ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದಿನ ಜಲಸಂಪನ್ಮೂಲ ಸಚಿವ, ಸಂಸದ ಗೋವಿಂದ ಕಾರಜೋಳ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಮಧ್ಯೆ ಮಾತಿನ ಜಟಾಪಟಿ ಶುಕ್ರವಾರ ನಡೆಯಿತು. ಬಾಗಲಕೋಟೆ ಜಿಲ್ಲಾಡಳಿತ ಭವನ ಮುಂಭಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಾಕ್ ಸಮರ ನಡೆಯಿತು. ಸಂಸದ ಗೋವಿಂದ ಕಾರಜೋಳ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ಆಲಮಟ್ಟಿ ಜಲಾಶಯ ಎತ್ತರಿಸಲು ಎರಡು ಹಂತದ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ನಿರ್ಧಾರ ಮಾಡಿದ್ದೇ ನೀವು ಎಂದು ಕಾರಜೋಳರಿಗೆ ಪ್ರಶ್ನೆಗಳು ತೂರಿಬಂದವು.ಬೊಮ್ಮಾಯಿ ಸರ್ಕಾರದಲ್ಲಿ ನೀವು ಜಲಸಂಪನ್ಮೂಲ ಸಚಿವರಿದ್ದಾಗ ಈ ತೀರ್ಮಾನ ಆಗಿದೆ ಎಂದು ಅಧಿಕಾರಿಗಳು ನಮಗೆ ದಾಖಲೆ ನೀಡಿದ್ದಾರೆಂದು ಸಂತ್ರಸ್ತರು ಆಕ್ರೋಶ ಹೊರಹಾಕಿದರು. ಇದರಿಂದ ಸಿಡಿಮಿಡಿಗೊಂಡ ಕಾರಜೋಳ, ನಮ್ಮ ಸರ್ಕಾರದ ಆದೇಶ ಎಲ್ಲಿದೆ ತೋರಿಸಿ. ಅಂದು ಸಭೆಯಲ್ಲಿ ಅಧಿಕಾರಿಗಳು ಚರ್ಚೆ ಮಾಡಿದ್ದರು ಅದು ಪ್ರೊಸಿಡಿಂಗ್ ಅಷ್ಟೇ. ನಮ್ಮದು ಅದಕ್ಕೆ ಒಪ್ಪಿಗೆ ಇರಲಿಲ್ಲ. ನಮ್ಮ ಸರ್ಕಾರ ಹೋದ ಮೇಲೆ ಅದನ್ನು ಅಧಿಕಾರಿ ತಯಾರಿ ಮಾಡಿದ್ದಾರೆ. ನಾವು ಆ ತೀರ್ಮಾನ ಮಾಡಿದರೆ 524.256 ಮೀ.ವರೆಗೂ ರೈತರಿಗೆ ಪರಿಹಾರ ಕೊಟ್ಟಿದ್ದೇವೆ. ಪರಿಹಾರ ಪಡೆದವರು ಈ ವೇದಿಕೆಯಲ್ಲಿ ಇದ್ದಾರೆ ಕೇಳಿ ನೋಡಿ ಎಂದು ಕಾರಜೋಳ ಹೇಳಿದರು.
ನಮ್ಮ ಸರ್ಕಾರ ಖುಷ್ಕಿ ಭೂಮಿಗೆ ಎಕರೆಗೆ ₹20 ಲಕ್ಷ ಹಾಗೂ ನೀರಾವರಿಗೆ ₹24 ಲಕ್ಷ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವು. ಅದರಂತೆ ಅನೇಕರಿಗೆ ಸ್ವತ: ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಸಂತ್ರಸ್ತರ ಮನೆಗೆ ಹೋಗಿ ಚೆಕ್ ವಿತರಿಸಿದ್ದೇವೆ. ಇದಕ್ಕೆ ಕಾಂಗ್ರೆಸ್ ಉತ್ತರ ಹೇಳಲಿ ಎಂದು ಪ್ರಶ್ನಿಸಿದರು.ಇಲ್ಲಿ ರಾಜಕಾರಣ ಮಾತನಾಡಲು ಬರಬೇಡಿ. ನಾನು ರಾಜಕಾರಣ ಮಾತಾಡಿದ್ರೆ ಕಾಂಗ್ರೆಸ್‌ನವರು ಈ ರಾಜ್ಯದಲ್ಲಿ ಇರಲ್ಲ ಎಂದ ಕಾರಜೋಳ, ಇದಕ್ಕೆ ವೇದಿಕೆ ಮುಂಭಾಗದಲ್ಲಿ ಇದ್ದ ಕೆಲ ಸಂತ್ರಸ್ತರು, ಕಾರಜೋಳ ಮಾತಿಗೆ ತಿರುಗೇಟು ಕೊಟ್ಟರು.
ಪರಿಸ್ಥಿತಿ ತಹಬದಿಗೆ ತರಲು ಧರಣಿ ಹಮ್ಮಿಕೊಂಡಿರುವ ಮುಖಂಡರು ಹರಸಾಹಸ ಪಟ್ಟರು. ಮತ್ತೆ ಮಾತು ಮುಂದುವರೆಸಿದ ಕಾರಜೋಳ ಅವರು, ಈಗ ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕರೆಸಿ ಪರಿಹಾರ ಕೊಡಿಸಲಿ ನೋಡೋಣ ಎಂದು ಸವಾಲು ಹಾಕಿದರು.ಕಾಂಗ್ರೆಸ್‌ನವರು ಎಕರೆಗೆ ₹40 ಲಕ್ಷ ಪರಿಹಾರ ಕೊಡಿಸುತ್ತೇವೆ ಎಂದಿದ್ದರಲ್ಲ. ಈಗ ಅಷ್ಟು ಪರಿಹಾರ ಕೊಡಿಸಲಿ. ನಾವೇ ಇದೇ ವೇದಿಕೆಯಲ್ಲಿ ಅವರಿಗೆ ಬಂಗಾರದ ಕಿರೀಟ ಹಾಕಿ ಸನ್ಮಾನಿಸುತ್ತೇವೆ ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ವೀರಣ್ಣ ಚರಂತಿಮಠ ವೇದಿಕೆ ಮೇಲೆ ಇದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿರುವ ಹೋರಾಟ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.