ಗದ್ದೆಗಳಲ್ಲಿ ಎಲ್ಲೆಲ್ಲೂ ನೀರು: ರೈತರ ಹೊಟ್ಟೆಗೆ ತಣ್ಣೀರು?

KannadaprabhaNewsNetwork | Published : Jul 8, 2024 12:32 AM

ಸಾರಾಂಶ

ಕೃಷಿ ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಈಗಷ್ಟೇ ನಾಟಿ ಮಾಡಿರುವ ಭತ್ತದ ಸಸಿಗಳು ಕೊಳೆತು ಹೋಗಿ ರೈತರು ಅಪಾರ ನಷ್ಟವನ್ನು ಎದುರಿಸುವಂತಾಗಿದೆ. ಕೃಷಿ ಗದ್ದೆಗಳಲ್ಲದೇ ಕೃಷಿ ತೋಟಗಳಲ್ಲೂ ನೀರು ತುಂಬಿಕೊಂಡಿವೆ.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರ

ಕಳೆದ ಎರಡು ದಿನಗಳ ಹಿಂದೆ ಆರಂಭಗೊಂಡು ಬಿಟ್ಟುಬಿಡದೆ ಸುರಿಯುತ್ತಿರುವ ಪುನರ್ವಸು ಮಳೆ ರೈತರನ್ನು ಆತಂಕಕ್ಕೀಡು ಮಾಡಿದೆ.

ಭಾನುವಾರ ಬೆಳಗ್ಗೆಯಿಂದ ಬಿಡದೇ ಸುರಿಯುತ್ತಿರುವ ಮಳೆ ರಾತ್ರಿಯ ತನಕವೂ ಸುರಿದಿದೆ. ಕೃಷಿ ಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಈಗಷ್ಟೇ ನಾಟಿ ಮಾಡಿರುವ ಭತ್ತದ ಸಸಿಗಳು ಕೊಳೆತು ಹೋಗಿ ರೈತರು ಅಪಾರ ನಷ್ಟವನ್ನು ಎದುರಿಸುವಂತಾಗಿದೆ. ಕೃಷಿ ಗದ್ದೆಗಳಲ್ಲದೇ ಕೃಷಿ ತೋಟಗಳಲ್ಲೂ ನೀರು ತುಂಬಿಕೊಂಡಿವೆ.ಆರಿದ್ರಾ ಮಳೆ ಕೊನೆಯ ಕ್ಷಣದಲ್ಲಿ ತನ್ನ ರೌದ್ರಾವತಾರವನ್ನು ತಾಳಿದ ಪರಿಣಾಮ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ತಗ್ಗು ಪ್ರದೇಶಗಳು ನೆರೆ ನೀರಿನಿಂದಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಇದೀಗ ಆರಿದ್ರಾ ಮಳೆ ಮುಗಿದು ಪುನರ್ವಸು ಆರಂಭಗೊಂಡಿದ್ದು, ಇದೂ ಕೂಡ ದಿನವಿಡೀ ಸುರಿದ ಪರಿಣಾಮ ಕೃಷಿ ಗದ್ದೆಗಳಲ್ಲಿ ನೀರು ಹಾಗೆಯೇ ತುಂಬಿಕೊಂಡಿದೆ.

ಕೃಷಿಕರ ಹೊಟ್ಟೆ ತುಂಬಿಸುವ ಬೆಳೆ:

ಕರಾವಳಿ ಭಾಗದ ಕೃಷಿಕರ ಪ್ರಮುಖ ಬೆಳೆ ಭತ್ತದ ಕೃಷಿ. ಮಳೆಗಾಲದ ಆರಂಭದಲ್ಲಿ ನಾಟಿ ಕಾರ್ಯಕ್ಕೆ ತಯಾರಿ ನಡೆಸುವ ಇಲ್ಲಿನ ಕೃಷಿಕರು ಇದೇ ಕೃಷಿಯನ್ನು ನಂಬಿಕೊಂಡೇ ಜೀವನ ಸಾಗಿಸುತ್ತಾರೆ. ನಾಲ್ಕೈದು ತಿಂಗಳ ಅವಧಿಯಲ್ಲಿ ನಡೆಸಿದ ಕೃಷಿ ರೈತರ ಜೇಬು ತುಂಬಿಸುವ ಜೊತೆಗೆ ವರ್ಷವಿಡೀ ಅವರ ಕುಟುಂಬದ ಹೊಟ್ಟೆಯನ್ನೂ ತುಂಬಿಸುತ್ತದೆ.ಕೊಳೆತು ನಾಶವಾಗುವ ಭೀತಿ:

ಈಗಾಗಲೇ ಅಲ್ಪಸ್ವಲ್ಪ ಭತ್ತದ ಸಸಿಗಳು ಕೊಳೆಯಲಾರಂಭಿಸಿದ್ದು, ಇನ್ನೆರಡು ದಿನಗಳಲ್ಲಿ ಇದೇ ರೀತಿ ಧಾರಾಕಾರವಾಗಿ ಮಳೆ ಸುರಿದರೆ ನಾಟಿ ಮಾಡಿರುವ ಭತ್ತದ ಸಸಿಗಳೆಲ್ಲವೂ ಕೊಳೆತು ಹೋಗುವ ಭೀತಿ ಎದುರಾಗಿದೆ. ಭಿತ್ತನೆ ಮಾದರಿಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ಕಿತ್ತು ಹೋಗಲಾರಂಭಿಸಿವೆ. ಮರು ನಾಟಿ ಮಾಡಲು ಭತ್ತದ ಸಸಿಗಳ ಕೊರೆತೆಯೂ ಇದ್ದು, ಇದೀಗ ರೈತರು ಕಂಗಾಲಾಗಿದ್ದಾರೆ.............ಮಳೆ ಹೀಗೆಯೇ ಮುಂದುವರಿದರೆ ಬಿತ್ತನೆ ಮಾದರಿಯಲ್ಲಿ ನಾಟಿ ಮಾಡಿರುವ ನೇಜಿಗಳು ನೀರಿನೊಂದಿಗೆ ಕಿತ್ತು ಹೋಗಲಿವೆ. ಕಳೆದೊಂದು ತಿಂಗಳು ಮಳೆಯಲ್ಲೇ ನೆನೆದು ನೇಜಿ ಪೋಷಿಸಿಕೊಂಡು ಬಂದ ನಮ್ಮೆಲ್ಲರ ಶ್ರಮ ಮಳೆ ನೀರಿನಲ್ಲೇ ಕೊಚ್ಚಿ ಹೋಗಲಿವೆ. । ವಿಘ್ನೇಶ್ ದೇವಾಡಿಗ, ಕೃಷಿಕ, ಹೆಮ್ಮಾಡಿ.

-----------

ಹಡಿಲು ಭೂಮಿಯನ್ನು ಗೇಣಿ ಪಡೆದು ಈ ಬಾರಿ 45 ಎಕರೆಯಷ್ಟು ಭತ್ತದ ಕೃಷಿಯನ್ನು ಮಾಡಿದ್ದು, ಎಲ್ಲವೂ ಸಾಲು ನಾಟಿ ಮಾದರಿಯಲ್ಲೇ ನಾಟಿ ಕಾರ್ಯ ನಡೆಸಿದ್ದೇನೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗದ ಕಾರಣ ಗದ್ದೆಯಲ್ಲಿ ಹಾಗೆಯೇ ನೀರು ಉಳಿದುಕೊಂಡಿದೆ. ಕೆಲ ಗದ್ದೆಗಳಲ್ಲಿ ನೀರು ಇಳಿದ ಬಳಿಕ ಮರು ನಾಟಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

। ಗಂಗಾಧರ ಪೂಜಾರಿ, ಕೋಡಿ, ಪ್ರಗತಿಪರ ಕೃಷಿಕ.

Share this article