ಆರ್ಥರೈಟೀಸ್ ಅಥವಾ ಸಂಧಿವಾತ ಎಂದು ಕರೆಯಲ್ಪಡುವ ಸಮಸ್ಯೆ ಈಗ ವ್ಯಾಪಕವಾಗಿ ಕಂಡುಬರುತ್ತಿದೆ. ವರದಿಗಳ ಪ್ರಕಾರ 62 ಮಿಲಿಯನ್ ಭಾರತೀಯರು ಸಂಧಿವಾತ ಸಮಸ್ಯೆಯಿಂದ ಭಾಗಶಃ ಅಥವಾ ತೀವ್ರವಾಗಿ ಬಾಧಿತರಾಗಿದ್ದು ಕಷ್ಟಕರ ಜೀವನ ನಡೆಸುತ್ತಿದ್ದಾರೆ.
ಕಿರಿಯ ವಯಸ್ಸಿನಲ್ಲಿ ಜೀವನಶೈಲಿಯಲ್ಲಿ ಮಾಡಿಕೊಂಡ ಸಮಸ್ಯೆಯೇ ಮುಂದೆ ಸಂಧಿವಾತಕ್ಕೆ ಕಾರಣವಾಗುತ್ತದೆ ಎಬುದನ್ನು ಜನರು ಮೊದಲು ಅರಿತುಕೊಳ್ಳಬೇಕು. ಯಾಕೆಂದರೆ ಮೊದಲು ಸಂಧಿವಾತ 50 ರ ಬಳಿಕ ಎಂದು ಹೇಳಲಾಗುತ್ತಿತ್ತು ಆದರೆ ಈಗ ಯುವಕರಲ್ಲೂ ಕಂಡುಬರುತ್ತಿದೆ.ಸಂಧಿವಾತಕ್ಕೆ ಕಾರಣವೇನಿರಬಹುದು?:
ಬಹುತೇಕರಿಗೆ ಮೂಳೆ ರಚನೆಯಲ್ಲಿನ ಕೆಲವು ಸೂಕ್ಷ್ಮ ಅಸಮಾನ್ಯತೆ ಆನುವಂಶಿಕವಾಗಿ ಬಂದಿರುತ್ತದೆ. ಆದರೆ ಈ ಸಂದರ್ಭವನ್ನು ಮತ್ತಷ್ಟು ಹದಗೆಡಿಸುವುದು ನಮ್ಮ ಜೀವನಶೈಲಿ ಹಾಗೂ ದೇಹದ ಭಂಗಿಗಳು. ಇನ್ನು ಕಡೆಗಣಿಸಲ್ಪಟ್ಟ ಕೆಲವು ದೈಹಿಕ ಪೆಟ್ಟು, ನೋವುಗಳು ಸಂಧಿವಾತ ಸಾಧ್ಯತೆ ಹೆಚ್ಚಲು ಕಾರಣವಾಗುತ್ತದೆ.ಸ್ನಾಯುಗಳು ಸಮತೋಲನ ಕಳೆದುಕೊಂಡಾಗ ಗಂಟುಗಳು ಸ್ಥಾನದ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತವೆ.
ಮುಖ್ಯವಾಗಿ ಐಟಿ , ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು ಮುಂದೆ ಬಾಗಿದ ಭಂಗಿಯಲ್ಲಿ ಬಹಳ ಹೊತ್ತು ಕೂರುತ್ತಾರೆ. ಇದರಿಂದ ಹ್ಯಾಮ್ಸ್ಟ್ರಿಂಗ್ ಹಾಗೂ ಮೀನಖಂಡ ಬಿಗಿತ ( ಕಾಲ್ಫ್ ಮಸಲ್ ಬಿಗಿತ) ಸಮಸ್ಯೆ ಉಂಟಾಗುತ್ತದೆ. ಇದೇ ಸಮಸ್ಯೆ ಕ್ರಮೇಣ ಮೊಣಕಾಲು ಆರ್ಥರೈಟೀಸ್‌ಗೆ (ಸಂಧಿವಾತ) ಕಾರಣವಾಗುತ್ತದೆ. ಇದರ ಜತೆಗೆ ಬಹಳ ಸಮಯ ಕಂಪ್ಯೂಟರ್ ಹಾಗೂ ಟಿವಿ ಮುಂದೆ ಕಾಲಕಳೆಯುವುದು ಬೊಜ್ಜು ಕೂಡ ಸಂಧಿವಾತಕ್ಕೆ ಗುರಿಪಡಿಸುತ್ತದೆ.ಬಹಳ ಹೊತ್ತು ತಪ್ಪು ಭಂಗಿಯಲ್ಲಿ ನಿಂತರೂ ಸಮಸ್ಯೆಯೇ:ಸೇಲ್ಸ್ ಎಕ್ಸಿಕ್ಯುಟಿವ್ ಹಾಗೂ ಕಾರ್ಮಿಕರು ಬಹಳ ಹೊತ್ತು ನಿಂತೇ ಕೆಲಸ ಮಾಡುತ್ತಾರೆ. ನಿಲ್ಲುವಾಗ ತಪ್ಪಾದ ಭಂಗಿಯಲ್ಲಿ, ಒಂದೇ ಕಾಲಿನ ಮೇಲೆ ಭಾರ ಹಾಕಿ ನಿಂತು ಕೆಲಸ ಮಾಡುವವರಲ್ಲಿ ಬಲು ಬೇಗ ಗಂಟು ನೋವು, ಸ್ನಾಯು ಸಮಸ್ಯೆ ಕಂಡು ಬರುತ್ತದೆ ಹೀಗಾಗಿ ಸಂಧಿವಾತದ ಸಾಧ್ಯತೆ ಹೆಚ್ಚಾಗಿರುತ್ತದೆ.ಉತ್ತಮ ಜೀವನಶೈಲಿಯಿಂದ ಆರ್ಥರೈಟೀಸ್ ತಡೆಯಿರಿ: ಉತ್ತಮವಾದ ಜೀವನಶೈಲಿ, ಸೂಕ್ತ ವ್ಯಾಯಾಮ ಮೂಲಕ ಸಂಧಿವಾತ ಕಾಡದಂತೆ ತಡೆಯಬಹುದು. ಇಲ್ಲಿವೆ ನೋಡಿ ಮಾರ್ಗಗಳು:ಸಣ್ಣ ಪ್ರಮಾಣದ ವ್ಯಾಯಾಮ ಬೆಸ್ಟ್. ನಾವು ಕುಳಿತುಕೊಳ್ಳುವ ಹಾಗೂ ನಿಲ್ಲುವ ಭಂಗಿ ಸರಿಯಾಗಿರದಿದ್ದರೆ ಮೀನಖಂಡಗಳಲ್ಲಿ ಬಿಗಿತ , ಸ್ನಾಯು ನೋವು ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಕುತ್ತಿಗೆ, ಸೊಂಟ ಹಾಗೂ ಮೊಣಕಾಲಿನ ಹಿಂಬದಿ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ನಿಗಾ ಕೈಗೊಳ್ಳದಿದ್ದರೆ ಟ್ರಾಪೆಜಿಟಿಸ್, ಸ್ಪೊಂಟೈಲಿಟಿಸ್, ಟೆನ್ನಿಸ್ ಎಲ್ಬೊ, ಶೀಘ್ರ ಮೊಣಕಾಲು ಗಂಟು ವಾತಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ಬರಬಾರದು ಎಂದರೆ ಕೆಲಸದ ಮಧ್ಯೆ ಕೊಂಚ ಬ್ರೇಕ್ ತೆಗೆದುಕೊಂಡು ಕತ್ತು, ಬೆನ್ನು, ಭುಜಗಳಿಗೆ, ಕಾಲುಗಳಿಗೆ ಆರಾಮವಾಗುವ ರೀತಿ ಸಣ್ಣ ವ್ಯಾಯಾಮ ಮಾಡಬೇಕು.
ಎರ್ಗೋನೊಮಿಕ್ ವ್ಯವಸ್ಥೆ ಇರಲಿ.ವ್ಯಾಯಾಮದ ಜತೆಗೆ ನೀವು ಕೆಲಸ ಮಾಡುವ ಕೇಂದ್ರದಲ್ಲಿ ಎರ್ಗೋನಾಮಿಕ್ ವ್ಯವಸ್ಥೆ ಇರಲಿ. ಎಂದರೆ ನೀವು ಕೂರುವ ಕುರ್ಚಿ, ನಿಮ್ಮ ಕಣ್ಣು ಹಾಗೂ ಕಂಪ್ಯೂಟರ್ ಸ್ಕ್ರೀನ್ ಗೆ ಸರಿಯಾದ ಹೊಂದಿಕೆ, ಬೆನ್ನು ಮತ್ತು ಸೊಂಟಕ್ಕೆ ಸರಿಯಾಗಿ ಬೆಂಬಲ ನೀಡುವ ಕುಷನ್, ಕಾಲುಗಳು ನೆಲಕ್ಕೆ ಸರಿಯಾಗಿ ತಾಗುವಂತೆ ಎತ್ತರದ ಆಸನ, ಕೈಗೆ ಸರಿಯಾದ ಬೆಂಬಲವಿರುವ ಟೇಬಲ್ ಹೀಗೆ ಬಹಳ ಹೊತ್ತು ಕೂತು ಕೆಲಸ ಮಾಡುವಾಗ ನಿಮ್ಮ ಭಂಗಿ ಹಾಗೂ ಆಸನ ವ್ಯವಸ್ಥೆ ವೈಜ್ಞಾನಿಕವಾಗಿರಲಿ. ಇದರಿಂದ ಸ್ಟ್ರೈನ್ ನಿಂದ ಆಗುವ ಸಮಸ್ಯೆ ತಡೆಯಬಹುದು.
ದೈನಂದಿನ ವ್ಯಾಯಾಮ:ಯೋಗ, ವಾಕಿಂಗ್, ದೇಹಕ್ಕೆ ತಕ್ಕ ತೂಕ ಕೂಡ ಸಂಧಿವಾತದಿಂದ ದೂರ ಉಳಿಯಲು ಬಹಳ ಸಹಕಾರಿ. ದೈಹಿಕವಾಗಿ ಫಿಟ್ ಆಗಿರುವುದು ಆರ್ಥರೈಟೀಸ್ ತಡೆಯಲು ಬೆಸ್ಟ್ .
ಸಂಧಿವಾತ ತೀವ್ರ ಮಟ್ಟ ತಲುಪಿದಾಗ ನಿತ್ಯದ ಕೆಲಸ ಮಾಡುವುದೂ ಕಷ್ಟವಾಗುತ್ತದೆ. ಈ ಹಂತದಲ್ಲಿ ಫಿಸಿಯೋಥೆರಪಿ ಅನಿವಾರ್ಯವಾಗಬಹುದು. ಆದರೆ ಸಣ್ಣಪುಟ್ಟ ಜೀವನಶೈಲಿ ಬದಲಾವಣೆ, ಶಿಸ್ತಿನ ಜತೆ ಸಂಧಿವಾತ ಬರದಂತೆ ತಡೆಯುವುದು ಉತ್ತಮ.......................-ಬಿಶ್ವರಂಜನ್ ದಾಸ್ಬಿಪಿಟಿ, ಎಂಪಿಟಿ (ಒರ್ಥೋ), ಎಫ್ಎಜಿಇ, ಡಿಪ್, ಎಫ್ಎಮ್, ಪಿಎಚ್‌ಡಿ ಸ್ಕಾಲರ್ (ಎನ್ಐಟಿಕೆ)
ಕೆಎಂಸಿ ಆಸ್ಪತ್ರೆ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ ಮಂಗಳೂರು.-ಡಾ. ಯೊಗೇಶ್ ಕಾಮತ್ಎಂಬಿಬಿಎಸ್, ಎಂಎಸ್‌ಡಿ (ಒರ್ಥೋ), ಡಿಎನ್‌ಬಿ, ಎಫ್‌ಸಿಪಿಎಸ್ (ಒರ್ಥೋ), ಎಂಡಿ, ಸಿಸಿಎಸ್‌ಟಿ (ಯುಕೆ).
ಕನ್ಸಲ್ಟೆಂಟ್ ಸ್ಪೆಷಲಿಸ್ಟ್ ಹಿಪ್ ಮತ್ತು ಮೊಣಕಾಲು ಸರ್ಜನ್ಕೆಎಂಸಿ ಆಸ್ಪತ್ರೆ, ಡಾ. ಬಿ ಆರ್ ಅಂಬೇಡ್ಕರ್ ವೃತ್ತ ಮಂಗಳೂರು.