ನೇತ್ರಾವತಿಗೆ ನಿರಂತರ ಸೇರುವ ತ್ಯಾಜ್ಯ: ಉಪ್ಪಿನಂಗಡಿಗೆ ಜ್ವರ ಕಾಟ

KannadaprabhaNewsNetwork | Published : Mar 13, 2025 12:47 AM

ಸಾರಾಂಶ

ಉಪ್ಪಿನಂಗಡಿ ಪಟ್ಟಣದಲ್ಲಿ ಒಂದೆಡೆ ನೇತ್ರಾವತಿ ಹಿನ್ನೀರು ನಿಂತಂತಿದ್ದು, ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದು ನದಿ ಸೇರುತ್ತಿರುವ ದೃಶ್ಯಾವಳಿಗಳು ಕಳವಳ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಚರಂಡಿಗಳಲ್ಲಿ ಅಲ್ಲಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ನೀರು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿವೆ. ಇದರಿಂದ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ.

ವಿಶೇಷ ವರದಿ

ಕನ್ನಡ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿನ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ ಹಿನ್ನೀರು ನಿಲ್ಲಿಸಲಾದ ಬಳಿಕ ಗ್ರಾಮದ ಎಲ್ಲಾ ದಿಕ್ಕುಗಳಿಂದಲೂ ತ್ಯಾಜ್ಯ ನೀರು ನದಿಯ ಒಡಲನ್ನು ಸೇರುತ್ತಿರುವ ನಡುವೆ ಉಪ್ಪಿನಂಗಡಿಯಲ್ಲಿ ಅನಾರೋಗ್ಯಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳವಳ ಮೂಡಿಸಿದೆ.

ಒಂದೆಡೆ ನೇತ್ರಾವತಿ ಹಿನ್ನೀರು ನಿಂತಂತಿದ್ದು, ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದು ನದಿ ಸೇರುತ್ತಿರುವ ದೃಶ್ಯಾವಳಿಗಳು ಕಳವಳ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಚರಂಡಿಗಳಲ್ಲಿ ಅಲ್ಲಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ನೀರು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿವೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ರಾಜಕಾಲುವೆಯಂತ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ಹೆದ್ದಾರಿ ಪಾರ್ಶ್ವದಲ್ಲಿ ದಾಸ್ತಾನುಗೊಂಡಿರುವುದು ಉಪ್ಪಿನಂಗಡಿಯನ್ನು ಅಕ್ಷರಷ ಹೈರಾಣವಾಗಿಸಿದೆ.

ಜನತೆಗೆ ಡೆಂಘೀ ಆತಂಕ:

ಉಪ್ಪಿನಂಗಡಿಯ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಪರಿಸರದಲ್ಲಿ ಹಲವಾರು ಮಂದಿ ಜ್ವರಪೀಡಿತರಾಗಿದ್ದು, ಶಂಕಿತ ಡೆಂಘೀ ರೋಗದ ಲಕ್ಷಣಗಳಿವೆ. ಆದರೆ ಆರೋಗ್ಯ ಇಲಾಖೆಯ ಪ್ರಕಾರ ಫೆ.12ರಿಂದ ಉಪ್ಪಿನಂಗಡಿಯಲ್ಲಿ ಯಾವುದೇ ಡೆಂಘೀ ಪ್ರಕರಣ ಪತ್ತೆಯಾಗಿಲ್ಲ. ಆದರೆ ಉಪ್ಪಿನಂಗಡಿಯಲ್ಲಿ ವ್ಯಾಪಾರಿಗಳನ್ನು ಒಳಗೊಂಡಂತೆ ಹಲವಾರು ಮಂದಿ ಜ್ವರ ಪೀಡಿತರಾಗಿ ವಾರಗಟ್ಟಲೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯಗಳು ಮಾತ್ರ ಕಂಡು ಬಂದಿದೆ. ............................ಉಪ್ಪಿನಂಗಡಿಯಲ್ಲಿ ಈ ವರ್ಷ ಒಟ್ಟು ೩ ಡೆಂಘೀ ಪ್ರಕರಣ ದಾಖಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ನದಿಯಲ್ಲಿ ನೀರು ನಿಂತಿದ್ದರೂ, ನದಿಯಲ್ಲಿನ ಮೀನುಗಳಿಂದಾಗಿ ಸೊಳ್ಳೆ ಉತ್ಪಾದನೆ ಅವಕಾಶವಿಲ್ಲ. ಆದರೆ ಪೇಟೆಯ ಹಲವೆಡೆ ತ್ಯಾಜ್ಯ ನೀರು ಸಂಗ್ರಹಣೆಗೊಂಡು ಅಲ್ಲಿ ಸೊಳ್ಳೆ ಉತ್ಪಾದನೆಯಾದರೆ ರೋಗ ರುಜಿನಗಳ ಸಾಧ್ಯತೆ ಹೆಚ್ಚು.

-ಡಾ.ಕೃಷ್ಣಾನಂದ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ........................ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಯಲ್ಲಿ ಡೆಂಘೀ ಪ್ರಕರಣಗಳು ಕಂಡು ಬಂದರೆ ತಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಡೆಂಘೀ ಪ್ರಕರಣ ಹೆಚ್ಚಿದೆ ಎಂದರೆ ಒಪ್ಪಲಾಗದು. ಯಾವುದೇ ಡೆಂಘೀ ಪ್ರಕರಣ ಹೊಸದಾಗಿ ದಾಖಲಾಗಿಲ್ಲ.

-ಡಾ.ದೀಪಕ್‌ ರೈ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ. ...................ಹರಿದು ಹೋಗುವ ಚರಂಡಿಯ ತ್ಯಾಜ್ಯ ನೀರು ನದಿಯಲ್ಲಿ ನಿಂತ ನೀರಿನೊಂದಿಗೆ ಬೆರೆತು ದುರ್ನಾತಭರಿತವಾಗಿದೆ. ಎಲ್ಲೆಲ್ಲಾ ಚರಂಡಿ ನೀರು ಸರಾಗವಾಗಿ ಹರಿಯದೇ ಇದೆಯೋ ಅಲ್ಲೆಲ್ಲಾ ಸೊಳ್ಳೆ ಉತ್ಪಾದನೆಯಾಗಿ ಕೆಟ್ಟ ವಾಸನೆ ಪ್ರಸಹರಿಸುತ್ತಿದೆ. ಇದೆಲ್ಲದರ ಫಲವಾಗಿ ಪರಿಸರದಲ್ಲಿ ರೋಗ ಪಿಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

-ಕೈಲಾರ್‌ ರಾಜಗೋಪಾಲ ಭಟ್‌, ನೆಲ ಜಲ ಸಂರಕ್ಷಣ ಸಮಿತಿ ಅಧ್ಯಕ್ಷ.

Share this article