ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆತುಂಗಭದ್ರಾ ಜಲಾಶಯದಲ್ಲಿ ಈಗ ಬರೀ 6.846 ಟಿಎಂಸಿಯಷ್ಟು ನೀರಿದ್ದು, ಬೇಸಿಗೆಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುವ ಲಕ್ಷಣ ಗೋಚರಿಸಿದೆ. ಹಾಗಾಗಿ ಈಗಿರುವ ನೀರನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ.ತುಂಗಭದ್ರಾ ಜಲಾಶಯದಲ್ಲಿ 105.788 ಟಿಎಂಸಿಯಷ್ಟು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಲಾಶಯದ ಒಳ ಹರಿವು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಹಾಗಾಗಿ ಜಲಾಶಯದಲ್ಲಿ ಈಗ 6.846 ಟಿಎಂಸಿಯಷ್ಟು ಮಾತ್ರ ನೀರಿದೆ. ಜಲಾಶಯದಲ್ಲಿ ನೀರು ಪಾತಾಳಕ್ಕೆ ಇಳಿದಿರುವುದರಿಂದ ಅಂತರ್ಜಲಮಟ್ಟ ಕುಸಿಯುವ ಸಾಧ್ಯತೆ ಇದೆ.ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ಜಲಾಶಯಕ್ಕೆ ಒಟ್ಟು 114.58 ಟಿಎಂಸಿ ನೀರು ಹರಿದು ಬಂದಿದೆ. ಕಳೆದ ವರ್ಷ 602.94 ಟಿಎಂಸಿಯಷ್ಟು ನೀರು ಹರಿದು ಬಂದಿತ್ತು. ಜಲಾಶಯದ ಇತಿಹಾಸದಲ್ಲಿಯೇ 1961ರ ಬಳಿಕ ಕಳೆದ ವರ್ಷ ಎರಡನೇ ಬಾರಿಗೆ ಅತಿ ಹೆಚ್ಚಿನ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಇದರಲ್ಲಿ 400 ಟಿಎಂಸಿಗಿಂತ ಹೆಚ್ಚಿನ ನೀರು ನದಿಗೆ ಹರಿಸಲಾಗಿತ್ತು. ಆದರೆ, ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಈಗ ಬರೀ 6.846 ಟಿಎಂಸಿ ನೀರು ಉಳಿದಿದೆ.ನಾಲ್ಕು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಈ ಬಾರಿ ಎರಡನೇ ಬೆಳೆಗೆ ನೀರು ಇಲ್ಲದಂತಾಗಿದೆ. ಹಾಗಾಗಿ, ರೈತರು ಎರಡನೆ ಬೆಳೆ ಬೆಳೆದಿಲ್ಲ. ಈಗ ಈ ನಾಲ್ಕು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಈಗ ಲಭ್ಯವಿರುವ ನೀರನ್ನು ಲೆಕ್ಕಾಚಾರದೊಂದಿಗೆ ಖರ್ಚು ಮಾಡಬೇಕಿದೆ.ಆಂಧ್ರಪ್ರದೇಶ, ತೆಲಂಗಾಣ ರಾಜ್ಯಕ್ಕೂ ತುಂಗಭದ್ರಾ ಜಲಾಶಯವೇ ಆಧಾರ ಆಗಿದೆ. ತುಂಗಭದ್ರಾ ಜಲಾಶಯದ ನೀರು ಆವಿಯಾಗುವ ಹಿನ್ನೆಲೆಯಲ್ಲಿ ಉಳಿದಿರುವ 6.846 ಟಿಎಂಸಿಯಷ್ಟು ನೀರಿನಲ್ಲಿ 2 ಟಿಎಂಸಿಯಷ್ಟು ನೀರು ಡೆಡ್ ಸ್ಟೋರೇಜ್ ಆಗಿರಲಿದೆ. ಆಂಧ್ರಪ್ರದೇಶ ತನ್ನ ಪಾಲಿನ ನೀರನ್ನು ಕೂಡ ಉಳಿಸಿಕೊಂಡಿದೆ. ಇನ್ನೂ ಕರ್ನಾಟಕಕ್ಕೂ ಈ ನೀರಿನಲ್ಲಿ ಪಾಲಿದೆ. ಹಾಗಾಗಿ ಈಗ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹೊತ್ತಿನಲ್ಲಿ ಜಿಪುಣತನದಿಂದ ನೀರು ಖರ್ಚು ಮಾಡಿದರೆ ಮಾತ್ರ ಬೇಸಿಗೆಯಲ್ಲಿ ಅದರಲ್ಲೂ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.ಕಳೆದ ವರ್ಷ ಜಲಾಶಯದಲ್ಲಿ 20 ಟಿಎಂಸಿ ನೀರಿತ್ತು:ಕಳೆದ ವರ್ಷದ ಮಾರ್ಚ್ 12ರಂದು ತುಂಗಭದ್ರಾ ಜಲಾಶಯದಲ್ಲಿ 20.851 ಟಿಎಂಸಿಯಷ್ಟು ನೀರಿತ್ತು. ಈ ವರ್ಷ 6.846 ಟಿಎಂಸಿ ಮಾತ್ರ ನೀರಿದೆ. ಕಳೆದ ಹತ್ತು ವರ್ಷಗಳ ಸರಾಸರಿ ತೆಗೆದುಕೊಂಡರೆ ಜಲಾಶಯದಲ್ಲಿ 15.317 ಟಿಎಂಸಿಯಷ್ಟು ನೀರಿತ್ತು. ಈ ಬಾರಿ ಜಲಾಶಯದಲ್ಲಿ ತೀರಾ ಕಡಿಮೆ ನೀರಿದೆ. ಹಾಗಾಗಿ ಮೀನು ಸೇರಿದಂತೆ ಜಲಚರ ಜೀವಿಗಳಿಗೂ ಸಮಸ್ಯೆಯಾಗುತ್ತಿದೆ. ಇನ್ನೂ ಬೇಸಿಗೆಯಲ್ಲಿ ನದಿಗೂ ನೀರು ಹರಿಸಿ ಜೀವ ವೈವಿಧ್ಯ ಕಾಪಾಡಬೇಕಿದೆ.ಆಂಧ್ರಪ್ರದೇಶ ತನ್ನ ಪಾಲಿನ ನೀರನ್ನು ನದಿ ಮೂಲಕ ತೆಗೆದುಕೊಂಡರೆ ನದಿಯಲ್ಲಿನ ಮೀನು, ಮೊಸಳೆ, ನೀರು ನಾಯಿ ಸೇರಿದಂತೆ ಜಲಚರ ಜೀವಿಗಳು ಹಾಗೂ ಜೀವ ವೈವಿಧ್ಯಕ್ಕೂ ಅನುಕೂಲ ಆಗಲಿದೆ.ಕ್ರಮ ವಹಿಸಲಿಈ ಬಾರಿ ಭೀಕರ ಬರಗಾಲದಿಂದ ಜಲಾಶಯದಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಕೊರತೆ ಉಂಟಾಗಿದೆ. ಈಗ ಜಲಾಶಯದಲ್ಲಿ 6.846 ಟಿಎಂಸಿಯಷ್ಟು ಮಾತ್ರ ನೀರಿದೆ. ಹಾಗಾಗಿ ಏಪ್ರಿಲ್- ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಕಾರ್ಖಾನೆಗಳಿಗೆ ನೀರು ಒದಗಿಸದೇ ಕ್ರಮವಹಿಸಬೇಕು. ಈಗಾಗಲೇ ಹೊಸಪೇಟೆ ಭಾಗದಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೂ ನೀರು ಒದಗಿಸಬೇಕು. ಕೃಷಿಕರ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಹೇಳಿದ್ದಾರೆ.