ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆಕನ್ನಡ ಕಟ್ಟುವ ಕೆಲಸಕ್ಕೆ ಭಾಷೆ, ಗಡಿ, ದೇಶ ಎಂಬ ಯಾವುದೇ ಬೇಧ ಮಾಡದೇ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಧ್ಯೇಯದೊಂದಿಗೆ ನಡೆಯಬೇಕು ಎಂದು ಪ್ರಾಂಶುಪಾಲೆ ಪ್ರೊ.ಎಚ್.ಎಂ. ಹೇಮಲತಾ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಸ್ಕೃತಿಯ ಅಧ್ಯಯನ ಬಹುಶಿಸ್ತೀಯ ನೆಲೆಗಳು ಎಂಬ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷಾ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಲಿಯಲು ಸಾಗರದಷ್ಟು ವಿಷಯಗಳಿವೆ. ಅದರಲ್ಲಿ ಕನ್ನಡವನ್ನು ಹೆಚ್ಚು ಪ್ರೀತಿಸಬೇಕು. ರಾಷ್ಟ್ರಕವಿ ಕುವೆಂಪು ಅವರ ಚಿಂತನೆಯನ್ನು ಸದಾ ಮನಸ್ಸಿನಲ್ಲಿ ಅಳವಡಿಸಬೇಕು ಎಂದರು.
ಇತ್ತೀಚಿನ ಯುವಕರಲ್ಲಿ ಮಾತೃಭಾಷಾ ಪ್ರೇಮ ಕಡಿಮೆಯಾಗುತ್ತಿದೆ. ಇತರೆ ಭಾಷೆಗಳ ಮೇಲೆ ಒಲವುಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲ. ಆದರೆ, ನಮ್ಮ ಮಾತೃಭಾಷೆಯ ಬೆಳವಣಿಗೆಗೆ ಮೊದಲು ಅವಕಾಶವನ್ನು ನೀಡಬೇಕು ಎಂದು ತಿಳಿಸಿದರು.ಕಾಲೇಜಿನ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸಲೇಬೇಕು ಎಂಬ ಸಂಕಲ್ಪವನ್ನು ಸರ್ಕಾರ ಮಾಡುತ್ತಿದೆ. ಹಾಗಾಗಿ ಕನ್ನಡ ವಿಷಯದ ಬಗೆಗೆ ಹಲವು ಮುಕ್ತ ಅವಕಾಶಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಭಾಷಾ ಪ್ರೇಮಿಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸ ನೀಡಿದ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹೆಚ್.ಡಿ. ಉಮಾಶಂಕರ್, ಭಾಷಾ ಸಂಸ್ಕೃತಿ ಉನ್ನತಿಗೆ ಕನ್ನಡವು ತನ್ನದೆ ಆದ ಕಾಣಿಕೆಯನ್ನು ನೀಡಿದೆ. ಯಾವುದೇ ಒಂದು ಭಾಷೆ ಬೆಳವಣಿಗೆಯು ತನ್ನ ಮೂಲ ಸಂಸ್ಕೃತಿಯನ್ನು ಒಳಗೊಂಡಂತೆ ಬೆಳೆಯಬೇಕು. ಮೂಲ ಸಂಸ್ಕೃತಿಗೆ ಧಕ್ಕೆಯಾದರೆ ಭಾಷೆ ಬೆಳವಣಿಗೆ ಕುಂಠಿತವಾಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಭಾಷೆ ಬೆಳವಣಿಗೆ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ತರುವಂತಹ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಗೆಗೆ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ಕ್ನನಡ ಭಾಷೆ ಅಂದ ಇರುವುದೆ ತನ್ನ ಮೂಲ ಸಂಸ್ಕೃತಿಯಲ್ಲಿ ಎಂಬ ಸತ್ಯವನ್ನು ಅರಿಯಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಯಕೀರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯುಎಸಿ ಸಂಚಲಕರಾದ ಡಾ. ರಾಜೀವ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ. ಮಂಜುನಾಥ್ ಮಾತನಾಡಿದರು. ಪ್ರಾಧ್ಯಾಪಕರಾದ ಪೂಪಾ, ಡಿ.ಎಸ್. ಸರಸ್ವತಿ, ಮುನಿಕೃಷ್ಣ, ಕುಮಾರಸ್ವಾಮಿ ಇದ್ದರು. ಇದೇ ವೇಳೆ ಡಾ.ಹೆಚ್.ಡಿ. ಉಮಾಶಂಕರ್ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.