ಕನ್ನಡಪ್ರಭ ವಾರ್ತೆ ಮಂಡ್ಯ
ವಕ್ಫ್ ಮಂಡಳಿ ನಗರದ ಒಳಗೆ ಹಾಗೂ ಸುತ್ತಮುತ್ತ ಕೋಟ್ಯಂತರ ರು. ಬೆಲೆಬಾಳುವ 96.280 ಚದರ ಅಡಿ ಸರ್ಕಾರಿ ಜಾಗವನ್ನು ತನ್ನದೆಂದು ಹೇಳಿಕೊಂಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದರು.ನಗರದಲ್ಲಿ ಬಿಜೆಪಿ ವತಿಯಿಂದ ವಕ್ಫ್ ಬಗ್ಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್‍ಯಕ್ರಮದಲ್ಲಿ ಮಾತನಾಡಿ, ಜಿಲ್ಲಾದ್ಯಂತ ಶಾಲೆ, ದೇವಾಲಯ, ರೈತರ ಜಾಮೀನು, ಐತಿಹಾಸಕ ಸ್ಮಾರಕಗಳು ಸೇರಿದಂತೆ ಸರ್ಕಾರಿ ಜಾಗಗಳು, ಗುಂಡು ತೋಪು, ಮೈಷುಗರ್ ಟೌನ್ ಅಸ್ತಿ ಸೇರಿ ಸೇರಿ ಇತರ ಆಸ್ತಿಗಳ ಮೇಲೆ ವಕ್ಫ್ ತನ್ನ ವಕ್ರ ದೃಷ್ಟಿ ಬೀರಿದೆ ಎಂದು ದೂರಿದರು.
ಮುಸ್ಲಿಮರ ಸುನ್ನಿ ಜಾತಿ ಹೊರತಾದ ಉಳಿದ ಉಪ ಪಂಗಡಗಳಾದ ಶಿಯಾ, ಅಹ್ಮದೀಯಸ್, ಪಸ್ಮಂದಾಸ್ ಮತ್ತು ಬೋಹ್ರಾ ಸೇರಿದಂತೆ ಹಲವವು ಸಮುದಾಯಗಳು ವಿರೋಧಿಸುತ್ತಾ, ಮುಸ್ಲಿಂ ರಾಷ್ಟ್ರಗಳ ಇಲ್ಲದ ಕಾನೂನು ಜಾತ್ಯತೀತ ರಾಷ್ಟ್ರ ಭಾರತದಲ್ಲಿದೆ ಎನ್ನುತ್ತಾರೆ. ಈಗಾಗಲೇ ಟರ್ಕಿ ಮತ್ತು ಟುನೀಶಿಯಾದಂತಹ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ವಕ್ಫ್ ಮಂಡಳಿಗಳನ್ನು ಸಂಪೂರ್ಣ ರದ್ದುಗೊಳಿಸಿದ್ದಾರೆ. ಈ ಕಾನೂನು ಭಾರತದಲ್ಲಿ ಏಕೆ ಎಂದು ಪ್ರಶ್ನಿಸಿದರು.ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಹುನ್ನಾರ ನಡೆದಿದೆ. ವಕ್ಫ್ ಆಸ್ತಿ ನಮೂದು ಮಾಡಿರುವ ಜಾಗದಲ್ಲಿ ಮನೆಗಳಿವೆ. ಅವುಗಳನ್ನು ವಿಭಾಗ ಮಾಡಿಕೊಳ್ಳುವುದು ಕಷ್ಟ. ವಕ್ಫ್ ಅಂತ ನಮೂದಾದ ಆಸ್ತಿ ಮೇಲೆ ಸಾಲ ಪಡೆಯೋದು ಕಷ್ಟ. ಅದನ್ನು ಮಾರಾಟ ಮಾಡೋಕು ಆಗಲ್ಲ. ಇಷ್ಟೆಲ್ಲ ಗೊಂದಲಗಳಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದರು.
ನೋಟಿಸ್ ಮತ್ತು ಕಲಂ 11ರಲ್ಲಿ ನಮೂದು ಆಗಿರೋದು ಗಂಭೀರ ವಿಷಯ. ಜನ ತಮ್ಮ ಪಹಣಿ ಪರಿಶೀಲಿಸಿಕೊಳ್ಳಲಿ. ವಕ್ಫ್ ಕಾನೂನು ಹೆಸರಲ್ಲಿ ದುರ್ಬಳಕೆ ನಡೆದಿದೆ. ಇದರ ವಿರುದ್ಧ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.ಸಚಿವ ಜಮೀರ ಅಹ್ಮದ್ ವಕ್ಫ್ ಆಸ್ತಿಗಳಿಗೆ ಕಾಂಪೌಂಡ್ ಕಟ್ಟಿಸಿ ಹಸಿರು ಬಣ್ಣ ಬಳಿಯುವ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರೋಶನ್ ಬೇಗ್, ಖಮರುಲ್ಲಾ ಇಸ್ಲಾಂ, ಹ್ಯಾರೀಸ್, ರೆಹಮಾನ್ ಖಾನ್, ಸಿ.ಎಂ.ಇಬ್ರಾಹಿಂ, ಹಿಂಡಸಗೇರಿ, ಜಾಫರ್ ಷರೀಫ್ ಹೀಗೆ ಅನೇಕರು ವಕ್ಫ್ ಆಸ್ತಿ ಕಬಳಿಸಿದ ಬಗ್ಗೆ ಅನ್ವರ್ ಮನಪ್ಪಾಡಿ ವರದಿಯಲ್ಲಿ ಉಲ್ಲೇಖವೇ ಇದೆ. ಮೊದಲು ಇವರ ಆಸ್ತಿಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಹಸಿರು ಬಣ್ಣ ಬಳಿಯಲಿ ಒತ್ತಾಯಿಸಿದರು.
ಕರ್ನಾಟಕದಲ್ಲಿ ವಕ್ಫ್ ಮಂಡಳಿ ರೈತರು, ಮಠ, ದೇವಸ್ಥಾನದ ಭೂಮಿ ತನ್ನದೆಂದು ಹೇಳಿ ನೋಟಿಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಶಾಲೆ, ದೇವಾಲಯ, ಸರ್ಕಾರದ ಆಸ್ತಿಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಅಸ್ತಿ ಎಂದು ನಮ್ಮೊಡಗಿರುವುದನ್ನು ರದ್ದುಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಾ ಸಾರ್ವಜನಿಕರಿಗೆ, ಜನ ಜಾಗೃತಿ ಮೂಡಿಸಲಾಯಿತು.ಈ ವೇಳೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್‍ಯದರ್ಶಿ ಜವರೇಗೌಡ, ಮುಖಂಡರಾದ ವಿನೋಭ, ಪ್ರಸನ್ನ, ನಂದೀಶ, ಉಮೇಶ ಸೇರಿದಂತೆ ಹಲವರು ಇದ್ದರು.