ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸೋಸಲೆಯ ಶ್ರೀ ವ್ಯಾಸರಾಜಮಠದ ವತಿಯಿಂದ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗಿರುವ ವ್ಯಾಸಶ್ರೀಶ ಉಚಿತ ಸಂಚಾರಿ ಚಿಕಿತ್ಸಾಲಯಕ್ಕೆ ಹಳೇ ತಿರುಮಕೂಡಲಿನಲ್ಲಿ ಚಾಲನೆ ನೀಡಲಾಯಿತು.ತಾಲೂಕಿನ ಹಳೇ ತಿರುಮಕೂಡಲಿನಲ್ಲಿ ಉಚಿತ ಸಂಚಾರಿ ಚಿಕಿತ್ಸಾಲಯದ ಕಾರ್ಯ ಚಟುವಟಿಕೆಗೆ ಚಾಲನೆ ನೀಡಿದ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಆರ್. ಚೇತನ್ ಮಾತನಾಡಿ, ಸೋಸಲೆ ವ್ಯಾಸರಾಜ ಮಠದ ಸ್ವಾಮೀಜಿಗಳು ಬಡ ಜನರ ಅನುಕೂಲಕ್ಕಾಗಿ ಅವರ ಆರೋಗ್ಯಕ್ಕೆ ಪೂರಕವಾಗಿಕೆಲಸ ನಿರ್ವಹಿಸುವ ಉಚಿತ ಸಂಚಾರಿ ಚಿಕಿತ್ಸಾಲಯವನ್ನು ಕೊಡುಗೆಯಾಗಿ ನೀಡಿದ್ದು, ಈ ಸಂಚಾರಿ ವಾಹನ ಗ್ರಾಮದಲ್ಲಿ ಮನೆ ಮನೆ ಮುಂದೆ ಹೋಗಿ ರೋಗಿಗಳನ್ನು ತಪಾಸಣೆ ಮಾಡುವ ಕೆಲಸ ಮಾಡುತ್ತದೆ. ಗ್ರಾಮೀಣ ಭಾಗದ ಜನರು ದೊರಕಿರುವ ಸೌಲಭ್ಯದ ಸದುಪಯೋಗಕ್ಕೆ ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಪಿ. ಸ್ವಾಮಿನಾಥ ಗೌಡ ಮಾತನಾಡಿ, ಆರೋಗ್ಯ ಸೇವೆ ಎಲ್ಲ ಸೇವೆಗಳಿಗಿಂತ ಶ್ರೇಷ್ಠವಾಗಿದೆ. ಮಠದ ವತಿಯಿಂದ ನೀಡಲಾಗುತ್ತಿರುವ ಸೇವೆಯನ್ನು ಸುತ್ತಮತ್ತಲ ಗ್ರಾಮದ ಜನತೆ ಉಪಯೋಗಿಸಿಕೊಳ್ಳುವಂತೆ ಕೋರಿದರು.ವ್ಯಾಸರಾಜ ಮಠದ ಸೇವಕ ಆನಂದ್ ಮಾತನಾಡಿ, ಸೋಸಲೆ ವ್ಯಾಸರಾಜ ಮಠದಿಂದ ಆರಂಭಿಸಿರುವ ಆರೋಗ್ಯ ಸೇವೆ ಸಂಪೂರ್ಣವಾಗಿ ಉಚಿತವಾಗಿದೆ. ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಎಲ್ಲ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ರೋಗ ಉಲ್ಬಣವಾಗಿದ್ದಲ್ಲಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲೂ ಸಹ ನಮ್ಮ ರೆಫರೆನ್ಸ್ ಲೆಟರ್ ಕೊಟ್ಟರೆ ಚಿಕಿತ್ಸಾ ವೆಚ್ಚ ಕಡಿಮೆಯಾಗುತ್ತದೆ, ಮೈಸೂರಿನ ಆಸ್ಪತ್ರೆಯಲ್ಲಿ 1,200 ರು.ಗಳ ವೆಚ್ಚದ ಸ್ಕ್ಯಾನಿಂಗ್ ಅನ್ನು ನಮ್ಮ ಉಲ್ಲೇಖ ಪತ್ರ ತೋರಿಸಿದರೆ 600 ರು.ಗಳಿಗೆ ಮಾಡಿಕೊಡಲಾಗುತ್ತದೆ ಎಂದರು.
ಪ್ರತಿ 15 ದಿನಕ್ಕೊಮ್ಮೆ ಶಿಬಿರ ನಡೆಸಿ ಎಲ್ಲ ರೀತಿಯ ತಜ್ಞ ವೈದ್ಯರನ್ನುಕರೆಸಿ ತಪಾಸಣೆ ಮಾಡಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ. ಹೃದಯ, ಕಣ್ಣು,ಮಕ್ಕಳ ತಜ್ಞರು ಹಾಗುಮಾನಸಿಕ ತಜ್ಞರು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ನೀಡಲಿದ್ದಾರೆ.ಸಂಚಾರಿ ಚಿಕಿತ್ಸಾಲಯವು ಸೋಮವಾರ ಮತ್ತು ಗುರುವಾರ 10.45 ರಿಂದ 11.30 ರವರೆಗೆ ಹೊಸ ತಿರುಮಕೂಡಲು,11.30 ರಿಂದ 12.30 ರ ತನಕ ಬಿಲಿಗೆರೆ ಹುಂಡಿ,12.30 ರಿಂದ 1.30 ರವರೆಗೆ ಡಣಾಯಕನಪುರ, ಮಂಗಳವಾರ 11 ರಿಂದ 12 ಮುಸುವಿನ ಕೊಪ್ಪಲು,12 ರಿಂದ 1.00 ಕೆಬ್ಬೇಹುಂಡಿ,ಬುಧವಾರ ಉಕ್ಕಲಗೆರೆ,ಮುಡುಕನಪುರ ಗ್ರಾಮಗಳಲ್ಲಿ ಸಂಚರಿಸಲಿದ್ದು, ಪ್ರತಿ ದಿನ ಹಳೇ ತಿರುಮಕೂಡಲಿನಲ್ಲಿ ಲಭ್ಯವಿರಲಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಚೌಡೇಶ್ವರಿ ದೇವಸ್ಥಾನದ ಅರ್ಚಕ ಸೋಮಣ್ಣ, ಸುರೇಶ್, ಟಿ.ಎಂ. ನಾಗಣ್ಣ ಇದ್ದರು.