಸ್ಟ್ ಗೇಟ್ ಗಳಿಲ್ಲ. ಕಾಲುವೆಗೆ ನೀರು ಬಿಡಲು ಎರಡು ಡಿಸ್ ಜಾರ್ಜ್ ತೂಬುಗಳಿವೆ. ಇದರ ಹೊರತಾಗಿ ನೀರು ಭರ್ತಿಯಾದ ಡ್ಯಾಂ ನಿಂದ ನೀರು ಹೊರ ಹೋಗಲು ಕೋಡಿಯೇ ಆಧಾರ.

ಎರಡು ವರ್ಷದ ಹಿಂದೆ ಡ್ಯಾಂ ಭರ್ತಿಯಾದಾಗ ಒಳ ಹರಿವು 16 ಸಾವಿರ ಕ್ಯೂಸೆಕ್‌ ಇತ್ತು. ಪ್ರತಿನಿತ್ಯ ಒಂದೂವರೆ ಟಿಎಂಸಿ ನೀರು ಡ್ಯಾಂಗೆ ಹರಿದು ಬಂದಿತ್ತು. ಇಷ್ಟೊಂದು ಪ್ರಮಾಣದ ನೀರನ್ನು ಜಲಾಶಯದಿಂದ ನದಿಗೆ ಬಿಡಲು ಯಾವುದೇ ಕ್ರಸ್ಟ್ ಗೇಟ್ ಇಲ್ಲ. ಕೋಡಿ ಮೇಲೆಯೇ ಧುಮುಕಬೇಕು. ಹಾಗಾಗಿ 130 ಅಡಿ ಸಾಮರ್ಥ್ಯದ ಜಲಾಶಯ 135 ಅಡಿ ತನಕ ಹೋಗಿತ್ತು. ಜಲಾಶಯದಲ್ಲಿ ಐದು ಅಡಿ ಹೆಚ್ಚುವರಿ ನೀರು ಸಂಗ್ರಹವಾದ ಹಿನ್ನೆಲೆ ಹೊಸದುರ್ಗ ತಾಲೂಕಿನ ರೈತರ ಜಮೀನುಗಳು ಮುಳುಗಿದ್ದವು. ಈ ಬಾರಿಯೂ ಹಾಗೆ ಆಗಬಹುದೇ ಎಂಬ ಭೀತಿ ರೈತರಲ್ಲಿ ಮೂಡಿದೆ.

ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾದಲ್ಲಿ ಹೊಸದುರ್ಗ ತಾಲೂಕಿನ ಒಂದು ಎಕರೆ ಜಮೀನೂ ಸಹ ಮುಳುಗಡೆಯಾಗುವುದಿಲ್ಲ. 130 ದಾಟಿದರೆ ಅಪಾಯ ನಿಧಾನವಾಗಿ ಎದುರಾಗುತ್ತವೆ. ಕಳೆದೆರೆಡು ವರ್ಷದ ಹಿಂದೆ ಜಮೀನು ಮುಳುಗಡೆಯಾದಾಗ ಸರ್ಕಾರದಿಂದ ಪರಿಹಾರ ರೈತರಿಗೆ ದೊರಕಿರಲಿಲ್ಲ. ಇಂತಹದ್ದೊಂದು ಪರಿಸ್ಥಿತಿ ಎದುರಾಗುತ್ತದೆ ಎಂದು ಈ ತಲೆ ಮಾರು ಊಹಿಸಿರಲಿಲ್ಲ. 89 ವರ್ಷದ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿದ್ದು ಇದಕ್ಕೆ ಕಾರಣವಾಗಿತ್ತು.

ಸರ್ಕಾರ ಗಡಿ ಗುರುತು ಮಾಡಿರುವ ಹಿನ್ನೀರು ಪ್ರದೇಶದಲ್ಲಿಯೇ ನೀರು ಸಂಗ್ರಹಗೊಂಡಿದೆ ಎಂದು ಹಲವರು ಗ್ರಹಿಸಿದ್ದರು. ಆದರೆ ಆಗಿದ್ದೇ ಬೇರೆ. ಹಿನ್ನೀರು ಪ್ರದೇಶದಲ್ಲಿ ಗಡಿ ಗುರುತು ಕಲ್ಲುಗಳು ಗೊತ್ತು ಮಾಡಿರುವ ವ್ಯಾಪ್ತಿ ಮೀರಿ ರೈತರ ಖಾಸಗಿ ಸ್ವತ್ತುಗಳು ನೀರಲ್ಲಿ ಮುಳುಗಡೆಯಾಗಿದ್ದವು. ಬೋರ್‌ವೆಲ್‌ಗಳು, ಪಂಪ್‌ ಮೋಟರ್‌, ಕರೆಂಟ್‌ ಲೈನ್‌ ಟಿಸಿ ಹಾಗೂ ಡ್ರಿಪ್‌ಗಳು ನೀರಿನಲ್ಲಿ ಮುಳುಗಿದ್ದವು.

ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿರುವ ಮತ್ತೊಡು ಮತ್ತು ಮಾಡದಕೆರೆ ಹೋಬಳಿ ವ್ಯಾಪ್ತಿಯ ಸಾಕಷ್ಟುಗ್ರಾಮಗಳ ರೈತರು ಕಂಗಲಾಗಿದ್ದರು. ಮಾಡದಕೆರೆ ಹೋಬಳಿಯ ಗ್ರಾಮಗಳಾದ ಲಕ್ಕಿಹಳ್ಳಿ, ಮುದ್ದಾಪುರ, ಬೇವಿನಹಳ್ಳಿ, ಐನಹಳ್ಳಿ, ಅಂಚಿಬಾರಿಹಟ್ಟಿ, ನಾಗಯ್ಯನಹಟ್ಟಿ, ತಿಮ್ಮಯ್ಯನಹಟ್ಟಿ, ಕೆರೆಕೋಡಿಹಟ್ಟಿ, ಶೀರನಕಟ್ಟೆ, ಕೋಡಿಹಳ್ಳಿಹಟ್ಟಿ, ಪೂಜಾರಹಟ್ಟಿ, ಎಂ.ಮಲ್ಲಾಪುರ, ಮಾಳಿಗೆಹಟ್ಟಿ, ಮತ್ತೋಡು ಹೋಬಳಿಯ ಅರೇಹಳ್ಳಿ, ತಿಪ್ಪೇನಹಳ್ಳಿ, ಹೊಸೂರು ಭೋವಿಹಟ್ಟಿ, ಚಳ್ಳಕೆರೆ, ಹುಣಸೇಕಟ್ಟೆ, ಇಂಡೇದೇವರಹಟ್ಟಿ, ನಾಗತಿಹಳ್ಳಿ, ಹೊಸತಿಮ್ಮಪ್ಪನಹಟ್ಟಿ, ಹಳೇತಿಮ್ಮಪ್ಪನಹಟ್ಟಿ, ತಾರೀಕೆರೆ, ಅಗಸರಹಳ್ಳಿ, ಕಾರೇಹಳ್ಳಿ, ಲಿಂಗದಹಳ್ಳಿ, ಗಂಜಿಗೆರೆ, ಜೋಗಮ್ಮನಹಳ್ಳಿ, ಸಿದ್ದಪ್ಪನಹಟ್ಟಿ, ಅಜ್ಜಿಕಂಸಾಗರ ಮುಂತಾದ ಗ್ರಾಮಗಳ ರೈತರ ಜಮೀನುಗಳು ಮುಳುಗಡೆಯಾಗಿದ್ದವು.ಎಚ್ಚೆತ್ತುಕೊಂಡ ಇಲಾಖೆ: ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹದ ನಂತರ ಎದುರಾಗುವ ಮುಳುಗಡೆ ನಿಯಂತ್ರಿಸಲು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಆಲೋಚಿಸಿ ತಜ್ಞರಿಂದ ವರದಿ ಕೋರಿದ್ದರು. ಅದರ ಅನುಸಾರ ಕೋಡಿ ಪ್ರದೇಶದಲ್ಲಿ ಒಟ್ಟು ಹನ್ನೆರಡು ಕ್ರಸ್ಟ್ ಗೇಟ್ ಅಳವಡಿಸುವ ಸಲಹೆ ನೀಡಿದ್ದರು. ಅದರಂತೆ ಕೇಂದ್ರ ಜಲ ಆಯೋಗಕ್ಕೆ ಪ್ರಸ್ತಾವ ಹೋಗಿದೆ. ಅಲ್ಲಿಂದ ಇನ್ನು ಅನುಮೋದನೆ ದೊರೆತಿಲ್ಲ. ನೀರು ಸಂಗ್ರದ ಕೋಡಿ ಮಟ್ಟ 130 ಅಡಿ ಉಳಿಸಿಕೊಂಡು ಕ್ರಸ್ಟ್ ಗೇಟ್ ನಿರ್ಮಿಸಲಾಗುತ್ತಿದೆ.

ಜಲಾಶಯದಲ್ಲಿ ಹಾಲಿ ಕಾಲುವೆಗೆ ನೀರು ಬಿಡಲು ಇರುವ ತೂಬಿನಲ್ಲಿ ಕೇವಲ ಒಂದು ಸಾವಿರ ಕ್ಯೂಸೆಕ್‌ ನೀರು ಹೊರ ಹೋಗುತ್ತದೆ. ಎಂಟರಿಂದ ಹತ್ತು ಸಾವಿರ ಕ್ಯೂಸೆಕ್‌ ಒಳಹರಿವು ಬಂದಲ್ಲಿ ಏಕ ಕಾಲದಲ್ಲಿ ನೀರು ಹೊರ ಹಾಕಲು ಸಾಧ್ಯವಿಲ್ಲ. ಹಾಗಾಗಿ ಕ್ರಸ್ಟ್ ಗೇಟ್ ನಿರ್ಮಾಣ ಅನಿವಾರ್ಯವಾಗಿದೆ.

Share this article