ಕನ್ನಡಪ್ರಭ ವಾರ್ತೆ ಬೆಂಗಳೂರು
ಇಷ್ಟಾರ್ಥ ಪೂರೈಸುವ ದೇವಸ್ಥಾನಗಳಿಗೂ ನೀರಿನ ಕೊರತೆಯ ಬಿಸಿ ತಟ್ಟುತ್ತಿದ್ದು, ಕಡಿಮೆ ಪ್ರಮಾಣದ ನೀರಿನ ಬಳಕೆಗೆ ದೇವಸ್ಥಾನಗಳು ಹಲವು ಕ್ರಮ ವಹಿಸುತ್ತಿವೆ. ನಗರದ ಹಲವು ದೇಗುಲಗಳಲ್ಲಿ ಪೂಜೆ, ಅನ್ನಸಂತರ್ಪಣೆಯಿಂದ ಹಿಡಿದು ಭಕ್ತರು ಕೈಕಾಲು ತೊಳೆಯಲು ಸಹ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.ಉದ್ಯಾನನಗರಿಯಲ್ಲಿ ದೇವಸ್ಥಾನಗಳು ಈಗ ಕಡಿಮೆ ನೀರಿನಲ್ಲಿ ದೈನಂದಿನ ಪೂಜಾ ಕೈಂಕರ್ಯ, ಪ್ರಸಾದ ವಿತರಣೆ ನಿರ್ವಹಿಸಲು ಕಸರತ್ತು ಮಾಡುತ್ತಿವೆ. ಹೀಗಾಗಿ ಪ್ರತಿನಿತ್ಯ ನೂರಾರು, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ದೇವಸ್ಥಾನಗಳಿಗೆ ಉಚಿತವಾಗಿ ಟ್ಯಾಂಕರ್ ನೀರು ಪೂರೈಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಅರ್ಚಕರ ಸಂಘ ಮುಂದಾಗಿದೆ.
ಮಲ್ಲೇಶ್ವರದ ಸುತ್ತಮುತ್ತ ದೇವಸ್ಥಾನ ಸೇರಿದಂತೆ ಮಹಾಲಕ್ಷ್ಮಿ ಲೇಔಟ್‌ನ ದೊಡ್ಡಾಂಜನೇಯ ದೇವಸ್ಥಾನಕ್ಕೆ ಸಮಸ್ಯೆಯಾಗಿಲ್ಲ. ಕೆಲವೆಡೆ ಬೋರ್‌ವೆಲ್ ಬತ್ತಿದ್ದರೆ, ಇನ್ನು ಕೆಲವೆಡೆ ಒಂದು ಇಂಚು ಸಣ್ಣದಾಗಿ ನೀರು ಬರುತ್ತಿದೆ. ಆದರೆ, ಇದೇ ಪರಿಸ್ಥಿತಿ ಮುಂದುವರಿದರೆ ಕಷ್ಟವಾಗಲಿದೆ.ಅರ್ಚಕರ ಸಂಘದ ಕೆಎಸ್ಎನ್ ದೀಕ್ಷಿತ್ ಅವರು, ನಗರದ ಹಲವು ದೇವಸ್ಥಾನಗಳಲ್ಲಿ ನೀರಿನ ಕೊರತೆ ಎದುರಾಗಿದೆ. ದೇವರಿಗೆ ಹಾಲು, ಮೊಸರು ಸೇರಿ ಪಂಚಾಮೃತ ಅಭಿಷೇಕ ಮಾಡಿದಲ್ಲಿ ಹೆಚ್ಚಿನ ನೀರು ಖರ್ಚಾಗುತ್ತಿದೆ. ಇದಕ್ಕೆ ನಿಯಂತ್ರಣ ಮಾಡುತ್ತಿದ್ದೇವೆ. ಪ್ರಸಾದ ತಯಾರಿಕೆಗೆ ಫಿಲ್ಟರ್ ನೀರನ್ನು ತರಿಸಿಕೊಳ್ಳುತ್ತಿವೆ. ಉಳಿದ ಬಳಕೆಗೆ ಟ್ಯಾಂಕರ್ ನೀರನ್ನು ಬಳಸುತ್ತಿದ್ದೇವೆ. ಕೋಟೆ ವೆಂಕಟೇಶ್ವರ ದೇಗುಲ ಸೇರಿ ಕೆಲವೆಡೆ ಪ್ರಸಾದ ತಯಾರಿಸಿಕೊಳ್ಳಲೂ ಸಮಸ್ಯೆಯಾಗಿದೆ ಎಂದರು.
ಬನಶಂಕರಿ ದೇವಸ್ಥಾನದ ಇಒ ಬಿ.ಲಕ್ಷ್ಮಿ ಅವರು ಬೆಳಗ್ಗೆ ಭಕ್ತರಿಗೆ ಸ್ಟೀಲ್ ಪ್ಲೇಟ್ ಬದಲು ದೊನ್ನೆಯಲ್ಲಿ ಪ್ರಸಾದ ನೀಡುತ್ತಿದ್ದೇವೆ. ಭಕ್ತರು ಕೈಕಾಲು ತೊಳೆಯುವ ನಲ್ಲಿಗೆ ಏರಿಯೇಟರ್ ಟ್ಯಾಪ್ ಹಾಕಿಸಿ ಕಡಿಮೆ ನೀರು ಖರ್ಚಾಗುವಂತೆ ಮಾಡಿದ್ದೇವೆ. ಸಾಧಾರಣ ದಿನಗಳಲ್ಲಿ 1 ಸಾವಿರ, ಮಂಗಳವಾರ 5 ಸಾವಿರ, ಶುಕ್ರವಾರ 8 ಸಾವಿರದವರೆಗೆ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿಯೂ ನೀರುಳಿಸಲು ಪ್ಲೇಟ್ ತೊಳೆಯಲು ಡಿಶ್ ವಾಶರ್ ಖರೀದಿಗೆ ಮುಂದಾಗಿದ್ದೇವೆ. ದೇವಸ್ಥಾನಕ್ಕೆ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ ಎಂದರು.ಕೆ.ಆರ್.ಮಾರ್ಕೆಟ್ ಗಣಪತಿ ದೇವಸ್ಥಾನದಲ್ಲೂ ನೀರಿನ ಸಮಸ್ಯೆಯಾಗಿದ್ದು, ಟ್ಯಾಂಕರ್ ನೀರು ತರಿಸಿಕೊಳ್ಳಲಾಗುತ್ತಿದೆ. ಮಲ್ಲೇಶ್ವರದ ದೊಡ್ಡಗಣಪತಿ ದೇವಸ್ಥಾನದ ವಿಶ್ವನಾಥ್ ಅವರು, ದೇವಸ್ಥಾನದ ಬೋರ್‌ಗಳಲ್ಲಿ ಸಣ್ಣದಾಗಿ ನೀರು ಬರುತ್ತಿದೆ. ಇದ್ದುದರಲ್ಲೇ ನಿರ್ವಹಿಸುತ್ತಿದ್ದೇವೆ. ಇನ್ನೆರಡು ತಿಂಗಳು ಕಳೆಯುವುದು ಕಷ್ಟವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇವಸ್ಥಾನಗಳಲ್ಲಿ ನೀರಿನ ಕೊರತೆಯಾಗಿದೆ. ಹೆಚ್ಚಿನ ಜನರಿಗೆ ಪ್ರಸಾದ ವಿತರಿಸುವೆಡೆ ಉಚಿತವಾಗಿ ಟ್ಯಾಂಕರ್ ನೀರು ಒದಗಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿಕೊಳ್ಳಲಿದ್ದೇವೆ.-ಕೆಎಸ್‌ಎನ್ ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಅರ್ಚಕರ, ಆಗಮಿಕರ, ಉಪಾದಿವಂತರ ಒಕ್ಕೂಟ.